ಸಕಲೇಶಪುರ: ‘ಅವಮಾನವನ್ನು ಶಾಂತಿಯುತವಾಗಿ ನಿರ್ವಹಿಸುವ ಶಕ್ತಿಯೇ ಮಾನವೀಯ ಸಂಸ್ಕೃತಿಯ ಮೌಲ್ಯ. ಪ್ರತಿಕ್ರಿಯೆ ನೀಡುವ ತೀವ್ರತೆಗಿಂತ ತಾಳ್ಮೆಯಿಂದ ಪ್ರತಿಕ್ರಿಯಿಸದಿರುವ ಪ್ರಜ್ಞೆಯೆ ಹೆಚ್ಚು ಶ್ರೇಷ್ಠ’ ಎಂದು ಸಾಹಿತಿ ಹಾಗೂ ರಂಗಕರ್ಮಿ ಪ್ರಸಾದ್ ರಕ್ಷಿದಿ ಅಭಿಪ್ರಾಯಪಟ್ಟರು.
ಪಟ್ಟಣದ ಲಯನ್ಸ್ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್, ಕಾರ್ಯನಿರತ ಪತ್ರಕರ್ತರ ಸಂಘ, ಡ್ರಗ್ಸ್ ಮುಕ್ತ ಸಕಲೇಶಪುರ ಆಂದೋಲನ ಹಾಗೂ ವಿವಿಧ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ಲೇಖಕ ಮಲ್ನಾಡ್ ಮೆಹಬೂಬ್ ಅವರ ‘ಮಲ್ನಾಡ್ ಮನಸ್ಸು’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಕೃತಿ ಬಗ್ಗೆ ಮಾತನಾಡಿದರು.
‘ಸಾಮಾಜಿಕವಾಗಿ ಅವಮಾನಗಳು ಎದುರಾಗುವುದು ಸಹಜ. ಆದರೆ, ಅವಮಾನವನ್ನು ಜೀರ್ಣಿಸಿಕೊಳ್ಳುವ ಶಕ್ತಿ ಆತ್ಮಚಿಂತನೆಯಿಂದ ಬರಬೇಕು. ಅದನ್ನು ಮೀರಿ ಬದುಕಬೇಕು’ ಎಂದರು.
‘ಮೆಹಬೂಬ್ ಅವರ ಬರಹಗಳು ಈ ಒಳನೋಟಕ್ಕೆ ದಾರಿ ಮಾಡಿಕೊಡುವ ಸಾಮರ್ಥ್ಯ ಹೊಂದಿವೆ. ಅವರು ಬದುಕಿನ ನೋವು, ಧೈರ್ಯ, ಮತ್ತು ನಿರಾಳತೆಯನ್ನು ಅಕ್ಷರ ರೂಪದಲ್ಲಿ ಸೆರೆಹಿಡಿದಿದ್ದಾರೆ’ ಎಂದರು.
‘ಡ್ರಗ್ಸ್ ಮುಕ್ತ ಸಮಾಜ ನಿರ್ಮಾಣಕ್ಕೆ ಸಮಾಜದ ಪಾತ್ರ ಬಗ್ಗೆ ಪರಿಣಾಮಕಾರಿ ಲೇಖನಗಳಿವೆ. ಬದುಕಿನ ಗಂಭೀರ ಸ್ಥಿತಿಯಲ್ಲಿ ತೆಗೆದುಕೊಳ್ಳಬೇಕಾದ ಅನಿವಾರ್ಯ ನಿರ್ಣಯಗಳ ಬಗ್ಗೆ, ಸಾಹಿತಿಗಳ ಪರಿಚಯ, ಓದುವ, ಬರೆಯುವ ಮತ್ತು ಸಮಾಜದೊಂದಿಗೆ ಬೆರೆತು ಬಾಳುವ ಪ್ರಾಮುಖ್ಯತೆಯ ಬಗ್ಗೆ ಲೇಖನಗಳು ಉತ್ತಮ’ ಎಂದರು.
ಡ್ರಗ್ಸ್ ಮುಕ್ತ ಭಾರತ ಆಂದೋಲನದ ಪ್ರಮುಖರಾದ ಎಚ್.ಎಂ. ವಿಶ್ವನಾಥ್ ಮಾತನಾಡಿ, ‘ನೋವು-ನಲಿವಿನ ಸಂಗ್ರಹವಾದ ಈ ಪುಸ್ತಕ ತಾತ್ವಿಕತೆಗೆ ತಾಕಲಾಡುತ್ತದೆ. ಸಮಾಜವನ್ನು ಇಂದು ಡ್ರಗ್ಸ್ ಕಾಡುತ್ತಿದೆ. ಪ್ರಮುಖವಾಗಿ ಯುವಜನಾಂಗವನ್ನು ಇದರಿಂದ ಮುಕ್ತಗೊಳಿಸಲು ಸಮಾಜ ಒಂದಾಗಬೇಕು. ಆಗಸ್ಟ್ 21ರಂದು ಸಕಲೇಶಪುರದಲ್ಲಿ ಸಮಾವೇಶ ನಡೆಯಲಿದೆ’ ಎಂದರು.
ಸಾಮಾಜಿಕ ಕಾರ್ಯಕರ್ತ ಯಡೇಹಳ್ಳಿ ಮಂಜುನಾಥ್ ಮಾತನಾಡಿ, ‘ಮಲ್ನಾಡ್ ಮನಸ್ಸು’ ಎಂಬ ಕೃತಿಯು ನುಡಿದಂತೆ ಬದುಕುವ ವ್ಯಕ್ತಿಯ ಬದುಕಿನ ಪ್ರತಿಫಲನವಾಗಿದೆ. ಅನ್ಯಾಯಗಳ ವಿರುದ್ಧ ಧ್ವನಿ ಎತ್ತುವವರು ನಿಜವಾದ ಬರಹಗಾರರು. ಈ ಬರವಣಿಗೆಗಳು ಮೌನವಾಗಿರುವವರಿಗೂ ಮಾತು ಕೊಟ್ಟಂತಿವೆ ಎಂದರು.
ಜುಮಾ ಮಸೀದಿ ಅಧ್ಯಕ್ಷ ಇಬ್ರಾಹಿಂ ಕೆ. ಮುಸ್ಲಿಯಾರ್ ಮಾತನಾಡಿ, ‘ಮೆಹಬೂಬ್’ ಎಂದರೆ ಪ್ರೀತಿಗೆ ಅರ್ಹರು. ಹೆಸರಿಗೆ ತಕ್ಕಂತೆ ಅವರು ಧರ್ಮ, ಜಾತಿ, ವರ್ಣ ಎಲ್ಲರೊಂದಿಗೂ ಸಮಾನವಾಗಿ ಬೆರೆಯುವ ವ್ಯಕ್ತಿ ಎಂದರು.
ಪತ್ರಕರ್ತ ಹೆತ್ತೂರು ನಾಗರಾಜ್ ಮಾತನಾಡಿ, ‘ಮಲ್ನಾಡ್ ಮೆಹಬೂಬ್ ಅವರ ಬರಹಗಳಲ್ಲಿ ಗಂಭೀರ ಸಂವೇದನೆ ಇದೆ. ಪತ್ರಕರ್ತನ ದುರದೃಷ್ಟದ ಅನುಭವ, ಸಾಮಾಜಿಕ ಸಂಕೀರ್ಣತೆಗಳ ವ್ಯಾಖ್ಯಾನ ಈ ಇಲ್ಲಿ ನಿಖರವಾಗಿ ಸೆರೆಯಾಗಿವೆ’ ಎಂದರು.
ತಾಲ್ಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷೆ ಶಾರದಾ ಗುರುಮೂರ್ತಿ, ಲೇಖಕ ಮಲ್ನಾಡ್ ಮೆಹಬೂಬ್, ಬಿಜೆಪಿ ಮುಖಂಡ ಜೈ ಮಾರುತಿ ದೇವರಾಜ್, ತೌಫೀಕ್ ಅಹಮದ್, ಜಾಮಿಯ ಮಸೀದಿ ಉಪಾಧ್ಯಕ್ಷ ಅಸ್ಲಾಂ, ದಲಿತ ಮುಖಂಡ ಹೆತ್ತೂರು ಅಣ್ಣಯ್ಯ ಇದ್ದರು.
ಜೈ ಭೀಮ್ ಮಂಜು ಕಾರ್ಯಕ್ರಮ ನಿರೂಪಿಸಿದರು. ಸಾ.ಸು. ವಿಶ್ವನಾಥ್ ಪ್ರಾರ್ಥಿಸಿದರು, ತಾಲ್ಲೂಕು ಕಸಾಪ ಕಾರ್ಯದರ್ಶಿ ಯೋಗೇಶ್ ಸ್ವಾಗತಿಸಿದರು. ಅಕ್ಬರ್ ಜುನೈದ್ ವಂದಿಸಿದರು.
ಸಮಸ್ಯೆಗಳ ನಡುವೆ ಮತ್ತೊಬ್ಬರಿಗೆ ನೆರವಾಗುವ ಮನಸ್ಸು ಎಲ್ಲರಿಗೂ ದೊರೆಯದು. ಎದುರಾದ ಅವಮಾನಗಳು ಮುಂದಿನ ದಿನಗಳಲ್ಲಿ ಸನ್ಮಾನವಾಗಿ ಬರುತ್ತವೆಮುರುಳಿ ಮೋಹನ್ ಕಾಂಗ್ರೆಸ್ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.