ADVERTISEMENT

ಮತ್ತೊಮ್ಮೆ ಸ್ವಪಕ್ಷೀಯರ ವಿರುದ್ಧ ಅಸಮಾಧಾನ ಹೊರಹಾಕಿದ ಬಿ. ಶಿವರಾಂ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2024, 13:44 IST
Last Updated 16 ಮಾರ್ಚ್ 2024, 13:44 IST
<div class="paragraphs"><p>ಬಿ. ಶಿವರಾಂ</p></div>

ಬಿ. ಶಿವರಾಂ

   

ಬೇಲೂರು: ‘ಎಲ್ಲ ಚುನಾವಣೆಯಲ್ಲೂ ಪಕ್ಷದ ಕಾರ್ಯಕ್ರಮಕ್ಕೆ ಬರದೇ ಇರುವ ಇನ್ನೊಂದು ಗುಂಪು ಕಲೆಕ್ಷನ್‌ಗೆ ಕಾಯುತ್ತಾ ಇರುತ್ತದೆ. ಅವರು ಕಲೆಕ್ಷನ್‌ಗೆ ಹೊರತು ಕಾಂಗ್ರೆಸ್‌ ಪಕ್ಷಕ್ಕೆ ಕೆಲಸ‌ ಮಾಡಲು ಅಲ್ಲ. ಇಷ್ಟೊತ್ತಿಗೆ ಅವನು ಸರಿಯಿಲ್ಲ, ಇವನು ಸರಿಯಲ್ಲ. ನಾವು ನಿಮಗೆ ಕೆಲಸ ಮಾಡ್ತೀವಿ ಎಂದು ರೇವಣ್ಣ ಅವರ ಹತ್ತಿರ ಮಾತನಾಡಿಕೊಂಡು ಬಂದಿರುತ್ತಾರೆ’ ಎಂದು ಕಾಂಗ್ರೆಸ್‌ ಮುಖಂಡ ಬಿ. ಶಿವರಾಂ ಹೇಳಿರುವುದು ಪಕ್ಷದ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಮಾಜಿ ಸಚಿವ ಬಿ.ಶಿವರಾಂ ತಮ್ಮ ಪಕ್ಷದ ಕೆಲವರ ಮೇಲೆ ಈ ರೀತಿಯ ಅಸಮಾಧಾನ ಹೊರ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ADVERTISEMENT

‘ಕಳೆದ ಬಾರಿ ಚುನಾವಣೆಯಲ್ಲಿ ನೋಡಿದ್ರಲ್ಲ, ಎಲ್ಲೆಲ್ಲಿ ಇಸ್ಕಂಡು ಯಾರ ಯಾರಿಗೆ ಮಾಡಿದ್ರು. ಕಾಂಗ್ರೆಸ್‌ನಿಂದ ಪ್ರಾರಂಭ ಮಾಡಿ, ಅಲ್ಲಿಂದ ಜೆಡಿಎಸ್, ಅಲ್ಲಿಂದ ಬಿಜೆಪಿಗೆ ಬಂದು ಮುಗ್ಸಿದ್ರು’ ಎಂದು ವಾಗ್ದಾಳಿ ನಡೆಸಿದರು.

‘ಕಾಂಗ್ರೆಸ್ ಅಭ್ಯರ್ಥಿಗೆ ಎಚ್ಚರಿಕೆಯಿಂದ ಇರಿ ಎಂದು ಹೇಳಬೇಕು. ಯಾರು ಕೆಲಸ ಮಾಡಲ್ಲ, ಕಚೇರಿಗೆ ಬರಲ್ಲವೋ ಅವರು ಯಾವುದಕ್ಕೆ ಬೇಕಾದರೂ ರೆಡಿ ಇರುತ್ತಾರೆ. ಈ ಬಾರಿ ಎರಡೇ ಪಾರ್ಟಿ ಇರುವುದರಿಂದ ಹುಷಾರಾಗಿರಿ ಎಂದು ಅವರಿಗೆ ಎಚ್ಚರಿಕೆ ಕೊಡೋಣ. ಇದರ ಮೇಲೆ ಅವರ ಇಷ್ಟ. ಕೊಡೋರು ಅವರು, ಇಸ್ಕಳೋರು ಅವರು. ನಾವು ಪ್ರಾಮಾಣಿಕವಾಗಿ ಕೆಲಸ ಮಾಡೋಣ’ ಎಂದು ಹೇಳಿದ್ದಾರೆ.

ಆಗಿದ್ದೇನು: ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್‌ ಪಟೇಲ್ ಶುಕ್ರವಾರ ಪಟ್ಟಣಕ್ಕೆ ಭೇಟಿ ನೀಡಿದ್ದರು. ಮಾಜಿ ಸಚಿವ ಬಿ.ಶಿವರಾಂ ಅವರು ಕಾಂಗ್ರೆಸ್ ಕಚೇರಿಗೆ ಕಾರ್ಯಕರ್ತರು, ಮುಖಂಡರನ್ನು ಆಹ್ವಾನಿಸಿದ್ದರು. ಆದರೆ ಇನ್ನೂ ಕೆಲ ಮುಖಂಡರು ಕಾಂಗ್ರೆಸ್ ಕಚೇರಿಗೆ ಬಾರದೇ ನೆಹರು ನಗರ, ಚನ್ನಕೇಶವಸ್ವಾಮಿ ದೇವಾಲಯ ಬಳಿ ಶ್ರೇಯಸ್‌ ಪಟೇಲ್‌ ಅವರಿಗಾಗಿ ಕಾದು ನಿಂತಿದ್ದರು. ಶ್ರೇಯಸ್ ಪಟೇಲ್ ಕಾಂಗ್ರೆಸ್ ಕಚೇರಿಗೆ ಸಮಯಕ್ಕೆ ಸರಿಯಾಗಿ ಬಂದಿರಲಿಲ್ಲ. ಈ ಸಂದರ್ಭದಲ್ಲಿ ಬಿ.ಶಿವರಾಂ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದಾರೆ.

‘ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಷ್ಟೊತ್ತಿಗೆ ಬರುತ್ತಾರೋ ಬಿಡುತ್ತಾರೋ, ಚುನಾವಣೆಯಂತೂ ನಡೆಯುತ್ತದೆ. ಚುನಾವಣೆ ನಡೆದರೆ ನಮ್ಮ ಕೆಲಸ ಪ್ರಚಾರ ಮಾಡಬೇಕು’ ಎಂದರು.

ಈ ವೇಳೆ ಸಭೆಗೆ ತಡವಾಗಿ ತಾಲ್ಲೂಕು ಪ್ರಮುಖರು ಬಂದಿದ್ದು, ಇದರಿಂದ ಸಿಟ್ಟಾದ ಶಿವರಾಂ, ‘ಬನ್ರಿ ನೀವೆಲ್ಲಾ ಅಧ್ಯಕ್ಷರಾಗಿ ಮುಗಿದಿದೆ. ನಿಮಗಾಗಿ ನಾವು ಕಾಯುವ ಸ್ಥಿತಿ ಬಂದು ಬಿಟ್ಟಿದೆ. ಏನು ಮಾಡುವ ಹಾಗಿಲ್ಲ’ ಎಂದು ಕಿಡಿಕಾರಿದರು.

‘ಅಭ್ಯರ್ಥಿ ಮೊದಲು ಬಂದು ನಿಮ್ಮ ಹತ್ತಿರ ಮನವಿ ಮಾಡಿಕೊಳ್ಳಬೇಕು. ನಾವು ಸಾಮಾನ್ಯವಾಗಿ ಇದನ್ನೇ ನಿರೀಕ್ಷೆ ಮಾಡುತ್ತೇವೆ. ಕೆಲವರಿಗೆ ಅಭ್ಯರ್ಥಿ ಫೋನ್ ಮಾಡ್ತಿದ್ದರಂತೆ, ನಿಮ್ಮನ್ನು ನೋಡಬೇಕು ಎಂದು. ಎಷ್ಟು ಜನರನ್ನು ಮನೆಗೆ ಹೋಗಿ ನೋಡಲು ಆಗುತ್ತದೆ? ನನ್ನನ್ನು ನೋಡಲು ಬೆಂಗಳೂರಿಗೆ ಬರುತ್ತೇನೆ ಅಂದ್ರು. ಬೇಡ ನಾನೇ ಕ್ಷೇತ್ರದಲ್ಲಿ ಇರುತ್ತೇನೆ. ಅಲ್ಲಿಗೆ ಬಂದು ಬಿಡಿ ಎಂದು ಹೇಳಿದೆ. ಯಾರು ಕಾಂಗ್ರೆಸ್ ಕಚೇರಿಗೆ ಬರಬೇಕು ಎನ್ನುತ್ತಾರೋ ಆ ಕಾರ್ಯಕರ್ತರನ್ನೆಲ್ಲಾ ಸಾಮೂಹಿಕವಾಗಿ ಕರೆಸುತ್ತೇನೆ. ನೀವು ಅಲ್ಲಿಯೇ ಬಂದು ಒಂದು ಗಂಟೆ ಇದ್ದು ಎಲ್ಲರನ್ನೂ ಮಾತನಾಡಿಸಿಕೊಂಡು ಹೋಗಿ ಎಂದು ಹೇಳಿದ್ದೇನೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.