ADVERTISEMENT

ಶಿವಮೊಗ್ಗ ಮಾದರಿ ವಿಮಾನ ನಿಲ್ದಾಣ ನಿರ್ಮಿಸಿ: ಶಾಸಕ ರೇವಣ್ಣ ಆಗ್ರಹ

​ಪ್ರಜಾವಾಣಿ ವಾರ್ತೆ
Published 2 ಜುಲೈ 2021, 14:24 IST
Last Updated 2 ಜುಲೈ 2021, 14:24 IST
ಎಚ್‌.ಡಿ.ರೇವಣ್ಣ
ಎಚ್‌.ಡಿ.ರೇವಣ್ಣ   

ಹಾಸನ: ನಗರ ಸಮೀಪದ ಬೂವನಹಳ್ಳಿ ವಿಮಾನ ನಿಲ್ದಾಣ ಕಾಮಗಾರಿಯಲ್ಲಿ ರಾಜ್ಯ ಸರ್ಕಾರ ರಾಜಕೀಯ ಮಾಡುತ್ತಿದೆ ಎಂದು ಶಾಸಕ ಎಚ್‌.ಡಿ.ರೇವಣ್ಣ ಆರೋಪಿಸಿದರು.

ಶಿವಮೊಗ್ಗ, ವಿಜಯಪುರ ಮತ್ತು ಕಲುಬರ್ಗಿ ವಿಮಾನ ನಿಲ್ದಾಣ ಕಾಮಗಾರಿಯನ್ನುಲೋಕೋಪಯೋಗಿ ಇಲಾಖೆ ಗೆ ನೀಡಲಾಗಿದೆ. ಆದರೆ, ಹಾಸನ ವಿಮಾನ ನಿಲ್ದಾಣಕಾಮಗಾರಿಯನ್ನು ಮೂಲಸೌಕರ್ಯ ಅಭಿವೃದ್ಧಿ ಇಲಾಖೆಗೆ ವಹಿಸಲಾಗಿದೆ. ಶಿವಮೊಗ್ಗ ಮಾದರಿಯಲ್ಲಿ ವಿಮಾನ ನಿಲ್ದಾಣ ನಿರ್ಮಿಸದೆ ನಾಮಕಾವಸ್ತೆಗೆ ನಿರ್ಮಾಣ ಮಾಡಿದರೆ ಕಾಮಗಾರಿ ತಡೆ ಹಿಡಿಯಲಾಗುವುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.

ಕಾಮಗಾರಿ ಗುತ್ತಿಗೆಯನ್ನು ಯಾರಿಗಾದರೂ ನೀಡಲಿ. ಲೋಕೋಪಯೋಗಿ ಇಲಾಖೆಯಲ್ಲಿ ತಾಂತ್ರಿಕ ಸಿಬ್ಬಂದಿ, ಎಂಜಿನಿಯರ್‌ಗಳು ಇದ್ದಾರೆ. ಆದರೆ ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆಯಲ್ಲಿ ಅಗತ್ಯ ಸಿಬ್ಬಂದಿ ಇಲ್ಲ. ಸರಿಯಾದ ರೀತಿಯಲ್ಲಿ ಮಾಡುವುದಾದರೆ ಮಾಡಲಿ,ಇಲ್ಲವೇ ಯೋಜನೆಯನ್ನು ಕೈಬಿಡಲಿ. ರಾಜ್ಯದ ಜನ ಅಧಿಕಾರ ಕೊಟ್ಟಾಗ ಮಾಡುತ್ತೇವೆ ಎಂದರು.

ADVERTISEMENT

ವಿಮಾನ ನಿಲ್ದಾಣಕ್ಕೆ ಒಟ್ಟು 761 ಎಕರೆ ಜಮೀನು ಬೇಕಾಗಿದ್ದು, ಈಗಾಗಲೇ 536 ಎಕರೆ ಭೂ ಸ್ವಾದೀನವಾಗಿದೆ. ಉಳಿದ 219.05 ಎಕರೆ ಖರೀದಿ ಸಂಬಂಧ ಸಚಿವನಾಗಿದ್ದಾಗ ಎರಡು ಬಾರಿ ಸಭೆ ನಡೆಸಿದ್ದು, 4.1 ಹಾಗೂ 6.1 ಸಹ ಆಗಿದೆ. ಈಗ 219 ಎಕರೆ ಪೈಕಿ ಕೇವಲ 24 ಎಕರೆ ಮಾತ್ರ ಸ್ವಾಧೀನ ಪಡಿಸಿಕೊಳ್ಳಲು ₹13 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಚಿವನಾಗಿದ್ದಾಗ ಅವಧಿಯಲ್ಲಿ ಏರ್‌ಪೋರ್ಟ್‌ ಜತೆಗೆ ತರಬೇತಿ ಕೇಂದ್ರ, ವರ್ಕ್‌ಶಾಪ್‌, ಗಾಲ್ಫ್‌ಕ್ಲಬ್ ಸೇರಿದಂತೆ ₹1,200 ಕೋಟಿ ವೆಚ್ಚದ ಯೋಜನೆ ರೂಪಿಸಿ, ಜುಪಿಟರ್‌ ಏವಿಯೇಷನ್‌ ಮೂಲಕ ಕಾಮಗಾರಿ ಮಾಡಲು ಉದ್ದೇಶಿಸಲಾಗಿತ್ತು. ಆದರೆ ಸಿ.ಎಂ ಯಡಿಯೂರಪ್ಪ ಅವರು ಅದನ್ನು ತಡೆ ಹಿಡಿದು, ಇದೀಗ ಕಾಮಗಾರಿಯನ್ನು ಬೇರೆ ಇಲಾಖೆಗೆ ನೀಡಿದ್ದಾರೆ. ಸುಳ್ಳು, ದ್ವೇಷ ಮಾಡುವ ಮುಖ್ಯಮಂತ್ರಿ ಯಾರಾದರೂ ರಾಜ್ಯದಲ್ಲಿ ಕಂಡಿದ್ದರೆ ಅದು ಬಿ.ಎಸ್‌ಯಡಿಯೂರಪ್ಪ ಎಂದು ಟೀಕಿಸಿದರು.

ದೇವೇಗೌಡ ಕನಸು ನನಸು ಮಾಡುವುದಾಗಿ ಹೇಳಿ ಬೇಕಾಬಿಟ್ಟಿ ಕಾಮಗಾರಿ ಮಾಡಲಾಗುತ್ತಿದೆ. ಯಡಿಯೂರಪ್ಪ ಅವರೇ ಶಾಶ್ವತವಾಗಿ ಮುಖ್ಯಮಂತ್ರಿ ಆಗಿರುವುದಿಲ್ಲ. 2023ರ ಚುನಾವಣೆಯಲ್ಲಿ ಕಾಂಗ್ರೆಸ್‌ 130, ಬಿಜೆಪಿ 130 ಸ್ಥಾನ ಪಡೆಯುತ್ತೇವೆ ಎಂದು ಹೇಳಿಕೊಳ್ಳುತ್ತಿವೆ. ರಾಜ್ಯದಲ್ಲಿ ಬೇರೆ ಯಾರು ಇಲ್ಲವೇ? ಬಿಜೆಪಿ ಎಷ್ಟು ಸ್ಥಾನ ಗಳಿಸಲಿದೆ ನೋಡುತ್ತೇನೆ. ದೇವರೇ ಶಿಕ್ಷೆ ಕೊಡುವ ಕಾಲ ಬರುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.