
ಜಾವಗಲ್: ಎತ್ತಿನ ಗಾಡಿ ಓಟವು ನಮ್ಮ ಗ್ರಾಮೀಣ ಸೊಗಡಿನ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ ಎಂದು ಅರಸೀಕೆರೆ ಡಿವೈಎಸ್‌ಪಿ ಬಿ.ಆರ್. ಗೋಪಿ ಹೇಳಿದರು.
ಜಾವಗಲ್ ಹೋಬಳಿಯ ಬಂದೂರು ಗ್ರಾಮದಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ನಾಲ್ಕನೇ ವರ್ಷದ ರಾಜ್ಯಮಟ್ಟದ ಜೋಡಿ ಕರುಗಳ ದೊಡ್ಡಗಾಡಿ ಓಟದ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ಕ್ರೀಡೆಗಳು ನಶಿಸಿ ಹೋಗುತ್ತಿರುವ ಇಂದಿನ ದಿನಗಳಲ್ಲಿ ಬಂದೂರು ಗ್ರಾಮದ ಯುವ ರೈತರು ಜೋಡಿ ಎತ್ತಿನ ಗಾಡಿ ಸ್ಪರ್ಧೆ ಏರ್ಪಡಿಸುವ ಮೂಲಕ ಗ್ರಾಮೀಣ ಸಂಸ್ಕೃತಿ ಉಳಿಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.
ನಮ್ಮ ಪೂರ್ವಜರ ಕಾಲದಿಂದಲೂ ಮನೆಗಳಲ್ಲಿ ದನ ಕರುಗಳನ್ನು ಸಾಕುವುದು ವಾಡಿಕೆ. ಆದರೆ, ಇತ್ತೀಚಿನ ದಿನಗಳಲ್ಲಿ ದನ ಕರುಗಳನ್ನು ಸಾಕುವವರ ಸಂಖ್ಯೆ ಕಡಿಮೆಯಾಗುತ್ತಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ದನ ಕರುಗಳನ್ನು ಸಾಕುವಂತೆ ಪ್ರೇರೇಪಿಸಲು ಹಾಗೂ ರೈತರಲ್ಲಿ ಕ್ರೀಡಾ ಮನೋಭಾವ ಬೆಳೆಸಲು ಈ ಎತ್ತಿನ ಗಾಡಿ ಓಟವು ಸಹಕಾರಿ. ಯುವಕರು ಕೇವಲ ಸ್ಪರ್ಧೆಗಳಿಗಾಗಿ ದನ ಕರುಗಳನ್ನು ಸಾಕುವ ಬದಲು ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಗೊಳಿಸಿಕೊಳ್ಳಲು ದನ ಕರುಗಳನ್ನು ಸಾಕುವ ಮೂಲಕ ಪ್ರಾಣಿ, ಪಕ್ಷಿಗಳ ಮೇಲೆ ದಯೆ ಹಾಗೂ ಪ್ರೀತಿ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಈ ಎತ್ತಿನ ಗಾಡಿ ಓಟದ ಸ್ಪರ್ಧೆಯಲ್ಲಿ ಚಿಕ್ಕನಲ್ಲೂರಿನ ಉಗ್ರ ಪುರದಮ್ಮ ದೇವಿ ತಂಡವು ಪ್ರಥಮ ಬಹುಮಾನವನ್ನು ಹಾಗೂ ಸಿ. ಹಳ್ಳಿ ಗ್ರಾಮದ ಹುಚ್ಚಮ್ಮ ತಾಯಿ ಸಾಲಿಗ್ರಾಮ ತಂಡವು ದ್ವಿತೀಯ ಮತ್ತು ತೃತೀಯ ಬಹುಮಾನ, ಬಂದೂರಿನ ಸ್ನೇಹ ವೀರ ಮತ್ತು ಮರಿಗೌಡ ತಂಡವು ನಾಲ್ಕು ಮತ್ತು ಐದನೇ ಬಹುಮಾನವನ್ನು ಪಡೆದುಕೊಂಡರು.
ಗ್ರಾಮ ಪಂಚಾಯಿತಿ ಸದಸ್ಯರಾದ ವಿಶ್ವನಾಥ್, ಜಯಣ್ಣ, ವಿವೇಕಾನಂದ ಸಂಘದ ಅಧ್ಯಕ್ಷರಾದ ಮಹೇಶ್, ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ನಾಗರಾಜ್, ಸಾತ್ವಿಕ್ ಗೌಡ, ಪವನ್, ಸ್ವಾಮಿ, ಗಣೇಶ್, ಕಿರಣ್, ಅಭಿಷೇಕ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.