ADVERTISEMENT

ರಸ್ತೆಗೆ ಉರುಳಿದ ಬಸ್: ಯುವಕ ಸಾವು

ಮಂಗಳೂರಿನಿಂದ ಬೆಂಗಳೂರಿಗೆ ಹೊರಟಿದ್ದ ಬಸ್‌: 25 ಪ್ರಯಾಣಿಕರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2019, 10:57 IST
Last Updated 25 ನವೆಂಬರ್ 2019, 10:57 IST
ಹಿರೀಸಾವೆಯ ಶ್ರೀಕಂಠಯ್ಯ ವೃತ್ತದಲ್ಲಿ ಸೋಮವಾರ ಬೆಳಗಿನ ಜಾವ ಹೆದ್ದಾರಿಯಲ್ಲಿ ಬಸ್ ಉರುಳಿ ಕಾರಿಗೆ ಡಿಕ್ಕಿಯಾಗಿದೆ
ಹಿರೀಸಾವೆಯ ಶ್ರೀಕಂಠಯ್ಯ ವೃತ್ತದಲ್ಲಿ ಸೋಮವಾರ ಬೆಳಗಿನ ಜಾವ ಹೆದ್ದಾರಿಯಲ್ಲಿ ಬಸ್ ಉರುಳಿ ಕಾರಿಗೆ ಡಿಕ್ಕಿಯಾಗಿದೆ   

ಹಿರೀಸಾವೆ: ಚಾಲಕನ ನಿಯಂತ್ರಣ ತಪ್ಪಿ ಬಸ್ ರಾಷ್ಟ್ರೀಯ ಹೆದ್ದಾರಿ 75 ರಸ್ತೆಗೆ ಅಡ್ಡಲಾಗಿ ಉರುಳಿ ಬಿದ್ದು, ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದು, 25 ಪ್ರಯಾಣಿಕರು ಗಾಯಗೊಂಡಿರುವ ಘಟನೆ ಸೋಮವಾರ ರಾತ್ರಿ 2 ಗಂಟೆ ಸುಮಾರಿಗೆ ಇಲ್ಲಿಯ ಶ್ರೀಕಂಠಯ್ಯ ವೃತ್ತದಲ್ಲಿ ಸಂಭವಿಸಿದೆ.

ಬಂಟ್ವಾಳ ತಾಲ್ಲೂಕು ಮಾಣಿ ಗ್ರಾಮದ ಸಂತೋಷ ಅವರ ಪುತ್ರ ಅಭಿಷೇಕ್ (24) ಮೃತ ಯುವಕ. ಕೆ.ಎಸ್.ಆರ್.ಟಿ.ಸಿ ಬಸ್ ಮಂಗಳೂರಿನಿಂದ ಬೆಂಗಳೂರಿಗೆ ಹೋಗುತ್ತಿತ್ತು. ಬಸ್‌ನಲ್ಲಿ 46 ಪ್ರಯಾಣಿಕರು ಇದ್ದು, ಸುಮಾರು 25 ಜನರು ಗಾಯಗೊಂಡಿದ್ದಾರೆ.

ಅಭಿಷೇಕ ಬೆಂಗಳೂರಿನಲ್ಲಿ ಬಜಾಜ್ ಕಂಪನಿಯ ಉದ್ಯೋಗಿ. ತಂದೆ, ತಾಯಿಯೊಂದಿಗೆ ಸಂಬಂಧಿಕರ ಮದುವೆ ಮುಗಿಸಿ, ತನ್ನ ತಮ್ಮ ಅಜಯ್ ಜೊತೆ ಈ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದರು. ಈತನ ತಂದೆ ತಾಯಿ ಮತ್ತೊಂದು ಬಸ್‌ನಲ್ಲಿ ಬೆಂಗಳೂರಿಗೆ ಪ್ರಯಾಣ ಮಾಡುತ್ತಿದ್ದರು. ಆ ಬಸ್‌ನಲ್ಲಿ ಸೀಟ್ ಇಲ್ಲದ ಕಾರಣ ಸಹೋದರರು ಈ ಬಸ್ ಹತ್ತಿದ್ದರು. ಅಜಯ್ ಸಹ ಅಪಘಾತದಲ್ಲಿ ಗಾಯಗೊಂಡಿದ್ದಾನೆ.

ADVERTISEMENT

ಬಸ್‌ನಲ್ಲಿದ್ದ ಬಹುತೇಕ ಪ್ರಯಾಣಿಕರು ಮಂಗಳೂರು, ಕಾಸರಗೋಡು ಮತ್ತು ಹಾಸನ ಜಿಲ್ಲೆಯವರಾಗಿದ್ದಾರೆ. ಅದರಲ್ಲಿ ಆರು ಜನರಿಗೆ ಕೈ, ಕಾಲು ಮುರಿದಿವೆ. ಹಿರೀಸಾವೆ ಸರ್ಕಾರಿ ಆಸ್ಪತ್ರೆ ಮತ್ತು ಆದಿಚುಂಚನಗಿರಿ ಆಸ್ಪತ್ರೆಗೆ ತುರ್ತು ವಾಹನಗಳಲ್ಲಿ ಸಾಗಿಸಲಾಗಿದೆ ಚಿಕಿತ್ಸೆ ನೀಡಲಾಗಿದೆ. ಹಲವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹಾಸನ, ಬೆಂಗಳೂರಿಗೆ ಕಳುಹಿಸಲಾಗಿದೆ.

ಬಸ್‌ನ ಚಾಲಕ ಅತಿವೇಗವಾಗಿ ಚಾಲನೆ ಮಾಡುತ್ತಿದ್ದಾಗ, ಎದುರಿನಿಂದ ಸರ್ವಿಸ್ ರಸ್ತೆಯಲ್ಲಿ ಬರುತ್ತಿದ್ದ ಕಾರನ್ನು ನೋಡಿ ಗಾಬರಿಯಿಂದ ಬ್ರೇಕ್ ಹಾಕಿರುವುದೇ ಅಪಘಾತಕ್ಕೆ ಕಾರಣವಾಗಿದೆ ಮತ್ತು ಈ ದೃಶ್ಯ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಯಿಂದ ಗೊತ್ತಾಗಿದೆ. ಕಾರಿನ ಚಾಲಕ ಅಪಾಯದಿಂದ ಪಾರಾಗಿದ್ದಾನೆ.

ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಬಸ್ ಮತ್ತು ಕಾರನ್ನು ಅನ್ನು ಹಿರೀಸಾವೆ ಪೊಲೀಸರು ಕ್ರೇನ್ ಸಹಾಯದಿಂದ ಎತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.