ADVERTISEMENT

ಸಿಎ ಜಾಗದಲ್ಲಿ ಮನೆ: ಬಿಟ್ಟಕೊಡಲು ಸಿದ್ದ

ಅರಸೀಕೆರೆ ಶಾಸಕ ಶಿವಲಿಂಗೇಗೌಡ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2018, 14:45 IST
Last Updated 29 ಡಿಸೆಂಬರ್ 2018, 14:45 IST
 ಕೆ.ಎಂ.ಶಿವಲಿಂಗೇಗೌಡ
 ಕೆ.ಎಂ.ಶಿವಲಿಂಗೇಗೌಡ   

ಹಾಸನ : ‘ಅರಸೀಕೆರೆ ನಗರದಲ್ಲಿ ಸಿಎ ಜಾಗದಲ್ಲಿ ಮನೆ ನಿರ್ಮಿಸಿದ್ದೇನೆ ಎಂದು ಆರೋಪಿಸಿರುವ ಕಾಂಗ್ರೆಸ್‌ ಮುಖಂಡ ದೇವರಾಜೇಗೌಡ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲಾಗುವುದು’ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಎಚ್ಚರಿಕೆ ನೀಡಿದರು.

‘1991 ರಲ್ಲಿ ಮಾರುತಿ ನಗರದಲ್ಲಿ ಎಸ್.ಸಿದ್ದರಾಮಶೆಟ್ಟಿ ಎಂಬುವರಿಂದ ನಿವೇಶನವನ್ನು ₹ 45 ಸಾವಿರ ನೀಡಿ ಕ್ರಯಕ್ಕೆ ಪಡೆದಿದ್ದೇನೆ. ₹ 2.50 ಲಕ್ಷ ವೆಚ್ಚದಲ್ಲಿ ಮನೆ ಕಟ್ಟಿದ್ದೇನೆ. ಈಗ ಅದರ ಮೇಲೂ ಕೆಲವರ ಕಣ್ಣು ಬಿದ್ದಿದೆ. ನಿವೇಶನ ಖರೀದಿಸುವಾಗ ಸಾಮಾನ್ಯ ಗುತ್ತಿಗೆದಾರನಾಗಿದ್ದೆ’ ಎಂದು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

‘ಸರ್ಕಾರಿ ಜಾಗ ರಕ್ಷಣೆಗೆ ಕಠಿಣ ಕಾನೂನು ಜಾರಿಗೆ ತರುವಂತೆ ವಿಧಾನಸೌಧದಲ್ಲಿ ಪ್ರಬಲ ಧ್ವನಿ ಎತ್ತಿರುವ ನಾನು, ಸಿಎ (ಉದ್ಯಾನಕ್ಕೆ ಮೀಸಲಿಟ್ಟಿದ್ದ) ಜಾಗ ಕಬಳಿಸಲು ಸಾಧ್ಯವೇ? ನಿವೇಶನ ಖರೀದಿಸುವ ಎಲ್ಲರೂ ಕಡ್ಡಾಯವಾಗಿ ನಗರ ಯೋಜನಾ ಅಧಿಕಾರಿಗಳಿಂದ ದಾಖಲೆ ಪಡೆಯಬೇಕೆಂಬ ನಿಯಮ 1997 ರಲ್ಲಿ ಜಾರಿಗೆ ಬಂದಿತು. ಆದರೆ, 1991ರಲ್ಲಿಯೇ ನಿವೇಶನ ಖರೀದಿಸಿದ್ದರಿಂದ ಆ ಕೆಲಸ ಮಾಡಲಿಲ್ಲ. ಸಿದ್ದರಾಮಶೆಟ್ಟಿ ಅವರು ತಮ್ಮ ಒಟ್ಟು 5.4 ಎಕರೆ ಜಮೀನಿನಲ್ಲಿ 1 ಎಕರೆ 10 ಗುಂಟೆಯಂತೆ ನಾಲ್ಕು ಭಾಗಗಳಾಗಿ ಬಡಾವಣೆ ನಿರ್ಮಿಸಿದ್ದಾರೆ. ಅದರಲ್ಲಿ ಸಿಎ ಜಾಗ ಬಿಡಲಾಗಿದೆ. ಅಲ್ಲಿ ಗಣಪತಿ ದೇವಾಲಯ ಹಾಗೂ ಉದ್ಯಾನ ನಿರ್ಮಿಸಲಾಗಿದೆ. ನಾನು ಕಟ್ಟಿರುವ ಮನೆ ಸಿಎ ಜಾಗವಾಗಿದ್ದರೆ ಬಿಟ್ಟುಕೊಡಲು ಸಿದ್ದ’ ಎಂದು ಹೇಳಿದರು.

ADVERTISEMENT

‘ಯಾವ ತಪ್ಪು ಮಾಡದ ನನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿರುವವರಿಗೆ ಏನು ಹೇಳಬೇಕು ತಿಳಿಯುತ್ತಿಲ್ಲ. ವೀರಭದ್ರಪ್ಪ (ಅಜ್ಜಪ್ಪ) ಎಂಬುವರು ನ್ಯಾಯಾಲಯದಲ್ಲಿ ದೂರು ದಾಖಲಿಸಿದ ಮೇಲೆ ನನ್ನಂತೆಯೇ 70 ಜನರಿಗೆ ನೋಟೀಸ್‌ ಜಾರಿ ಮಾಡಲಾಗಿದೆ’ ಎಂದರು.

‘ಪಿತ್ರಾರ್ಜಿತ ಆಸ್ತಿ ಬಿಟ್ಟರೆ ಬೇರೆ ಏನನ್ನೂ ಮಾಡಿಕೊಂಡಿಲ್ಲ. ಸರ್ಕಾರ ನೀಡುವ ಸಂಬಳದಿಂದ ಬದುಕುತ್ತಿದ್ದೇನೆ. ರಾಜ್ಯದಲ್ಲಿ ಆದಾಯ ತೆರಿಗೆ ಕಟ್ಟದ ಶಾಸಕ ನಾನೊಬ್ಬನೇ, ಆದರೂ ನನ್ನ ವಿರುದ್ಧ ಚಿತಾವಣೆ ನಡೆದಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.