ಹಾಸನ: ಫೆಬ್ರುವರಿ 14 ರಂದು ಪ್ರೇಮಿಗಳ ದಿನ (ವ್ಯಾಲೆಂಟೈನ್ ಡೇ) ಆಚರಿಸುವ ಪಾಶ್ಚಾತ್ಯರ ಪ್ರವೃತ್ತಿ ತಡೆಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿಯಿಂದ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ ಅವರಿಗೆ ಮನವಿ ಸಲ್ಲಿಸಲಾಯಿತು.
ಕೆಲವು ದೇಶಗಳಲ್ಲಿ ಫೆ.14 ಅನ್ನು ವ್ಯಾಲೆಂಟೈನ್ ಡೇ ಎಂದು ಆಚರಿಸುತ್ತಿದ್ದು, ಪಾಶ್ಚಾತ್ಯರ ಪ್ರವೃತ್ತಿ ಭಾರತದಲ್ಲೂ ವ್ಯಾಪಕವಾಗಿ ಪಸರಿಸಿದೆ. ಪಾಶ್ಚಾತ್ಯರ ವ್ಯಾಪಾರದ ಲಾಭಕ್ಕಾಗಿ ಪ್ರೇಮದ ಹೆಸರಿನಲ್ಲಿ ಈ ವಿಕೃತ ಕಲ್ಪನೆಯ ಪ್ರಚಾರದಿಂದ ಯುವಪೀಳಿಗೆ ಭೋಗವಾದ ಮತ್ತು ಅನೈತಿಕತೆಯಲ್ಲಿ ಮುಳುಗುತ್ತಿದೆ ಎಂದು ದೂರಿದರು.
ಪ್ರೇಮದ ಭೀಭತ್ಸ ಪ್ರದರ್ಶನ ಮಾಡುವ ನೆಪದಲ್ಲಿ ಇತ್ತೀಚೆಗೆ ಏಕಮುಖ ಪ್ರೀತಿಯಿಂದ ಯುವತಿಯರ ಮೇಲಿನ ಕಿರುಕುಳ ಹಾಗೂ ಹಲವಾರು ಹಿಂಸಾತ್ಮಕ ಘಟನೆಗಳು ಸಂಭವಿಸುತ್ತಿವೆ ಎಂದು ತಿಳಿಸಿದರು.
ಅಂದು ನಡೆಯುವ ಪಾರ್ಟಿಗಳಲ್ಲಿ ಯುವಕ-ಯುವತಿಯರು ಮದ್ಯಪಾನ, ಧೂಮಪಾನ, ಮಾದಕ ವಸ್ತುಗಳ ಸೇವನೆ ಮುಂತಾದ ಅನಾಚಾರಗಳಲ್ಲಿ ತೊಡಗಿರುವುದನ್ನು ಕಾಣಬಹುದಾಗಿದೆ. ಶಾಲಾ-ಕಾಲೇಜುಗಳ ಆವರಣಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆ ಉಂಟಾಗುತ್ತಿದೆ ಎಂದು ದೂರಿದರು.
ಫೆ.14 ರಂದು ವಿಶೇಷ ಪೊಲೀಸ್ ಘಟಕವನ್ನು ನಿಯೋಜಿಸಿ ಕಾಲೇಜು ಆವರಣಗಳಲ್ಲಿ ಕಾನೂನು ವಿರೋಧಿ ಕೃತ್ಯಗಳಲ್ಲಿ ತೊಡಗುವವರ ಮೇಲೆ ನಿಗಾ ಇಡಬೇಕು. ಅತಿವೇಗದಲ್ಲಿ ವಾಹನ ಚಲಾಯಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ವ್ಯಾಲೆಂಟೈನ್ ಡೇ ಸಂದರ್ಭದಲ್ಲಿ ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳ ತಡೆಗೆ ಕ್ರಮ ಕೈಗೊಳ್ಳಬೇಕು. ಸರ್ಕಾರದಿಂದ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.
ಹಿಂದೂ ಜನಜಾಗೃತಿ ಸಮಿತಿಯ ಗೋವಿಂದರಾಜು, ವೆಂಕಟೇಶ್, ಸುರೇಶ್ ಗೌಡ, ರಾಘವೇಂದ್ರ ಆಚಾರ್, ಆನಂತರಾಜು, ಸೋಮಣ್ಣ, ಸತೀಶ್, ಪವನ್, ಅಶೋಕ್ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.