ADVERTISEMENT

ಕಾಲುವೆ ಏರಿ ಒತ್ತುವರಿ: ಕ್ರಮಕ್ಕೆ ಸೂಚನೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2020, 5:16 IST
Last Updated 17 ಸೆಪ್ಟೆಂಬರ್ 2020, 5:16 IST
ಕೊಣನೂರು ಪಟ್ಟಣದಲ್ಲಿ ನಾಲಾ ಏರಿಗೆ ಮಣ್ಣು ತುಂಬಿ ಒತ್ತುವರಿ ಮಾಡಿರುವ ಸ್ಥಳದಲ್ಲಿ ಕಾಲುವೆಗೆ ಮಣ್ಣು ಬೀಳುತ್ತಿರುವುದು
ಕೊಣನೂರು ಪಟ್ಟಣದಲ್ಲಿ ನಾಲಾ ಏರಿಗೆ ಮಣ್ಣು ತುಂಬಿ ಒತ್ತುವರಿ ಮಾಡಿರುವ ಸ್ಥಳದಲ್ಲಿ ಕಾಲುವೆಗೆ ಮಣ್ಣು ಬೀಳುತ್ತಿರುವುದು   

ಕೊಣನೂರು: ಖಾಸಗಿ ಕಟ್ಟಡದ ಪಕ್ಕದಲ್ಲಿರುವ ನಾಲಾ ಸೇವಾ ರಸ್ತೆಯನ್ನು ಮುಚ್ಚಿ ಸ್ವಂತಕ್ಕೆ ಬಳಸಿಕೊಳ್ಳುತ್ತಿರುವ ವ್ಯಕ್ತಿಯ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಶಾಸಕ ಎ.ಟಿ.ರಾಮಸ್ವಾಮಿ ತಿಳಿಸಿದರು.

ಪಟ್ಟಣದ ಈಡಿಗರ ಸಮುದಾಯ ಭವನದ ಬಳಿ ನಿರ್ಮಿಸುತ್ತಿರುವ ವಾಣಿಜ್ಯ ಕಟ್ಟಡಕ್ಕೆ ಹೊಂದಿಕೊಂಡಂತಿರುವ ಕಟ್ಟೇಪುರ ಎಡದಂಡೆ ನಾಲೆಯ ಏರಿಯ ಒತ್ತುವರಿ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಣಿಜ್ಯ ಕಟ್ಟಡದ ಪಕ್ಕದಲ್ಲೇ ಇರುವ ನಾಲೆಯ 9 ಮೀಟರ್ ಸೇವಾ ರಸ್ತೆಯನ್ನು ಮಣ್ಣಿನಿಂದ ಮುಚ್ಚಲಾಗಿದೆ. ಮುಚ್ಚಿರುವ ಮಣ್ಣು ನಾಲೆಗೆ ಬೀಳುತ್ತಿದ್ದು ನೀರಿನ ಹರಿವಿಗೆ ಅಡಚಣೆಯಾಗುತ್ತಿದೆ ಎಂದರು.

ಕಟ್ಟಡದಿಂದ ತ್ಯಾಜ್ಯದ ನೀರು ನಾಲೆಗೆ ಬಿಡುವ ಉದ್ದೇಶದಿಂದ, ಅನುಮತಿ ಪಡೆಯದೆ ನಾಲೆಗೆ ಪೈಪ್‌ ಅಳವಡಿಸಲಾಗಿದೆ. ಸರ್ಕಾರಿ ಆಸ್ತಿ ದುರುಪಯೋಗಪಡಿಸಿಕೊಳ್ಳುತ್ತಿರುವ ಗ್ರಾಮ ಪಂಚಾಯಿತಿ, ಕಂದಾಯ ಮತ್ತು ನೀರಾವರಿ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.

ADVERTISEMENT

ಸ್ಥಳಕ್ಕೆ ನೀರಾವರಿ ಇಲಾಖೆಯ ಎಂಜಿನಿಯರ್ ವೆಂಕಟೇಶ್, ಕಂದಾಯ ನಿರೀಕ್ಷಕ ಕಿರಣ್ ಕುಮಾರ್, ಪಿಡಿಒ ಗಣೇಶ್, ತಾ.ಪಂ ಇಒ ರವಿಕುಮಾರ್ ಸ್ಥಳ ಪರಿಶೀಲನೆ ನಡೆಸಿದರು.

ಮಣ್ಣನ್ನು ಕಾಲುವೆಗೆ ಬೀಳುವಂತೆ ಏರಿಯ ಮೇಲೆ ತುಂಬುತ್ತಿದ್ದ ಜೆಸಿಬಿ ಯಂತ್ರವನ್ನು ಪೊಲೀಸರು ವಶಕ್ಕೆ ಪಡೆದರು.

ಪ್ರಕರಣ ಕುರಿತು ಗ್ರಾ.ಪಂ ಮತ್ತು ನೀರಾವರಿ ಇಲಾಖೆಯ ವತಿಯಿಂದ ದೂರು ನೀಡಲಾಯಿತು.

ಪಿಎಸ್‌ಐ ಎಸ್.ಎಲ್.ಸಾಗರ್, ಗ್ರಾ.ಪಂ ಅಧ್ಯಕ್ಷ ಕೆ.ಬಿ ರಮೇಶ್, ಅಭಿವೃದ್ಧಿ ಅಧಿಕಾರಿಗಳು, ಕಂದಾಯ ಇಲಾಖೆಯ ಅಧಿಕಾರಿಗಳು, ಗ್ರಾ.ಪಂ ಸಿಬ್ಬಂದಿ ಇದ್ದರು.

ಛತ್ರವನ್ನು ನಿರ್ಮಿಸುತ್ತಿರುವ ವ್ಯಕ್ತಿಯು ನಾಲಾ ಏರಿಯನ್ನು ಸರಿಪಡಿಸಿಕೊಡುವಂತೆ ಹಲವು ಬಾರಿ ಮನವಿಮಾಡಿದ್ದು, ನಮ್ಮಲ್ಲಿ ಅನುದಾನ ಇಲ್ಲದೆ ಇರುವುದರಿಂದ ಮಣ್ಣನ್ನು ಹಾಕಿಕೊಳ್ಳಲು ಅನುಮತಿ ನೀಡಲಾಗಿದೆ. ಕಾಲುವೆ ಅಥವಾ ಇಲಾಖೆಯ ಆಸ್ತಿಗೆ ಹಾನಿ ಕುರಿತಂತೆ ಕ್ರಮಕೈಗೊಳ್ಳಲಾಗುವುದು ಎಂದು ನೀರಾವರಿ ಇಲಾಖೆ ಎ.ಇ.ಇ. ರಾಜೇಗೌಡ ತಿಳಿಸಿದರು.

ನಾಲೆಗೆ ಬೀಳುತ್ತಿರುವ ಮಣ್ಣನ್ನು ತೆಗೆದು, ಒತ್ತುವರಿಯಾಗಿರುವ ಸ್ಥಳವನ್ನು ತೆರವು ಮಾಡುವವರೆಗೆ ಕಟ್ಟಡ ನಿರ್ಮಾಣಕ್ಕೆ ನೀಡಿರುವ ಪರವಾನಗಿಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸುವ ಕುರಿತು ನೋಟಿಸ್ ನೀಡಲಾಗುವುದು. ಪೊಲೀಸ್‌ ಠಾಣೆಗೆ ಈ ಕುರಿತು ದೂರು ನೀಡಲಾಗಿದೆ ಎಂದು ಪಿಡಿಓ ಗಣೇಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.