ಪ್ರಾತಿನಿಧಿಕ ಚಿತ್ರ
ಹಾಸನ: ತಾಲ್ಲೂಕಿನ ಮಡೆನೂರು ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಗುರುವಾರ ರಾತ್ರಿ ಸಂಭವಿಸಿದ ಅಪಘಾತದಲ್ಲಿ ಜನ್ಮದಿನ ಆಚರಿಸಿಕೊಂಡ ಮರಳುತ್ತಿದ್ದ ಯುವಕ ಮೃತಪಟ್ಟಿದ್ದಾನೆ. ಚನ್ನರಾಯಪಟ್ಟಣದ ರಕ್ಷಿತ್ (22), ಕುಶಾಲ್ (24) ಮೃತ ಯುವಕರು. ಅಭಿಷೇಕ್, ನಿಶಾಂತ್, ಮಂಜುನಾಥ್ ಎಂಬುವವರಿಗೆ ಗಾಯಗಳಾಗಿದ್ದು, ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅದ್ಧೂರಿ ಜನ್ಮ ದಿನಾಚರಣೆ ನಂತರದ ಜಾಲಿ ರೈಡ್ ವೇಳೆ ನಿಯಂತ್ರಣ ತಪ್ಪಿದ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಉರುಳಿ ಬಿದ್ದಿದೆ. ಜನ್ಮದಿನ ಆಚರಿಸಿಕೊಂಡ ಯುವಕ ಸೇರಿ ಇಬ್ಬರು ಯುವಕರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಗೆಳೆಯರು ರಾಷ್ಟ್ರೀಯ ಹೆದ್ದಾರಿ 75ರ ಮಡೆನೂರು ಫ್ಲೈಓವರ್ ಮೇಲೆ ರಕ್ಷಿತ್ ಜನ್ಮದಿನ ಆಚರಿಸಿದ್ದರು. ನಂತರ ಕಾರಿನಲ್ಲಿ ಹಾಸನದ ಕಡೆಗೆ ಬರುತ್ತಿದ್ದಾಗ, ಅತಿ ವೇಗವಾಗಿ ಹೋಗುತ್ತಿದ್ದ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ಜಮೀನಿಗೆ ಉರುಳಿ ಬಿದ್ದಿದೆ.
ಗಿರೀಶ್ ಎಂಬುವವವರಿಗೆ ಸೇರಿದ ಕಾರನ್ನು ಕುಶಾಲ್ ಎರವಲು ಪಡೆದುಕೊಂಡು ಬಂದಿದ್ದ. ಡಿಕ್ಕಿ ಹಾಗೂ ಪಲ್ಟಿಯಾದ ರಭಸಕ್ಕೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.