ADVERTISEMENT

ಪರಿಶಿಷ್ಟರ ಕಾಲಂನಲ್ಲಿ ಜಾತಿ ನಮೂದಿಸಿ: ವೆಂಕಟೇಶ್ ಮೂರ್ತಿ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2025, 4:50 IST
Last Updated 27 ಸೆಪ್ಟೆಂಬರ್ 2025, 4:50 IST
ವೆಂಕಟೇಶ್ ಮೂರ್ತಿ
ವೆಂಕಟೇಶ್ ಮೂರ್ತಿ   

ಹೊಳೆನರಸೀಪುರ: ಬೌದ್ಧ ಧರ್ಮ ಒಪ್ಪಿಕೊಂಡಿರುವ ಪರಿಶಿಷ್ಟ ಜಾತಿಯ ಜನರು ಜಾತಿ ಸಮೀಕ್ಷೆಗೆ ಬಂದಾಗ ಕಾಲಂ 8ರಲ್ಲಿ ಬೌದ್ಧರು, ಕಾಲಂ 9ರಲ್ಲಿ ಪರಿಶಿಷ್ಟ ಜಾತಿ ಮತ್ತು ಕಾಲಂ 10ರಲ್ಲಿ ನಿಮ್ಮ ಜಾತಿ ಹೊಲಯ, ಮಾದಿಗ ಅಥವಾ ನಿಮ್ಮ ಉಪಜಾತಿ ಮಾಲಾ, ಜಾಡಮಾಲಿ, ಸಿಳ್ಳೇಕ್ಯಾತ ತಪ್ಪದೇ ಬರೆಸಿ ಎಂದು ಭಾರತೀಯ ಬೌದ್ಧ ಮಹಾಸಭಾ ರಾಜ್ಯ ಸಮಿತಿ ಸದಸ್ಯ ವೆಂಕಟೇಶ್ ಮೂರ್ತಿ ತಿಳಿಸಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ‘ಬಿ.ಆರ್.ಅಂಬೇಡ್ಕರ್ ಅವರ ಅನುಯಾಯಿಗಳಾದ ನಾವು ಬಾಬಾ ಸಾಹೇಬರು ನಡೆದ ದಾರಿಯಲ್ಲಿ ನಡೆಯಲು ಆಂದೋಲನ ನಡೆಸಿದ್ದೇವೆ. ದೇಶದಲ್ಲಿ 1 ಕೋಟಿಗೂ ಹೆಚ್ಚು ಪರಿಶಿಷ್ಟ ಜಾತಿಯವರಿದ್ದು, 60 ಲಕ್ಷಕ್ಕೂ ಹೆಚ್ಚು ಜನರನ್ನು ಬೌದ್ಧ ಧರ್ಮಕ್ಕೆ ಸೇರಿಸುವ ಗುರಿ ಹೊಂದಿದ್ದೇವೆ’ ಎಂದು ಹೇಳಿದರು.

ಪರಿಶಿಷ್ಟ ಜಾತಿಯವರು ಬೌದ್ಧ ಧರ್ಮಕ್ಕೆ ಮತಾಂತರಗೊಂಡರೆ ಅಂತಹವರು ಪರಿಶಿಷ್ಟ ಜಾತಿಯವರೆಂದು ಪರಿಗಣಿಸಿ ಜಾತಿ ಪ್ರಮಾಣ ಪತ್ರ ನೀಡಲು ಕೇಂದ್ರ ಸರ್ಕಾರ 1990 ನವೆಂಬರ್ 20ರಂದು ಸೂಚಿಸಿದೆ. ಅದರಂತೆ 2011, ಸೆಪ್ಟೆಂಬರ್ 20ರಲ್ಲಿ ಪರಿಶಿಷ್ಟ ಜಾತಿಗೆ ಸೇರಿದವರು ಬೌದ್ಧ ಧರ್ಮಕ್ಕೆ ಮತಾಂತರಗೊಂಡರೆ ಅಂತಹವರಿಗೆ ಕೇಂದ್ರದಲ್ಲಿ ನಮೂದಿಸಿರುವ ಷರತ್ತುಗಳಿಗೊಳಪಟ್ಟು ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಲು ಜಿಲ್ಲಾಧಿಕಾರಿಗೆ ಸೂಚಿಸಿದೆ. ಆದರೂ ತಹಶೀಲ್ದಾರ್‌ಗಳು ಪರಿಶಿಷ್ಟ ಜಾತಿ ಪ್ರಮಾಣ ಪತ್ರಗಳನ್ನು ನೀಡುತ್ತಿಲ್ಲವೆಂದು ಬೌದ್ಧ ಸಂಘಟನೆಯ ಸಂಘ ಸಂಸ್ಥೆಗಳು ಸರ್ಕಾರಕ್ಕೆ ಮನವಿ ಮಾಡಿದ ಕಾರಣದಿಂದ ಬೌದ್ಧ ಧರ್ಮಕ್ಕೆ ಮತಾಂತರಗೊಂಡ ಪರಿಶಿಷ್ಟ ಜಾತಿಯವರಿಗೆ ಪ್ರಮಾಣ ಪತ್ರ ನೀಡಲು ಮತ್ತು ಧರ್ಮದ ಕಾಲಂನಲ್ಲಿ ‘ಬೌದ್ಧ ಧರ್ಮ’ ಎಂದು ನಮೂದಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದೆ’ ಎಂದು ವಿವರಿಸಿದರು.‌

ADVERTISEMENT

ಭಾರತೀಯ ಬೌದ್ಧ ಮಹಾಸಭಾ ತಾಲ್ಲೂಕು ಅಧ್ಯಕ್ಷ ಪಿ. ಅಣ್ಣಯ್ಯ, ತಾಲೂಕು ಬೌದ್ಧ ಬಳಗದ ಅಧ್ಯಕ್ಷ ಮಂಜುನಾಥ್, ಮುಖಂಡರಾದ ಜಗದ್ದೀಶ್, ದೇವರಾಜ್, ರವಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.