ADVERTISEMENT

ಚನ್ನರಾಯಪಟ್ಟಣ | ಮತ್ತೆ ವರ್ಣಾಶ್ರಮ ವ್ಯವಸ್ಥೆ ತರಲು ಪ್ರಯತ್ನ: ಬಂಜಗೆರೆ ಜಯಪ್ರಕಾಶ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2025, 2:07 IST
Last Updated 15 ಸೆಪ್ಟೆಂಬರ್ 2025, 2:07 IST
ಚನ್ನರಾಯಪಟ್ಟಣದಲ್ಲಿ ಭಾನುವಾರ ನಡೆದ ಜನ ಜಾಗೃತಿ ಸಮಾವೇಶದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಸಾಹಿತಿ ಬಂಜಗೆರೆ ಜಯಪ್ರಕಾಶ್, ಗುರುಪ್ರಸಾದ್ ಕೆರೆಗೊಡು, ಎಂ.ಎ. ಗೋಪಾಲಸ್ವಾಮಿ ಪುಷ್ಪ ನಮನ ಸಲ್ಲಿಸಿದರು
ಚನ್ನರಾಯಪಟ್ಟಣದಲ್ಲಿ ಭಾನುವಾರ ನಡೆದ ಜನ ಜಾಗೃತಿ ಸಮಾವೇಶದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಸಾಹಿತಿ ಬಂಜಗೆರೆ ಜಯಪ್ರಕಾಶ್, ಗುರುಪ್ರಸಾದ್ ಕೆರೆಗೊಡು, ಎಂ.ಎ. ಗೋಪಾಲಸ್ವಾಮಿ ಪುಷ್ಪ ನಮನ ಸಲ್ಲಿಸಿದರು   

ಚನ್ನರಾಯಪಟ್ಟಣ: ‘ಭಾರತದಲ್ಲಿನ ಇತ್ತೀಚಿನ ಘಟನೆಗಳನ್ನು ಗಮನಿಸಿದರೆ ಆತಂಕ ಸೃಷ್ಟಿಸುವ ವಾತಾವರಣ ಕಂಡು ಬರುತ್ತಿದೆ’ ಎಂದು ಸಾಹಿತಿ ಬಂಜಗೆರೆ ಜಯಪ್ರಕಾಶ ಹೇಳಿದರು.

ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭನವದಲ್ಲಿ ದಲಿತ ಸಂಘರ್ಷ ಸಮಿತಿಯಿಂದ ಭಾನುವಾರ ನಡೆದ ‘ಜನಜಾಗೃತಿ’ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಧರ್ಮ, ಜಾತಿ, ಸಂಸ್ಕೃತಿ ಮತ್ತು ಪರಂಪರೆ ಹೆಸರಿನಲ್ಲಿ ವರ್ಣಾಶ್ರಮ ವ್ಯವಸ್ಥೆಯನ್ನು ಮತ್ತೆ ತರಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಸಂವಿಧಾನದ ಮೂಲ ಆಶಯವನ್ನು ಬದಲಾಯಿಸಲು ಹೊರಟಿರುವ ಕೆಲವು ಶಕ್ತಿಗಳ ಕೆಲಸವನ್ನು ಸಹಿಸಿಕೊಳ್ಳುವ ಮನೋಭಾವ ಸಲ್ಲದು. ಈ ನಿಟ್ಟಿನಲ್ಲಿ ಧಮನಿತರು, ಶೋಷಿತರು ಮತ್ತು ಯುವ ಜನರು ವೈಚಾರಿಕ ಮನೋಭಾವನೆಯನ್ನು ಬೆಳೆಸಿಕೊಂಡು, ಸಂವಿಧಾನದ ಮೂಲ ಆಶಯವನ್ನು ಕಾಪಾಡಬೇಕು’ ಎಂದರು.

ADVERTISEMENT

‘ನೂರಾರು ವರ್ಷಗಳ ಹಿಂದೆ ಕೆಲವು ವರ್ಗದವರು, ಅಧಿಕಾರ ಮತ್ತು ಸಂಪತ್ತಿನ ಮೇಲೆ ಅಧಿಪತ್ಯ ಹೊಂದಿದ್ದರು. ಏಷ್ಯಾದ ಬೆಳಕು ಬುದ್ಧ ಸಮಾನತೆ ಮತ್ತು ಮಾನವೀಯ ಮೌಲ್ಯವನ್ನು ಎತ್ತಿ ಹಿಡಿದರು. ಸಂವಿಧಾನದ ಆಶಯಗಳನ್ನು ಜಾರಿಗೊಳಿಸುವ ಮೂಲಕ ಎಲ್ಲರಿಗೂ ಸ್ವಾತಂತ್ರ್ಯ, ಸಮಾನತೆ, ವ್ಯಕ್ತಿಗೌರವ ಮತ್ತು ಸಹೋದರತ್ವದ ಭಾವನೆಯನ್ನು ಕಾಪಾಡಿದ ಪವಿತ್ರ ಗ್ರಂಥ ಸಂವಿಧಾನ’ ಎಂದು ಹೇಳಿದರು.

ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ, ಕೆರಗೋಡು ಗುರುಪ್ರಸಾದ್ ಮಾತನಾಡಿ, ‘ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಸಂವಿಧಾನವನ್ನು ಬದಲಾಯಿಸಲಾಗುತ್ತದೆ ಎಂದು ಹೇಳುತ್ತಿದ್ದರು. ಆದರೆ ಅದರ ವಿರುದ್ಧ ದಲಿತ ಸಂಘರ್ಷ ಸಮಿತಿ ದೇಶದಲ್ಲಿ ಹೋರಾಟ ಮಾಡಿತು. ಮುಂದಿನ ದಿನಗಳಲ್ಲಿ ಬಹುಸಂಖ್ಯಾತರು ಮೈ ಮರೆತರೆ, ಸಂವಿಧಾನದ ಅಂಶಗಳನ್ನು ಬದಲಾಯಿಸಲು, ಗುಪ್ತ ಅಜೆಂಡಾವನ್ನು ಜಾರಿಗೊಳಿಸಿವ ಮೂಲಕ ಶೂದ್ರರನ್ನು ಶೋಷಣೆ ಮಾಡುತ್ತಾರೆ. ಅದ್ದರಿಂದ ಶೋಷಿತರು ಜಾಗೃತರಾಗಿ ಇರಬೇಕು’ ಎಂದರು.

ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ‘ತಾಲ್ಲೂಕು ಕಚೇರಿ ಆವರಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ್‌ ಪುತ್ಥಳಿಯನ್ನು ಸ್ಥಾಪಿಸಲಾಗುವುದು ಮತ್ತು ಎಲ್ಲಾ ಹೋಬಳಿ ಕೇಂದ್ರಗಳಲ್ಲಿ ಅಂಬೇಡ್ಕರ್ ಭನವ ನಿರ್ಮಿಸಲಾಗುವುದು’ ಎಂದು ಹೇಳಿದರು.

ಕಾಂಗ್ರೆಸ್ ಮುಖಂಡ ಎಂ.ಎ. ಗೋಪಾಲಸ್ವಾಮಿ ಮಾತನಾಡಿ, ರಾಜ್ಯ ಸರ್ಕಾರ ಶೋಷಿತರ ಪರವಾಗಿ ಯೋಜನೆಗಳನ್ನು ರೂಪಿಸಿದ್ದು, ಅದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.

ಜಿಲ್ಲಾ ಸಂಚಾಲಕ ಅಬ್ದುಲ್ ಸಮದ್, ವಕೀಲ ಷಣ್ಮುಖ, ಉಪನ್ಯಾಸಕ ಎಂ.ಜೆ. ರತ್ನಾಕರ ಮಾತನಾಡಿದರು. ಜಿಲ್ಲಾ ಸಂಚಾಲಕ ಕೆ.ಎನ್. ನಾಗೇಶ್, ಹೊಳೆನರಸೀಪುರ ಪರಿಶಿಷ್ಟ ಜಾತಿ, ವರ್ಗದ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕುಪ್ಪೆ ಉಮೇಶ್, ತಾಲ್ಲೂಕು ಪರಿಶಿಷ್ಟ ಜಾತಿ, ವರ್ಗದ ನೌಕರ ಸಂಘದ ಅಧ್ಯಕ್ಷ ಜಲೇಂದ್ರ, ಹುಡ ಮಾಜಿ ಅಧ್ಯಕ್ಷ ಕೃಷ್ಣಕುಮಾರ್, ಅಹಿಂದ ಮುಖಂಡ ಚಂದ್ರು ಜತ್ತೇನಹಳ್ಳಿ, ಮುಖಂಡರಾದ ಅಬ್ದಲ್ ಆದಿ, ಎಂ.ಆರ್. ರಂಗಸ್ವಾಮಿ, ಡಿ.ಎಸ್. ರವಿ ವೇದಿಕೆಯಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.