
ಹಳೇಬೀಡು: ಶಿಲ್ಪಕಲಾ ತಾಣದ ಸೊಬಗು ಹೆಚ್ಚಿಸುವ ದೃಷ್ಟಿಯಿಂದ ಸ್ವಚ್ಛತೆ ಕಾಪಾಡಲು ಹಳೇಬೀಡು ಗ್ರಾಮ ಪಂಚಾಯಿತಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಜನರು ಎಲ್ಲೆಂದರಲ್ಲಿ ಕಸ ಸುರಿಯುವುದನ್ನು ತಪ್ಪಿಸಲು ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ.
‘ದ್ವಾರಸಮುದ್ರ ಕೆರೆ ಏರಿ, ಬಿದರು ಕೆರೆ ಹಾಗೂ ಬೇಲೂರು ರಸ್ತೆಯ ತಿಮ್ಮನಹಳ್ಳಿ ಕಟ್ಟೆ ಬಿಳಿ ಟನ್ ಗಟ್ಟಲೆ ಕಸದ ರಾಶಿ ಬೀಳುತ್ತಿತ್ತು. ಗ್ರಾಮ ಪಂಚಾಯಿತಿಯಿಂದ ಸ್ವಚ್ಛ ಮಾಡಿಸಿದ ಕೆಲವೇ ಕ್ಷಣದಲ್ಲಿ ಪುನಃ ತ್ಯಾಜ್ಯ ಬಂದು ಬೀಳುತ್ತಿತ್ತು. ಧ್ವನಿವರ್ಧಕ ಮೂಲಕ ಜಾಗೃತಿ ಮೂಡಿಸಿದ್ದಲ್ಲದೇ, ಹತ್ತಾರು ಬಾರಿ ಎಚ್ಚರಿಕೆ ಕೊಟ್ಟರೂ ಜನ ಮಾತು ಕೇಳಲಿಲ್ಲ. ಹೀಗಾಗಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಆರ್. ಮಧು ಹೇಳಿದರು.
ದೂರದವರೆಗೂ ದಿನದ 24 ಗಂಟೆ ಜನರ ಓಡಾಟ ಹಾಗೂ ಚಲನವಲನ ಸೆರೆ ಹಿಡಿಯುವಂತಹ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಕಸ ಸುರಿಯುವವರು ಕ್ಯಾಮೆರಾದಲ್ಲಿ ಸಿಕ್ಕಿ ಬೀಳುವುದು ಖಚಿತ. ಕಸ ಸುರಿದು ಸಿಕ್ಕಿ ಬಿದ್ದವರಿಗೆ ₹1 ಸಾವಿರ ದಂಡ ವಿಧಿಸಲಾಗುವುದು.
ದೂರದಿಂದ ಬರುವ ಪ್ರವಾಸಿಗರು ಹಳೇಬೀಡು ಪ್ರವೇಶಿಸಿದಾಕ್ಷಣ ಮನಸ್ಸಿಗೆ ಹಿತಕರ ವಾತಾವರಣ ಕಾಣಬೇಕು. ಶಿಲ್ಪ ಸೌಂದರ್ಯ ವೀಕ್ಷಿಸುವ ಮೊದಲು ಕಸದ ರಾಶಿ ಕಂಡು ಅಸಹ್ಯ ಪಡುವಂತಹ ವಾತಾವರಣಕ್ಕೆ ಕಡಿವಾಣ ಹಾಕಬೇಕು. ಸ್ಥಳೀಯರ ಆರೋಗ್ಯದ ಮೇಲೂ ದುಷ್ಪರಿಣಾಮ ಆಗಬಾರದು ಎಂಬ ಉದ್ದೇಶದಿಂದ ಉಪಾಧ್ಯಕ್ಷೆ ಸುಮಾ ವೆಂಕಟೇಶ್, ಪಿಡಿಒ ಎಸ್.ಸಿ. ವಿರೂಪಾಕ್ಷ, ಸದಸ್ಯರು ಹಾಗೂ ಸಿಬ್ಬಂದಿ ಸಿಸಿಟಿವಿ ಕ್ಯಾಮೆರಾ ಅಳವಡಿಸುವ ಕೆಲಸಕ್ಕೆ ಸಾಥ್ ನೀಡಿದರು. ಹೀಗಾಗಿ ಕ್ಯಾಮೆರಾ ಅಳವಡಿಸುವ ಕೆಲಸ ಪೂರ್ಣಗೊಂಡಿದೆ ಎಂದು ಮಧು ಹೇಳಿದರು.
ದ್ವಾರಸಮುದ್ರ ಕೆರೆ ಏರಿಯ ಮೇಲೆ ಎರಡು ಸ್ಥಳದಲ್ಲಿ ಕ್ಯಾಮೆರಾ ಅಳವಡಿಸಲಾಗಿದೆ. ಬಿದರು ಕೆರೆ ಏರಿ ಹಾಗೂ ತಿಮ್ಮನಹಳ್ಳಿ ಕಟ್ಟೆಯ ಬಳಿ ತಲಾ ಒಂದು ಕಡೆ ಕ್ಯಾಮೆರಾ ಅಳವಡಿಸಲಾಗಿದೆ. ಕ್ಯಾಮೆರಾ ಮೂಲಕ ಸಿಕ್ಕಿ ಬಿದ್ದು ದಂಡ ಪಾವತಿಸುವ ಪರಿಸ್ಥಿತಿಗೆ ಯಾರೊಬ್ಬರು ಒಳಗಾಗಬಾರಾದು. ಸ್ವಚ್ಛತೆ ಕಾಪಾಡುವುದು ಪರಿಸರಕ್ಕೂ ಹಿತ, ಆರೋಗ್ಯಕ್ಕೂ ಉತ್ತಮ ಎಂಬುದನ್ನು ಅರಿತುಕೊಳ್ಳಬೇಕು ಎಂದು ಮಧು ತಿಳಿಸಿದರು.
ತ್ಯಾಜ್ಯ ಸಂಗ್ರಹಿಸುವ ವಾಹನ ನಿಗದಿ ಪಡಿಸಿದ ದಿನ ಪ್ರತಿ ಬೀದಿಯಲ್ಲಿಯೂ ಸಂಚರಿಸಬೇಕು. ಸಾಕಷ್ಟು ಮಂದಿ ವಯೋವೃದ್ಧರು, ಅನಾರೋಗ್ಯವಂತರು ಇರುತ್ತಾರೆ. ಕಸ ಸಾಗಿಸುವ ಸಿಬ್ಬಂದಿ ತಾಳ್ಮೆಯಿಂದ ತ್ಯಾಜ್ಯ ಸಂಗ್ರಹ ಮಾಡಬೇಕು. ಸಿಸಿಟಿವಿ ಕ್ಯಾಮೆರಾದ ಭಯ ಬಿಟ್ಟು ಸ್ವಚ್ಛತೆಗಾಗಿ ತ್ಯಾಜ್ಯವನ್ನು ಬೇಕಾಬಿಟ್ಟಿ ಬಿಸಾಡಬಾರದು ಎನ್ನುವ ಮನವಿ ಪಂಚಾಯಿತಿಯವರದ್ದು.
ಸಿಸಿಟಿವಿ ಕ್ಯಾಮೆರಾ ಕಣ್ಗಾವಲು ಜೊತೆಗೆ ಜನರೂ ಸ್ವಚ್ಛತೆಗೆ ಕೈಜೋಡಿಸಬೇಕು. ಕಸ ಹಾಕುವುದು ಕಂಡು ಬಂದಾಗ ವಿಡಿಯೋ ಮಾಡಿ ವಾಟ್ಸ್‌ಆ್ಯಪ್ ಮಾಡಬೇಕು ಎನ್ನುತ್ತಾರೆ ಗ್ರಾಮ ಪಂಚಾಯಿತಿ ಸಿಬ್ಬಂದಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.