ADVERTISEMENT

ಹಾಸನ| ಸಮಾಜದ ಒಳಿತಿಗೆ ದುಡಿದ ಶರಣರು: ಸಂತೋಷ್‌

ಸೇವಾಲಾಲ್‌, ಕಾಯಕ ಶರಣರು, ಶಿವಾಜಿ, ಸರ್ವಜ್ಞ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2023, 6:42 IST
Last Updated 23 ಫೆಬ್ರುವರಿ 2023, 6:42 IST
ಹಾಸನದಲ್ಲಿ ಬುಧವಾರ ನಡೆದ ಸರ್ವಜ್ಞ, ಶಿವಾಜಿ, ಕಾಯಕ ಶರಣರು, ಸೇವಾಲಾಲ್‌ ಜಯಂತಿ ಅಂಗವಾಗಿ ಭಾವಚಿತ್ರಗಳ ಮೆರವಣಿಗೆಗೆ ಚಾಲನೆ ನೀಡಲಾಯಿತು
ಹಾಸನದಲ್ಲಿ ಬುಧವಾರ ನಡೆದ ಸರ್ವಜ್ಞ, ಶಿವಾಜಿ, ಕಾಯಕ ಶರಣರು, ಸೇವಾಲಾಲ್‌ ಜಯಂತಿ ಅಂಗವಾಗಿ ಭಾವಚಿತ್ರಗಳ ಮೆರವಣಿಗೆಗೆ ಚಾಲನೆ ನೀಡಲಾಯಿತು   

ಹಾಸನ: ‘ಸಂತ ಸೇವಾಲಾಲ್, ಕಾಯಕ ಶರಣರು, ಛತ್ರಪತಿ ಶಿವಾಜಿ ಮಹಾರಾಜ, ಸಂತ ಕವಿ ಸರ್ವಜ್ಞ ಸಾಮಾನ್ಯ ಮನುಷ್ಯರಾಗಿ, ಸಮಾಜದ ಒಳಿತಿಗಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು’ ಎಂದು ತಹಶೀಲ್ದಾರ್ ಸಂತೋಷ್‌ ಹೇಳಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಆಶ್ರಯದಲ್ಲಿ ಬುಧವಾರ ಹಾಸನಾಂಬ ಕಲಾಕ್ಷೇತ್ರದಲ್ಲಿ ಏರ್ಪಡಿಸಿದ್ದ ಸಂತ ಸೇವಾಲಾಲ್ ಜಯಂತಿ, ಕಾಯಕ ಶರಣರ ಜಯಂತಿ, ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ, ಸಂತ ಕವಿ ಸರ್ವಜ್ಞ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಚ್.ಎಲ್. ಮಲ್ಲೇಶ್ ಗೌಡ ಮಾತನಾಡಿ, ಭಾರತ ಖಂಡದಲ್ಲಿ ಖ್ಯಾತ ಸಂತರು, ವಚನಕಾರರು, ವಿಶ್ವಕ್ಕೆ ಹಲವಾರು ಸಾರಾಂಶಗಳನ್ನು ತಿಳಿಸಿ ಹೋಗಿದ್ದಾರೆ. ನಮ್ಮ ನೆಲ ಶರಣರ ಹೆಸರಿನಲ್ಲಿ, ಸಂತರ ಹೆಸರಿನಲ್ಲಿ ದೇಶಕ್ಕೆ ಬಹು ಮುಖ್ಯವಾದ ಕೊಡುಗೆ ನೀಡಿದೆ ಎಂದು ಹೇಳಿದರು.

ADVERTISEMENT

ವಿಶ್ವಕ್ಕೆ ಮಾದರಿಯಾದ ದೇಶ ಎಂದರೆ ಭಾರತ. ಸೇವಾಲಾಲ್ ಅವರ ಸಂದೇಶಗಳು ಶಿವಾಜಿಯವರ ಜೀವನ ಮತ್ತು ಸಾಧನೆಗಳು ಅವರ ಕೊಡುಗೆಗಳು ಮುಖ್ಯವಾದವು ಎಂದು ಹೇಳಿದರು.

ಚುಟುಕು ಸಾಹಿತ್ಯ ಪರಿಷತ್ ಹಾಸನ ತಾಲ್ಲೂಕು ಘಟಕದ ಅಧ್ಯಕ್ಷ ಸೋಮನಾಯಕ್ ಮಾತನಾಡಿ, ಸಂತ ಸೇವಾಲಾಲ್ ಜಯಂತಿ, ಕಾಯಕ ಶರಣರ ಜಯಂತಿ, ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ, ಸಂತ ಕವಿ ಸರ್ವಜ್ಞ ಜಯಂತಿ ಒಂದು ಅರ್ಥಪೂರ್ಣ ಜಯಂತಿಯಾಗಿದೆ ಎಂದು ಹೇಳಿದರು.

ಫೆ.15 ರಂದು ಸೇವಾಲಾಲ್ ಅವರ ಲೇಖನವನ್ನು ಪ್ರಕಟಣೆ ಮಾಡಿದ್ದೇವೆ. ಬಂಜಾರ ಸಮುದಾಯದವರು ಮೊಹಂಜೋದಾರ್ ನಾಗರಿಕರ ಕಾಲದಲ್ಲಿ ಕಂಡುಬಂದ ಸಮುದಾಯ. ಅತ್ಯಂತ ಶಕ್ತಿಶಾಲಿ ದಂಡನಾಯಕ, ವೀರರು ಇದ್ದಾರೆ. ಡಚ್ಚರು, ಮೊಘಲ್ ದೊರೆಗಳ ಉಪಟಳವನ್ನು ತಡೆದು, ಸಾಂಬಾರ ಪದಾರ್ಥ ಮತ್ತು ಉಪ್ಪನ್ನು ಭಾರತಕ್ಕೆ ಮಾರಾಟ ಮಾಡುವಂತೆ ಮಾಡಿದವರು ಎಂದರೆ ಬಂಜಾರ ಸಮುದಾಯದವರು. ಸೇವಾಲಾಲ್ ಅವರು ಗೋವುಗಳ ರಕ್ಷಣೆಯನ್ನು ಬಾಲ್ಯದಲ್ಲೇ ಮಾಡುತ್ತಿದ್ದರು. ತ್ರಿಕಾಲ ಜ್ಞಾನಿ. ತಮ್ಮ ತಾಯಿಯ ಕೃಪೆಯಿಂದ ಜನರಿಗೆ ಜ್ಞಾನ, ಶಿಕ್ಷಣವನ್ನು ನೀಡಿದರು. ಬಂಜಾರ ಸಮುದಾಯದವರಿಗೆ ಶಿಕ್ಷಣದ ಮಹತ್ವ ತಿಳಿಸಿಕೊಟ್ಟರು ಎಂದು ತಿಳಿಸಿದರು.

ಶಾಂತಿಗ್ರಾಮ ಪದವಿಪೂರ್ವ ಕಾಲೇಜು ಅಧ್ಯಾಪಕ ರಾಮೇಗೌಡ, ನಿವೇದಿತಾ ವಿದ್ಯಾಲಯದ ಅಧ್ಯಕ್ಷ ಎಚ್.ಜಿ. ಪಾರಸ್‌ಮಲ್, ಅಧ್ಯಾಪಕ ಬಿ.ಡಿ. ಶಂಕರೇಗೌಡ ಮಾತನಾಡಿದರು.

ಸ್ವಾಂತಂತ್ರ್ಯ ಹೊರಾಟಗಾರ ಎಚ್.ಎಂ. ಶಿವಣ್ಣ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಈ. ಕೃಷ್ಣೇಗೌಡ, ಸಮಾಜ ಸೇವಕ ಮಹಾಂತಪ್ಪ, ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.