ಹಳೇಬೀಡು: ಕಾಲೇಜು ಆವರಣದಲ್ಲಿ ಹಳೆಯ ಕಾಲದ ನೆನಪುಗಳು ಮರುಕಳಿಸಿದವು. ಸಾಂಪ್ರದಾಯಿಕ ಉಡುಪು ಧರಿಸಿದ್ದ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಹಳೆಯ ಕಾಲದ ತಿಂಡಿ–ತಿನಿಸು ಸವಿಯುತ್ತಿದ್ದರು. ಹಳೆಯ ಆಟಗಳನ್ನು ಆಡಿ, ಕುಣಿದು ಸಂಭ್ರಮಿಸಿದರು. ಪ್ರಾಚೀನ ವಸ್ತುಗಳನ್ನು ವೀಕ್ಷಿಸಿ ಪರಂಪರೆಯ ಬದಲಾವಣೆಗಳನ್ನು ಚರ್ಚಿಸಿದರು.
ಇದು ಹಳೇಬೀಡಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ನಡೆದ ಜನಪದ ಅಡುಗೆ, ಉಡುಗೆ ಹಾಗೂ ಕ್ರೀಡಾ ಉತ್ಸವ ಕಾರ್ಯಕ್ರಮದಲ್ಲಿ ಕಂಡು ಬಂದ ದೃಶ್ಯಗಳು.
‘ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಶುಭ್ರವಾದ ಬಿಳಿಯ ಪಂಚೆ– ಶರ್ಟ್ ಧರಿಸಿದ್ದರು. ವಿದ್ಯಾರ್ಥಿನಿಯರು ನಾವೇನೂ ಕಡಿಮೆ ಇಲ್ಲ ಎನ್ನುವಂತೆ ಗ್ರಾಮೀಣ ಸಂಸ್ಕೃತಿ ಬಿಂಬಿಸುವ ಸೀರೆ– ಕುಪ್ಪಸ ಧರಿಸಿದ್ದರು. ಗ್ರಾಮೀಣ ಜನಪದ ಸಂಸ್ಕೃತಿ ಬಿಂಬಿಸಲು ಸಜ್ಜಾಗಿದ್ದ ಕಾಲೇಜು ಮೈದಾನದಲ್ಲಿ ಆಧುನಿಕ ಉಡುಪು ಧರಿಸಿದವರ ಸುಳಿವು ಇರಲಿಲ್ಲ. ಕಾಲೇಜು ಅಭಿವೃದ್ಧಿ ಸಮಿತಿ ಪದಾಧಿಕಾರಿಗಳು ಹಾಗೂ ಅತಿಥಿಗಳು ಸಹ ಪರಂಪರೆ ಬಿಂಬಿಸುವ ಉಡುಗೆ ಧರಿಸಿ ಹಾಜರಾಗಿದ್ದರು’ ಎಂದು ಸಹಾಯಕ ಪ್ರಾಧ್ಯಾಪಕ ಸಂತೋಷ್ ಜೆರಾಲ್ಡ್ ತಿಳಿಸಿದರು.
‘ವಿದ್ಯಾರ್ಥಿಗಳು ಮನೆಯಲ್ಲಿ ತಯಾರಿಸಿಕೊಂಡು ತಂದು ಜೋಡಿಸಿದ್ದ ಸ್ಥಳ ಘಮಘಮಿಸುತ್ತಿತ್ತು. ಬಾಯಿಯಲ್ಲಿ ನೀರೂರಿಸುವ ತಿಂಡಿ ತಿನಿಸುಗಳನ್ನು ಖರೀದಿಸಿ, ಸವಿದ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಅತಿಥಿಗಳು ಬಾಯಿ ಚಪ್ಪರಿಸಿದರು. ರಾಗಿ ಗಿಣ್ಣು, ರವೆ ಉಂಡೆ, ಎಳ್ಳುಂಡೆ, ಶಂಕರ ಪೌಳಿ, ಶಾವಿಗೆ, ರಾಗಿ, ಜೋಳದ ರೊಟ್ಟಿ, ಹುರುಳಿ, ಕಡ್ಲೆ ಕಾಳಿನ ಚಟ್ನಿಯನ್ನು ನೆರೆದಿದ್ದವರು ಸೇವಿಸಿ ಸಂತಸ ವ್ಯಕ್ತಪಡಿಸಿದರು’ ಎಂದು ಪ್ರಾಧ್ಯಾಪಕ ಶ್ರೀನಿವಾಸ ಬಿ.ಕೆ. ಹೇಳಿದರು.
ಹಳೆಯ ನಾಣ್ಯಗಳನ್ನು ವೀಕ್ಷಿಸಿದ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಕಾಸು, ಆಣೆ ಪದ್ದತಿಯ ನಾಣ್ಯ ಚಲಾವಣೆಯ ಕುರಿತು ವಿಚಾರ ವಿನಿಮಯ ಮಾಡಿಕೊಂಡರು. ಹಳೆಯ ಅಳತೆ ಪರಿಕರಗಳನ್ನು ನೋಡಿ ಸೇರು, ಪಾವು, ಚಟಾಕು ಅಳತೆ ಹಾಗೂ ಅಂದಿನ ಕಾಲದ ದವಸ, ಧಾನ್ಯಗಳ ಕನಿಷ್ಠ ಬೆಲೆಯ ಕುರಿತು ಪ್ರಾಧ್ಯಾಪಕರು ಹೇಳಿದ ಮಾಹಿತಿ ಕೇಳಿದ ವಿದ್ಯಾರ್ಥಿಗಳು ಅಚ್ಚರಿ ವ್ಯಕ್ತಪಡಿಸಿದರು.
‘ಕೃಷಿ ಪರಿಕರಗಳಾದ ನೇಗಿಲು, ನೋಗ, ಕುಂಟೆ, ಮಚ್ಚು, ಕುಡುಗೋಲು, ಗೆಡ್ಡಗೋಲು ಪ್ರದರ್ಶನದಲ್ಲಿದ್ದವು. ಖಡ್ಗ, ನೃತ್ಯದ ಕಾಲು ಗೆಜ್ಜೆ, ಬೀಸುವ ಕಲ್ಲು, ರುಬ್ಬುವ ಕಲ್ಲು, ಕುಟ್ಟಾಣಿ, ಕಲ್ಲು ಕುಡಿಕೆ, ಮಣ್ಣಿನ ಮಡಿಕೆ ಹಾಗೂ ಲೋಹದ ಹಳೆಯ ಪಾತ್ರೆಗಳನ್ನು ನೋಡಿದಾಗ ಅಜ್ಜಿ ಹೇಳುತ್ತಿದ್ದ ಕಥೆಗಳನ್ನು ನೆನಪಿಸಿದವು’ ಎಂದು ಪ್ರಾಂಶುಪಾಲ ಜಿ.ಡಿ. ನಾರಾಯಣ ತಿಳಿಸಿದರು.
ಪೂರ್ವಿಕರು ತೊಡುತ್ತಿದ್ದ ಬಟ್ಟೆಗಳು ಅಂದಿನ ಕಾಲದ ಆಟ ಊಟ ಪದ್ಧತಿಯನ್ನು ನಮ್ಮ ವಿದ್ಯಾರ್ಥಿಗಳಿಗೆ ಪರಿಚಯಿಸಲು ಕಾರ್ಯಕ್ರಮ ಆಯೋಜಿಸಿದ್ದೇವು. ವಿದ್ಯಾರ್ಥಿಗಳು ಸಂಭ್ರಮದ ಜ್ಞಾನ ಸಂಪಾದಿಸಿದರು.ಜಿ.ಡಿ.ನಾರಾಯಣ ಪ್ರಾಚಾರ್ಯ
ಪ್ರಾಂಶುಪಾಲರು ಪ್ರಾಧ್ಯಾಪಕರ ನೆರವಿನಿಂದ ಒಂದು ವಾರದಿಂದ ತಯಾರಿ ನಡೆಸಿದ್ದೇವು. ಕಾರ್ಯಕ್ರಮದಿಂದ ಪೂರ್ವಿಕರ ಜನ ಜೀವನ ಅರಿತುಕೊಂಡೆವು.ಸ್ನೇಹಾ ತೃತೀಯ ಬಿ.ಎ. ವಿದ್ಯಾರ್ಥಿನಿ
ಮುದ ನೀಡಿದ ಹಳೆಯ ಆಟ
‘ಗಿಲ್ಲಿ ದಾಂಡು ಗೋಲಿ ಹಗ್ಗಜಗ್ಗಾಟ ಗೋಣಿ ಚೀಲದ ಓಟ ಲಗೋರಿ ಮರಕೋತಿ ಆಟಗಳನ್ನು ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಒಟ್ಟಾಗಿ ಆಡಿ ಸಂಭ್ರಮಿಸಿದರು. ಪಂಚೆ ಮೇಲಕ್ಕೆ ಕಟ್ಟಿಕೊಂಡು ಉಲ್ಲಾಸದಾಯಕವಾಗಿ ಹಳೆಯ ಆಟಗಳನ್ನು ಆಡಲಾಯಿತು. ಒಳಾಂಗಣ ಆಟಗಳಾದ ಚೌಕಾಬಾರ ಹಳಗುಳೆ ಮಣೆ ಕಣ್ಣಾ ಮುಚ್ಚಾಲೆ ಆಟದಲ್ಲಿಯೂ ಪೈಪೋಟಿ ಕಂಡು ಬಂತು’ ಎಂದು ಪ್ರಾಧ್ಯಾಪಕ ಡಾ.ಅಭಿಲಾಷ್ ತಿಳಿಸಿದರು. ಅಲಂಕರಿಸಿದ್ದ ಜೋಡೆತ್ತು ಹಾಗೂ ತಮಟೆ ವಾದನ ಕಾರ್ಯಕ್ರಮದ ವೈಭವ ಹೆಚ್ಚಿಸಿತ್ತು. ಜನಪದ ಅಡುಗೆ ಉಡುಗೆ ಹಾಗೂ ಕ್ರೀಡಾ ಉತ್ಸವದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಶತಮಾನದ ಹಿಂದೆ ಇದ್ದೇವೆ ಎನ್ನುವ ಭಾವನೆಯಲ್ಲಿ ಹಳೇಯ ಕಾಲದ ಆಟ ಊಟ ಉಡುಗೆ ತೊಡುಗೆಯನ್ನು ಅನುಭವಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.