ADVERTISEMENT

ಎರಡು ಕಡೆ ಸ್ವಾಗತ ಕಮಾನು ನಿರ್ಮಾಣ: ಶಾಸಕ ಸಿ.ಎನ್. ಬಾಲಕೃಷ್ಣ

ಚನ್ನರಾಯಪಟ್ಟಣ ಪುರಸಭೆಯ ವಿಶೇಷ ಸಾಮಾನ್ಯ ಸಭೆಯಲ್ಲಿ ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2025, 12:51 IST
Last Updated 16 ಜೂನ್ 2025, 12:51 IST
ಚನ್ನರಾಯಪಟ್ಟಣದಲ್ಲಿ ಸೋಮವಾರ ಪುರಸಭೆಯ ಸ್ಥಾಯಿಸಮಿತಿ ಅದ್ಯಕ್ಷರಾಗಿ ಆಯ್ಕೆಯಾದ ಗಣೇಶ್ ಅವರನ್ನು ಶಾಸಕ ಸಿ.ಎನ್. ಬಾಲಕೃಷ್ಣ, ಪುರಸಭಾಧ್ಯಕ್ಷ ಸಿ.ಎನ್. ಮೋಹನ್, ಉಪಾಧ್ಯಕ್ಷೆ ರಾಣಿ ಸೇರಿ ಸದಸ್ಯರು ಅಭಿನಂದಿಸಿದರು
ಚನ್ನರಾಯಪಟ್ಟಣದಲ್ಲಿ ಸೋಮವಾರ ಪುರಸಭೆಯ ಸ್ಥಾಯಿಸಮಿತಿ ಅದ್ಯಕ್ಷರಾಗಿ ಆಯ್ಕೆಯಾದ ಗಣೇಶ್ ಅವರನ್ನು ಶಾಸಕ ಸಿ.ಎನ್. ಬಾಲಕೃಷ್ಣ, ಪುರಸಭಾಧ್ಯಕ್ಷ ಸಿ.ಎನ್. ಮೋಹನ್, ಉಪಾಧ್ಯಕ್ಷೆ ರಾಣಿ ಸೇರಿ ಸದಸ್ಯರು ಅಭಿನಂದಿಸಿದರು   

ಚನ್ನರಾಯಪಟ್ಟಣ: ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಹಾಸನ ರಸ್ತೆ ಮತ್ತು ಬಿ.ಎಂ. ರಸ್ತೆ ಜೋಗಿಪುರದ ಬಳಿ ಸ್ವಾಗತ ಕಮಾನು ನಿರ್ಮಿಸಲಾಗುವುದು ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.

ಪುರಸಭಾಧ್ಯಕ್ಷ ಸಿ.ಎನ್.ಮೋಹನ್ ಅಧ್ಯಕ್ಷತೆಯಲ್ಲಿ ಸೋಮವಾರ ಏರ್ಪಡಿಸಿದ್ದ ಪುರಸಭೆಯ ವಿಶೇಷ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ‘ಶೀಘ್ರ ಟೆಂಡರ್ ಕರೆದು ಸ್ವಾಗತ ಕಮಾನು ನಿರ್ಮಿಸುವ ಕಾಮಗಾರಿ ಆರಂಭಿಸಬೇಕು. ಇದರಿಂದ ತಾಲ್ಲೂಕು ಕೇಂದ್ರಕ್ಕೆ ವಾಹನಗಳಲ್ಲಿ ಆಗಮಿಸುವ ಹೊರ ಜಿಲ್ಲೆಯ ಜನರಿಗೆ ಅನುಕೂಲವಾಗುತ್ತದೆ. ಇದರ ಬಗ್ಗೆ ಸಾಕಷ್ಟು ಮಂದಿ ಪ್ರಸ್ತಾಪಿಸಿದ್ದಾರೆ. ಅದೇ ರೀತಿ ಪಟ್ಟಣದ ಕೊಳದ ಆಂಜನೇಯಸ್ವಾಮಿ ದೇಗುಲ ಮತ್ತು ಕಲ್ಯಾಣಿಯನ್ನು ಅಭಿವೃದ್ದಿ ಪಡಿಸಲು ಕಾವೇರಿ ನೀರಾವರಿ ನಿಗಮದಿಂದ ₹49 ಲಕ್ಷ ಮಂಜೂರಾಗಿದೆ’ ಎಂದರು.

ಪಟ್ಟಣದಲ್ಲಿ ಸಿ.ಎ. ನಿವೇಶನದಲ್ಲಿರುವ ಉದ್ಯಾನಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಉದ್ಯಾನದಲ್ಲಿ ಮಕ್ಕಳ ಆಟಿಕೆಗಳನ್ನು ಅಳವಡಿಸಬೇಕು. ಉದ್ಯಾನಗಳ ನಿರ್ವಹಣೆಗೆ ಸಂಘ, ಸಂಸ್ಥೆಗಳು ಆಸಕ್ತಿ ವಹಿಸಿದರೆ ಅವುಗಳಿಗೆ ಅವಕಾಶ ಒದಗಿಸಿಕೊಡಬೇಕು ಎಂದು ಶಾಸಕ ಬಾಲಕೃಷ್ಣ ತಿಳಿಸಿದರು.         

ADVERTISEMENT

ಸದಸ್ಯ ಸಿ.ಎಸ್. ಪ್ರಕಾಶ್ ಮಾತನಾಡಿ, ‘ಪುರಸಭಾ ವ್ಯಾಪ್ತಿಯಲ್ಲಿ ಎಷ್ಟು ಉದ್ಯಾನಗಳಿವೆ ಎಂಬ ಬಗ್ಗೆ ಸಿಬ್ಬಂದಿಯಲ್ಲಿ ಮಾಹಿತಿ ಇಲ್ಲ. ಉದ್ಯಾನ ನಿರ್ವಹಣೆಗೆ ಸಂಬಂಧಿಸಿದಂತೆ ಪ್ರಕಟಣೆ ಹೊರಡಿಸಿದರೆ ಆಸಕ್ತ ಸಂಘ, ಸಂಸ್ಥೆಗಳು ಮುಂದೆ ಬರುತ್ತವೆ’ ಎಂದು ತಿಳಿಸಿದರು.

ಸದಸ್ಯ ಎಚ್.ಎನ್. ನವೀನ್ ಮಾತನಾಡಿ, ‘ಪುರಸಭೆಗೆ ಸೇರಿದ ಉದ್ಯಾನವನ್ನು ಪುರಸಭೆಯ ಅನುದಾನದಲ್ಲಿ ಅಭಿವೃದ್ಧಿ ಕೈಗೊಳ್ಳಬೇಕು. ಖಾಸಗಿ ಬಡಾವಣೆಯಲ್ಲಿರುವ ಉದ್ಯಾನವನ್ನು ಖಾಸಗಿಯವರು ಅಭಿವೃದ್ಧಿ ಕೈಗೊಳ್ಳಬೇಕು. ಒಳಾಂಗಣ ಕ್ರೀಡಾಂಗಣ ನಿರ್ಮಿಸಬೇಕು. ಅದೇ ರೀತಿ ಪಟ್ಟಣದಲ್ಲಿರುವ ಪುರಸಭೆಗೆ ಸೇರಿದ ವಿವೇಕಾನಂದ ಉದ್ಯಾನವನ್ನು ಅಭಿವೃದ್ದಿ ಮಾಡಬೇಕು’ ಎಂದು ಸಲಹೆ ನೀಡಿದರು.

ಪುರಸಭಾಧ್ಯಕ್ಷ ಸಿ.ಎನ್.ಮೋಹನ್ ಮಾತನಾಡಿ, ಪಟ್ಟಣದಲ್ಲಿರುವ ಸಾರ್ವಜನಿಕ ಉದ್ಯಾನಗಳನ್ನು ಅಭಿವೃದ್ಧಿ ಮಾಡಲಾಗುವುದು ಎಂದು ಹೇಳಿದರು.

ಪುರಸಭೆ ಉಪಾಧ್ಯಕ್ಷೆ ರಾಣಿ, ಮುಖ್ಯಾಧಿಕಾರಿ ಆರ್. ಯತೀಶ್‍ಕುಮಾರ್ ಇದ್ದರು. ಆಡಳಿತರೂಢ ಜೆಡಿಎಸ್ ಸದಸ್ಯ ಗಣೇಶ್ ಅವರನ್ನು ಸ್ಥಾಯಿಸಮಿತಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.

ಪಟ್ಟಣದ ಸಾರ್ವಜನಿಕ ಸ್ಥಳಗಳಲ್ಲಿ ಕೆಲವರು ವಾಹನದಲ್ಲಿ ತಂದು ಕಸ ಹಾಕುವ ಮೂಲಕ ಕಲುಷಿತ ವಾತಾವರಣಕ್ಕೆ ಕಾರಣರಾಗುತ್ತಿದ್ದಾರೆ. ಅಂಥ ವಾಹನಗಳ ಬಗ್ಗೆ ಮಾಹಿತಿ ನೀಡಿದವರಿಗೆ ₹1 ಸಾವಿರ ನಗದು ನೀಡಲಾಗುವುದು
ಸಿ.ಎನ್.ಬಾಲಕೃಷ್ಣ, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.