
ಹೊಳೆನರಸೀಪುರ ಶಿಕ್ಷಕರ ಭವನದಲ್ಲಿ ಬುಧವಾರ ಮಕ್ಕಳ ಹಕ್ಕು ರಕ್ಷಣೆ, ಪೋಕ್ಸೊ, ಆರೋಗ್ಯ ನಿರ್ವಹಣೆ ಕುರಿತು ಶಿಕ್ಷಣ ಇಲಾಖೆ, ತಾಲ್ಲೂಕು ವಕೀಲರ ಸಂಘ ಆಯೋಜಿಸಿದ್ದ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಹಿರಿಯ ಶ್ರೇಣಿ ನ್ಯಾಯಾಧೀಶೆ ನಿವೇದಿತಾ ಮುನವಳ್ಳಿ ಮಠ್ ಉದ್ಗಾಟಿಸಿದರು.
ಹೊಳೆನರಸೀಪುರ: ಬಾಲ್ಯ ವಿವಾಹ, ಅಪ್ರಾಪ್ತ ವಯಸ್ಕರ ಮೇಲೆ ನಡೆಯುವ ದೌರ್ಜನ್ಯ ತಡೆಗಟ್ಟಲು ಸರ್ಕಾರ ಕಠಿಣ ಕಾನೂನು ಜಾರಿಗೆ ತಂದಿದೆ. ಆದರೂ ಮಕ್ಕಳ ಮೇಲಿನ ದೌರ್ಜನ್ಯ ನಿರಂತರ ನಡೆಯುತ್ತಲೇ ಇರುವುದು ವಿಷಾದದ ಸಂಗತಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ನಿವೇದಿತಾ ಮುನವಳ್ಳಿ ಮಠ್ ನುಡಿದರು.
ಶಿಕ್ಷಣ ಇಲಾಖೆ, ತಾಲ್ಲೂಕು ವಕೀಲರ ಸಂಘ ಬುಧವಾರ ತಾಲ್ಲೂಕಿನ ಖಾಸಗಿ ಶಾಲಾ ಶಿಕ್ಷಕರಿಗೆ ಮತ್ತು ಸಿಬ್ಬಂದಿಗೆ, ಮಕ್ಕಳ ಹಕ್ಕು ರಕ್ಷಣೆ ,ಪೋಕ್ಸೊ ಕಾಯಿದೆ, ಮಾನಸಿಕ ಆರೋಗ್ಯದ ಬಗ್ಗೆ ವಿವರಿಸಲು ಆಯೋಜಿಸಿದ್ದ ಒಂದು ದಿನದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಕರು ನಿಮ್ಮ ಸುತ್ತಮುತ್ತ ಮಕ್ಕಳ ಹಕ್ಕುಗಳ ಉಲ್ಲಂಘನೆ ಆಗುತ್ತಿದ್ದರೆ ಅಥವಾ ಅಪ್ರಾಪ್ತರ ಮೇಲೆ ದೌರ್ಜನ್ಯಗಳು ನಡೆಯುತ್ತಿದ್ದರೆ ಅದನ್ನು ತಡೆಗಟ್ಟುಲು ಅಗತ್ಯ ಕ್ರಮವಹಿಸಿ, ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಲು ಸಂಪೂರ್ಣ ಸಹಕಾರ ನೀಡಬೇಕು ಎಂದರು.
ಇದೇ ವೇಳೆ ಅವರು ಶಿಕ್ಷಣ ಇಲಾಖೆಯ ಬಿಆರ್‌ಸಿ ಪರಮೇಶ್ ರಚಿಸಿರುವ ಬೆಳಗುವ ಹಣತೆಗಳು ಕೃತಿ ಬಿಡುಗಡೆ ಮಾಡಿದರು.
ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ವಿ. ಶಿವಕುಮಾರ್ ಮಕ್ಕಳ ಹಕ್ಕುಗಳ ರಕ್ಷಣೆ ನಮ್ಮ ಕರ್ತವ್ಯ ಆಗಬೇಕು. ಅಪ್ರಾಪ್ತರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ತಡೆಗಟ್ಟಲು ಶಿಕ್ಷಕರು, ಯುವಕರು, ಸಾರ್ವಜನಿಕರು ಸಹಕರಿಸಬೇಕು. ಮೊಬೈಲ್ ಬಳಕೆ ಹೆಚ್ಚಾಗಿರುವುದರಿಂದ ಇಂತಹ ಘಟನೆಗಳು ನಡೆಯಲು ಕಾರಣ ಆಗಿರಬಹುದು ಎಂದು ಅಭಿಪ್ರಾಯಪಟ್ಟರು.
ಹಿರಿಯ ವಕೀಲ ಎಚ್.ಎಸ್.ಅರುಣ್ ಕುಮಾರ್ ಮಕ್ಕಳ ಹಕ್ಕು ರಕ್ಷಣೆ, ಪೋಕ್ಸೊ ಕಾಯಿದೆ ಬಗ್ಗೆ ವಿವರಿಸಿದರು.
ಹಾಸನ ಡಯಟ್‌ನ ಹಿರಿಯ ಉಪನ್ಯಾಸಕ ರುದ್ರೇಶ್ ಮಾನಸಿಕ ಆರೋಗ್ಯದ ಬಗ್ಗೆ, ಜಿಲ್ಲಾ ಮಾನಸಿಕ ಆರೋಗ್ಯ ಘಟಕದ ಡಾ.ಕಾರ್ತೀಕ್ ಪೋಕ್ಸೊ ಕಾಯ್ದೆ ಬಗ್ಗೆ, ಶಿಕ್ಷಣ ಇಲಾಖೆಯ ಸಿಇಒ ಕಾಂತರಾಜಪ್ಪ ಹಾಗೂ ಬಿಆರ್‌ಪಿ ಎಂ.ಜಿ.ಪರಮೇಶ್ ದೈಹಿಕ ಆರೋಗ್ಯಕ್ಕೆ ಅಗತ್ಯವಾದ ವ್ಯಾಯಾಮದ ಬಗ್ಗೆ, ಬಿಆರ್‌ಪಿಗಳಾದ ನಿಂಗರಾಜು ಮತ್ತು ನಾಗರಾಜು ಅವರು ಋತು ಚಕ್ರ ಮತ್ತು ವೈಯಕ್ತಿಕ ಶುಚಿತ್ವದ ಬಗ್ಗೆ ಹಾಗೂ ತಾಲ್ಲೂಕು ಆರೋಗ್ಯ ಇಲಾಖೆಯ ಭಾನುಶ್ರೀ ಅವರು ಹದಿಹರೆಯದ ಸಮಸ್ಯೆಗಳ ಬಗ್ಗೆ ಮಾತ ಹಾಸನ ಡಯಟ್‌ನ ಹಿರಿಯ ಉಪನ್ಯಾಸಕಿ ಗೀತಾ ಉಪನ್ಯಾಸ ನೀಡಿದರು.
ತರಬೇತಿಯಲ್ಲಿ ತಾಲ್ಲೂಕಿನ ಖಾಸಗಿ ಹಾಗೂ ಅನುಧಾನಿತ ಶಾಲೆಗಳ ಶಿಕ್ಷಕ, ಶಿಕ್ಷಕಿಯರು ಭಾಗವಹಿಸಿದ್ದರು.
ನ್ಯಾಯಾಧೀಶೆ ಚೇತನಾ, ಬಿಇಒ ಸೋಮಲಿಂಗೇಗೌಡ, ಶಿಕ್ಷಣ ಇಲಾಖೆಯ ಇಸಿಒ ರಾಮಚಂದ್ರು, ಕೇಶವ್, ದೈಹಿಕ ಶಿಕ್ಷಣ ಸಂಯೋಜಕ ಸುಜಾತ್ ಆಲಿ, ಡಯಟ್‌ನ ಗೀತಾ ರುದ್ರೇಶ್ ಭಾಗವಹಿಸಿದ್ದರು. ಆಶಾ ಕಾರ್ಯಕ್ರಮ ನಿರೂಪಿಸಿದರು. ಪರಮೇಶ್ ಸ್ವಾಗತಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.