
ಹಾಸನ: ಪೊಲೀಸ್ ಅಧಿಕಾರಿಗಳು ಮಕ್ಕಳ ಕಾನೂನುಗಳನ್ನು ಸರಿಯಾದ ಸ್ವರೂಪದಲ್ಲಿ ಅರ್ಥ ಮಾಡಿಕೊಂಡು, ಸಮರ್ಪಕವಾಗಿ ಅನುಷ್ಠಾನ ಮಾಡಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ದಾಕ್ಷಾಯಿಣಿ ಬಿ.ಕೆ. ತಿಳಿಸಿದರು.
ನಗರದ ಜಿಲ್ಲಾ ಕ್ರೀಡಾಂಗಣದ ಯೂತ್ ಹಾಸ್ಟೆಲ್‍ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ ಮತ್ತು ಮಕ್ಕಳ ರಕ್ಷಣಾ ಘಟಕದ ವತಿಯಿಂದ ಬುಧವಾರ ಆಯೋಜಿಸಿದ್ದ ಬಾಲ್ಯವಿವಾಹ ನಿಷೇಧ, ಪೋಕ್ಸೊ, ಬಾಲನ್ಯಾಯ ಕಾಯ್ದೆ ಕುರಿತಾದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಯೋಗ್ಯತೆ, ಅಸಹಾಯಕತೆಯನ್ನು ಸಮಾಜದ ದುಷ್ಟ ಶಕ್ತಿಗಳು ದುರ್ಬಳಕೆ ಮಾಡಿಕೊಂಡು, ಅವರಿಂದ ತಪ್ಪುಗಳನ್ನು ಮಾಡಿಸುವುದು, ಮಕ್ಕಳ ಹಕ್ಕುಗಳ ಉಲ್ಲಂಘನೆ, ಮಕ್ಕಳ ಮೇಲೆ ದೈಹಿಕ, ಲೈಂಗಿಕ ಸ್ವರೂಪದ ಹಿಂಸೆಗಳು, ದೌರ್ಜನ್ಯಗಳನ್ನು ಎಸಗುತ್ತಿದ್ದಾರೆ. ಇದನ್ನು ತಡೆಯಬೇಕು ಎಂದರು.
ಹಾಸನ ಜಿಲ್ಲೆ ಬಾಲ್ಯವಿವಾಹ ಪ್ರಕರಣಗಳಲ್ಲಿ 4ನೇ ಸ್ಥಾನದಲ್ಲಿದೆ. ಇದು ನಮಗೆ ಅವಮಾನಕರ ಸಂಗತಿ. ಪೊಲೀಸ್ ಅಧಿಕಾರಿಗಳು ಬಾಲ್ಯವಿವಾಹದ ಕುರಿತು ಆರಂಭದಲ್ಲಿ ಅರಿವು ಮೂಡಿಸಲು ಮುಂದಾಗಬೇಕು. ಬಾಲ್ಯ ವಿವಾಹಗಳು ನಡೆದಿರುವುದು ಕಂಡು ಬಂದರೆ ತಕ್ಷಣ ಕಾನೂನು ಕ್ರಮ ತೆಗೆದುಕೊಂಡು, ಅಂತಹ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಯದಂತೆ ತಡೆಯಬೇಕು. ಇದರಿಂದ ಬಾಲ ಗರ್ಭಿಣಿ ಆಗುವುದನ್ನು ತಡೆಯಬಹುದು. ಅಧಿಕಾರಿಗಳು ಬಾಲ್ಯವಿವಾಹ ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಬಾಲ್ಯವಿವಾಹ ಕಾಯ್ದೆಯ ಪ್ರಕಾರ ಬಾಲ್ಯವಿವಾಹಗಳನ್ನು ತಡೆಗಟ್ಟುವುದು, ಒಂದು ವೇಳೆ ವಿವಾಹವಾಗುತ್ತಿದ್ದರೆ ಸಂರಕ್ಷಿಸುವುದು, ವಿವಾಹ ಅಥವಾ ವಿವಾಹ ಪೂರ್ವ ಕಾರ್ಯ ನಡೆದಿದ್ದರೆ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.
ಬಾಲ್ಯವಿವಾಹ ನಿಷೇಧ ಕಾಯ್ದೆಯನ್ವಯ ನ್ಯಾಯಾಲಯದಲ್ಲಿ ಪ್ರತಿಬಂಧಕಾಜ್ಞೆ ತೆಗೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಅಧಿಕಾರಿಗಳು ಇದನ್ನು ಸದ್ಬಳಕೆ ಮಾಡಿಕೊಂಡು ಪ್ರಕರಣ ತಡೆಯಲು ಕಾರ್ಯಪ್ರವೃತ್ತರಾಗಿರಿ ಎಂದರು.
ಜಿಲ್ಲಾ ಪಂಚಾಯಿತಿಯ ಯೋಜನಾ ನಿರ್ದೇಶಕ ಚಂದ್ರಮೌಳಿ ಮಾತನಾಡಿ, ಅರಿವು ಕಾರ್ಯಕ್ರಮಗಳಲ್ಲಿ ಗ್ರಾಮ ಪಂಚಾಯಿತಿಗಳನ್ನು ಸೇರಿಸಿಕೊಂಡು ಮಾಡಬೇಕಿದೆ. ಈಗ ಮಕ್ಕಳ ವಿಶೇಷ ಗ್ರಾಮ ಸಭೆಗಳು ನಡೆಯುತ್ತಿವೆ. ಇದರಲ್ಲಿ ಪೊಲೀಸ್ ಅಧಿಕಾರಿಗಳು ಭಾಗವಹಿಸಿ ಬಾಲ್ಯವಿವಾಹ, ಪೋಕ್ಸೊ, ಬಾಲ ಗರ್ಭಿಣಿ ತಡೆಗೆ ಅರಿವು ಮೂಡಿಸಬೇಕು ಎಂದರು.
ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಮಧುಕುಮಾರಿ ಅಧ್ಯಕ್ಷತೆ ವಹಿಸಿದರು, ಡಿವೈಎಸ್‍ಪಿ ಗಂಗಾಧರಪ್ಪ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದಿಲೀಪ್ ಕೆ.ಜಿ. ವೇದಿಕೆಯಲ್ಲಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿದ್ದ ಕಾಂತರಾಜು ತರಬೇತಿ ನೀಡಿದರು.
ಬಾಲ್ಯವಿವಾಹ ಪ್ರಕರಣಗಳಲ್ಲಿ ಹಾಸನ ಜಿಲ್ಲೆಗೆ 4ನೇ ಸ್ಥಾನ | ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಯದಂತೆ ತಡೆಯಿರಿ | ಮಕ್ಕಳ ವಿಶೇಷ ಗ್ರಾಮ ಸಭೆಗಳಲ್ಲಿ ಅರಿವು ಮೂಡಿಸಲು ಸೂಚನೆ
ಬಾಲ್ಯವಿವಾಹ ನಿಷೇಧ ಕರ್ನಾಟಕ ತಿದ್ದುಪಡಿ ಕಾಯ್ದೆಯನ್ವಯ ಪೊಲೀಸ್ ಅಧಿಕಾರಿಗಳಿಗೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಲು ಅವಕಾಶ ನೀಡಿದ್ದು ಅದನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಬೇಕು.ದಾಕ್ಷಾಯಿಣಿ ಬಿ.ಕೆ. ಹಿರಿಯ ಸಿವಿಲ್ ನ್ಯಾಯಾಧೀಶೆ
ತಡ ಮಾಡದೇ ಪ್ರಕರಣ ದಾಖಲಿಸಿ
ಮಕ್ಕಳ ಪ್ರಕರಣಗಳು ಬಹಳ ಸೂಕ್ಷ್ಮ ವಿಚಾರ. ಪೋಷಕರು ಮಕ್ಕಳಿಗೆ ಏನಾದರೂ ತೊಂದರೆಯಾದರೆ ಆತಂಕಕ್ಕೆ ಒಳಗಾಗುತ್ತಾರೆ. ಹಾಗಾಗಿ ಬಾಲ್ಯವಿವಾಹ ಪೋಕ್ಸೊ ಇನ್ನಿತರ ಯಾವುದೇ ಮಕ್ಕಳ ಪ್ರಕರಣ ಬಂದ ಕೂಡಲೇ ಪ್ರಕರಣ ದಾಖಲು ಮಾಡಬೇಕು. ವಿಳಂಬ ತಡೆ ಮಾಡಬಾರದು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಮ್ಮಯ್ಯ ತಿಳಿಸಿದರು. ಮಕ್ಕಳು ಕಾಣೆಯಾದ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಪತ್ತೆಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ದುರ್ಬಳಕೆ ಇನ್ನಿತರೆ ಸಮಸ್ಯೆಗೆ ಮಕ್ಕಳು ಒಳಗಾಗಬಹುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.