ADVERTISEMENT

ಚುನಾವಣೆಯಲ್ಲಿ 22 ಸ್ಥಾನ ಗೆಲ್ಲಲು ಪಣ: ವಿಜಯೇಂದ್ರ ಕರೆ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2019, 14:18 IST
Last Updated 28 ಫೆಬ್ರುವರಿ 2019, 14:18 IST
ಹಾಸನದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ವಿಜಯ ಲಕ್ಷ್ಯ ಯುವ ಸಮಾವೇಶದಲ್ಲಿ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಮಾತನಾಡಿದರು.
ಹಾಸನದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ವಿಜಯ ಲಕ್ಷ್ಯ ಯುವ ಸಮಾವೇಶದಲ್ಲಿ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಮಾತನಾಡಿದರು.   

ಹಾಸನ: ‘ಭಾರತದ ಭವಿಷ್ಯ ನಿರ್ಮಿಸುವ ಚುನಾವಣೆ ಆಗಿರುವ ಕಾರಣ ಹಾಸನ ಲೋಕಸಭಾ ಕ್ಷೇತ್ರವೂ ಬಿಜೆಪಿ ಪಾಲಾಗಬೇಕು. ನಿಸ್ವಾರ್ಥದಿಂದ ಕೆಲಸ ಮಾಡಿ, ನರೇಂದ್ರ ಮೋದಿ ಅವರನ್ನು ಮತ್ತೊಂದು ಅವಧಿಗೆ ಪ್ರಧಾನಿ ಮಾಡಲು ಶಪಥ ಮಾಡಬೇಕು’ ಎಂದು ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಜಯೇಂದ್ರ ಕರೆ ನೀಡಿದರು.

ನಗರದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಯುವ ಘಟಕದ ವತಿಯಿಂದ ಆಯೋಜಿಸಿದ್ದ ಬಿಜೆಪಿ ವಿಜಯ ಲಕ್ಷ್ಯ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದಂತೆ ಲೋಕಸಭಾ ಚುನಾವಣೆಯಲ್ಲಿ 22 ಸ್ಥಾನ ಗೆಲ್ಲಬೇಕು. ಅವರಿಗೆ ರಾಜಕೀಯ ಶಕ್ತಿ ಕೊಟ್ಟ ಜಿಲ್ಲೆ ಇದು. ಆಗ ಜೆಡಿಎಸ್ ಹೆಸರಿಗೂ ಇರಲಿಲ್ಲ. ಬಿಎಸ್ ವೈ ಸಿ.ಎಂ ಆಗಬೇಕೆಂದು ಜನರು ಬಯಸಿದ್ದರು. ಆದರೆ, ಸ್ವಲ್ಪದರಲ್ಲೇ ಅವಕಾಶ ತಪ್ಪಿತು’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

'ಬಜೆಟ್‌ ಮಂಡನೆಗೂ ಮುನ್ನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೂ ಸಮ್ಮಿಶ್ರ ಸರ್ಕಾರ ಉಳಿಯುವುದಿಲ್ಲ ಎಂಬುದು ಗೊತ್ತಿತ್ತು. ಸಚಿವ ಎಚ್.ಡಿ.ರೇವಣ್ಣ ಅವರು ನಿತ್ಯ ವಿವಿಧ ದೇವಾಲಯಗಳಿಗೆ ತೆರಳಿ ಪೂಜೆ ಮಾಡುತ್ತಿದ್ದರು. ಅಲ್ಲದೇ ಆಡಿಯೊ ಸಂಭಾಷಣೆ ಸೃಷ್ಟಿಸಿ ಸುಳ್ಳು ಆಪಾದಾನೆ ಮಾಡಿದರು’ ಎಂದು ಟೀಕಿಸಿದರು.

‘ಕಾಂಗ್ರೆಸ್ 78 ಸ್ಥಾನ ಬಂದರೂ ಬಿಜೆಪಿ ದೂರ ಇಡಬೇಕೆಂಬ ಕಾರಣಕ್ಕೆ ಜೆಡಿಎಸ್ ಗೆ ಬೆಂಬಲ ನೀಡಿತು. ಆಡಿಯೊ ಬಿಡುಗಡೆ ಬಳಿಕ ಶಾಸಕ ಪ್ರೀತಂ ಜೆ.ಗೌಡ ಮನೆ ಮುಂದೆ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಬಿಜೆಪಿಯವರು ಹೇಡಿಗಳಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ಪ್ರೀತಂ ಜೆ.ಗೌಡ ಮಾತನಾಡಿ, ‘ದೇಶವೇ ನನ್ನ ಕುಟುಂಬ ಎಂದು ಭಾವಿಸಿರುವ ಪ್ರಧಾನಿ ನರೇಂದ್ರ ಮೋದಿ ಬೇಕೋ, ಕುಟುಂಬವೇ ದೇಶ ಎನ್ನುವ ದೇವೇಗೌಡ ಬೇಕೋ ಎಂಬುದನ್ನು ಜನರು ನಿರ್ಧರಿಸಬೇಕು. ಮುಂದಿನ 20 ವರ್ಷದಲ್ಲಿ ವಿಜಯೇಂದ್ರ ಅವರು ಮಹಾನ್ ನಾಯಕರಾಗಿ ಬೆಳೆಯುತ್ತಾರೆ’ ಎಂದು ಭವಿಷ್ಯ ನುಡಿದರು.

ರಾಜ್ಯ ಕಾರ್ಯದರ್ಶಿ ತಮ್ಮೇಶಗೌಡ ಮಾತನಾಡಿ, ‘ದೇವೇಗೌಡರನ್ನು ಮನೆಗೆ ಕಳುಹಿಸಲು ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಮೋದಿ ಭ್ರಷ್ಟಾಚಾರ ರಹಿತ ಅಡಳಿತ ನೀಡಿದ್ದಾರೆ. ತಲೆ ತಗ್ಗಿಸುವ ಕೆಲಸವನ್ನು ಮಾಡಿಲ್ಲ’ ಎಂದರು.
ಮುಖಂಡರಾದ ಭುವನಾಕ್ಷ, ಕುರುಣಾಕರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ನಾಗೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.