ADVERTISEMENT

ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರಕ್ಕಾಗಿ ಸಿ.ಎಂ. ಬಳಿ ನಿಯೋಗ

​ಪ್ರಜಾವಾಣಿ ವಾರ್ತೆ
Published 21 ಮೇ 2019, 20:02 IST
Last Updated 21 ಮೇ 2019, 20:02 IST

ಸಕಲೇಶಪುರ: ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಆಗ್ರಹಿಸಿ ಸರ್ಕಾರದ ಗಮನ ಸೆಳೆಯಲು ಹಾಸನ ಜಿಲ್ಲಾ ಪ್ಲಾಂಟರ್ಸ್‌ ಸಂಘದ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಿದೆ ಎಂದು ಹಾಸನ ಜಿಲ್ಲಾ ಬೆಳೆಗಾರರ ಸಂಘದ ನೂತನ ಅಧ್ಯಕ್ಷ ತೋ.ಚಾ. ಅನಂತಸುಬ್ಬರಾಯ ಹೇಳಿದರು.

ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಕಲೇಶಪುರ ಹಾಗೂ ಆಲೂರು ತಾಲ್ಲೂಕುಗಳಲ್ಲಿ ಒಂದೂವರೆ ವರ್ಷದಿಂದ ಕಾಡಾನೆಗಳು ನಿರಂತರವಾಗಿ ರೈತರ ಬೆಳೆ ನಾಶ ಮಾಡುತ್ತಲೇ ಇವೆ. ಜೀವ ಹಾನಿ ಮಾಡುತ್ತಿವೆ.

ಸುಮಾರು 50ಕ್ಕೂ ಹೆಚ್ಚು ಮಂದಿ ಜೀವ ಕಳೆದುಕೊಂಡಿದ್ದಾರೆ. ಅವರ ಕುಟುಂಬಗಳು ನಿತ್ಯ ಕಣ್ಣೀರಿನಲ್ಲಿ ಕೈತೊಳೆಯುತ್ತಿವೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ರೂಪಿಸುವಂತೆ ಹಾಸನ ಜಿಲ್ಲಾ ಪ್ಲಾಂಟರ್ಸ್‌ ಸಂಘ ಹಾಗೂ ರಾಜ್ಯ ಬೆಳೆಗಾರರ ಒಕ್ಕೂಟ ಹತ್ತಾರು ಬಾರಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಮನವಿ ಸಲ್ಲಿಸಿ, ಬೃಹತ್‌ ಪ್ರತಿಭಟನೆಗಳನ್ನು ನಡೆಸಿ ಸಮಸ್ಯೆಯ ಗಂಭೀರತೆ ತಿಳಿಸಲಾಗಿದೆ. ಆದರೂ ಸಹ ಯಾವುದೇ ಪರಿಹಾರ ಕಂಡಿಲ್ಲ. ಬದಲಿಗೆ ಕಾಡಾನೆಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯುವ ತನಕ ತಮ್ಮ ಸಂಘ ಸುಮ್ಮನಿರುವುದಿಲ್ಲ. ಎಲ್ಲಾ ಕಾಡಾನೆಗಳನ್ನೂ ಸ್ಥಳಾಂತರಿಸುವಂತೆ ಆಗ್ರಹಿಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ನಿರಂತರ ಒತ್ತಡ ಹೇರಲಾಗುವುದು ಎಂದರು.

ಪಂಪ್‌ಸೆಟ್ ಹೊಂದಿರುವ ಕಾಫಿ ಬೆಳೆಗಾರರನ್ನು ಎಲ್ಟಿ 4 ಸಿ ನಿಂದ ಎಲ್ಡಿ 4 ಎ ಗೆ ಸೇರ್ಪಡೆಗೊಳಿಸಿ, ಹಾಲಿ ಇರುವ ವಿದ್ಯುಚ್ಛಕ್ತಿ ಪಂಪ್‌ಸೆಟ್‌ ಬಳಕೆದಾರರ ಬಾಕಿ ಹಣವನ್ನು ಸಂಪೂರ್ಣವಾಗಿ ಮನ್ನಾ ಮಾಡುವಂತೆ ಆಗ್ರಹಿಸಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ಸಂಕಷ್ಟದಲ್ಲಿರುವ ಬೆಳೆಗಾರರಿಗೆ ಹವಾಮಾನ ವೈಪರೀತ್ಯದಿಂದ ಅವೈಜ್ಞಾನಿಕ ರೀತಿಯಲ್ಲಿ ರಾಸಾಯನಿಕ ಉಪಯೋಗದಿಂದ ಆಗುತ್ತಿರುವ ನಷ್ಟವನ್ನು ತಪ್ಪಿಸಬೇಕಾಗಿದೆ. ಈ ನಿಟ್ಟಿನಲ್ಲಿ ಉತ್ಪಾದನೆಯನ್ನು ಹೆಚ್ಚಿಸುವ ಸಲುವಾಗಿ, ರೈತರ ಮನೆ ಬಾಗಿಲಿಗೆ ಹೋಗಿ ಜಮೀನಿನ ಮಣ್ಣಿನ ಮಾದರಿ ಪಡೆದು ಮಣ್ಣು ಪರೀಕ್ಷೆ ಮಾಡಿಸಿ ವೈಜ್ಞಾನಿಕ ಮಾಹಿತಿ ನೀಡಲಾಗುವುದು ಎಂದರು.

ಕಾಫಿ ಬೆಳೆಗಾರರ ಕುಟುಂಬಗಳಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಒತ್ತು ನೀಡಲಾಗುವುದು. ಸಂಪನ್ಮೂಲ ವ್ಯಕ್ತಿಗಳನ್ನು ಕರೆಯಿಸಿ ವಿಚಾರ ಸಂಕಿರಣ ನಡೆಸಲಾಗುವುದು. ಕಾಫಿ ಬೆಳೆಯ ಮಾಹಿತಿ ಬಗ್ಗೆ ವೆಬ್ ತರಗತಿಗಳನ್ನು ಪರಿಣಾಮಕಾರಿಯಾಗಿ ನಡೆಸಲಾಗುವುದು. ಮುಂದಿನ 2 ವರ್ಷಗಳಲ್ಲಿ ಕಾಫಿ ಬೆಳೆಗಾರರ ಸಂಘಟನೆಯನ್ನು ಸಧೃಡಗೊಳಿಸುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ಕಾರ್ಯದರ್ಶಿ ವಿಶ್ವನಾಥ್ ನಾಯಕ್, ಖಚಾಂಚಿ ಪರಮೇಶ್, ಸಂಘಟನಾ ಕಾರ್ಯದರ್ಶಿ ಸಂದೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.