ADVERTISEMENT

ಕ್ರೀಡಾಪಟುಗಳಿಗೆ ಸರ್ಕಾರದ ಪ್ರೋತ್ಸಾಹ ಅಗತ್ಯ: ಶಾಸಕ ಸಿ.ಎನ್. ಬಾಲಕೃಷ್ಣ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2025, 1:59 IST
Last Updated 3 ಆಗಸ್ಟ್ 2025, 1:59 IST
ಬಾಗೂರು ಹೋಬಳಿ ಕೇಂದ್ರದ ಸರ್ಕಾರಿ ಹಿರಿಯ ಪ್ರಾಥಮಿಕ (ಹಳೆಯ) ಶಾಲಾ ಆವರಣದಲ್ಲಿ ತಾಲ್ಲೂಕು ಶಿಕ್ಷಣ ಇಲಾಖೆ ಆಯೋಜಿಸಿದ್ದ ಹೋಬಳಿ ಮಟ್ಟದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ 2025–26ನೇ ಸಾಲಿನ ಕ್ರೀಡಾಕೂಟಕ್ಕೆ ಶಾಸಕ ಸಿ.ಎನ್. ಬಾಲಕೃಷ್ಣ ಚಾಲನೆ ನೀಡಿದರು
ಬಾಗೂರು ಹೋಬಳಿ ಕೇಂದ್ರದ ಸರ್ಕಾರಿ ಹಿರಿಯ ಪ್ರಾಥಮಿಕ (ಹಳೆಯ) ಶಾಲಾ ಆವರಣದಲ್ಲಿ ತಾಲ್ಲೂಕು ಶಿಕ್ಷಣ ಇಲಾಖೆ ಆಯೋಜಿಸಿದ್ದ ಹೋಬಳಿ ಮಟ್ಟದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ 2025–26ನೇ ಸಾಲಿನ ಕ್ರೀಡಾಕೂಟಕ್ಕೆ ಶಾಸಕ ಸಿ.ಎನ್. ಬಾಲಕೃಷ್ಣ ಚಾಲನೆ ನೀಡಿದರು   

ಬಾಗೂರು: ಒಲಿಂಪಿಕ್ಸ್ ಸೇರಿದಂತೆ ಪ್ರತಿಷ್ಠಿತ ಕ್ರೀಡಾ ಸ್ಪರ್ಧೆಗಳಲ್ಲಿ ಭಾರತದ ಕ್ರೀಡಾಪಟುಗಳು ಹೆಚ್ಚಿನ ಪದಕ ಗೆಲ್ಲಲು ಕ್ರೀಡಾಪಟುಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಹೆಚ್ಚಿನ ಪ್ರೋತ್ಸಾಹದ ಅವಶ್ಯಕತೆ ಇದೆ ಎಂದು ಶಾಸಕ ಸಿ.ಎನ್‌ ಬಾಲಕೃಷ್ಣ ಹೇಳಿದರು.

ಹೋಬಳಿ ಕೇಂದ್ರದ ಸರ್ಕಾರಿ ಹಿರಿಯ ಪ್ರಾಥಮಿಕ (ಹಳೆಯ) ಶಾಲಾ ಆವರಣದಲ್ಲಿ ತಾಲ್ಲೂಕು ಶಿಕ್ಷಣ ಇಲಾಖೆ ವತಿಯಿಂದ ಹೋಬಳಿ ಮಟ್ಟದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ 2025–26ನೇ ಸಾಲಿನ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.

ವಿಶ್ವಮಟ್ಟದ ಕ್ರೀಡೆಗಳಲ್ಲಿ ಅಮೆರಿಕ, ಜಪಾನ್, ಚೀನಾ ಸೇರಿದಂತೆ ಕೆಲವು ದೇಶಗಳು ಹೆಚ್ಚಿನ ಪದಕವನ್ನು ಗೆಲ್ಲುತ್ತಿವೆ. ಅದೇ ರೀತಿ ಪದಕದ ಪಟ್ಟಿಯಲ್ಲಿ ಉತ್ತಮ ಸ್ಥಾನ ಪಡೆಯಲು ದೇಶದ ಕ್ರೀಡಾಪಟುಗಳಿಗೆ ಹೆಚ್ಚಿನ ತರಬೇತಿ ಪ್ರೋತ್ಸಾಹದ ಅವಶ್ಯಕತೆ ಇದೆ. ಇದಕ್ಕೆ ಸರ್ಕಾರಗಳು ಕ್ರೀಡಾ ಇಲಾಖೆಗೆ ಹೆಚ್ಚಿನ ಅನುದಾನ ನೀಡುವಂತೆ ಒತ್ತಾಯಿಸಿದರು.

ADVERTISEMENT

ಹೋಬಳಿ ಕೇಂದ್ರದ ವ್ಯಾಪ್ತಿಯಲ್ಲಿ ಶೈಕ್ಷಣಿಕವಾಗಿ ಮಕ್ಕಳಿಗೆ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣದ ಜೊತೆಗೆ ಕ್ರೀಡೆಗೂ ಹೆಚ್ಚಿನ ತರಬೇತಿ ನೀಡಲಾಗುತ್ತಿದೆ. ತಾಲ್ಲೂಕಿನಲ್ಲಿ ದೈಹಿಕ ಶಿಕ್ಷಕರ ಕೊರತೆ ಅನೇಕ ವರ್ಷಗಳಿಂದ ಇದ್ದು, ಖಾಲಿ ಇರುವ ದೈಹಿಕ ಶಿಕ್ಷಕರ ಹುದ್ದೆ ತುಂಬುವಂತೆ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಲಾಗಿದೆ. ಈ ಕೊರತೆಯಿಂದ ಮಕ್ಕಳಿಗೆ ವಾಲಿಬಾಲ್, ಕೊಕ್ಕೊ ಸೇರಿದಂತೆ ವಿವಿಧ ಕ್ರೀಡೆಗಳಿಗೆ ಹೆಚ್ಚಿನ ತರಬೇತಿ ನೀಡಲು ಸಾಧ್ಯವಾಗುತ್ತಿಲ್ಲ ಎಂದರು.

ಕ್ರೀಡೆಗಳಲ್ಲಿ ಗೆಲುವು–ಸೋಲು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಕೇವಲ ಗೆಲುವನ್ನೇ ಮಾನದಂಡವಾಗಿ ಇಟ್ಟುಕೊಂಡು ಸ್ಪರ್ಧೆ ಮಾಡಬಾರದು. ಸೋತ ಜಾಗದಲ್ಲೇ ಗೆಲುವನ್ನು ಹುಡುಕಬೇಕು. ಕ್ರೀಡಾಪಟುಗಳು ಆತ್ಮಸ್ಥೈರ್ಯವನ್ನು ಬೆಳೆಸಿಕೊಳ್ಳಬೇಕೆಂದು ಸಲಹೆ ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್. ದೀಪ ಮಾತನಾಡಿದರು.

ಹೋಬಳಿ ವ್ಯಾಪ್ತಿಯ ಎಲ್ಲಾ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಗಳ ಮಕ್ಕಳು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು. ಕ್ರೀಡಾಕೂಟಕ್ಕೆ ಹಳೆಯ ವಿದ್ಯಾರ್ಥಿಗಳು ಮತ್ತು ಬಾಗೂರು ಯುವಕ ಬಳಗ ಹೆಚ್ಚಿನ ಸಹಕಾರ ನೀಡಿದ್ದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ಕ್ರೀಡಾಧಿಕಾರಿ ಆನಂದ್, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಚ್. ಶಿವಣ್ಣ, ಬಾಗೂರು ಗ್ರಾ.ಪಂ ಅಧ್ಯಕ್ಷ ಕೆಂಪೇಗೌಡ, ಉದ್ಯಮಿಗಳಾದ ಭುವನಹಳ್ಳಿ ಯೋಗೇಶ್, ಮರುನಹಳ್ಳಿ ದೇವರಾಜ್, ಮುಖಂಡರಾದ ಓಬಳಾಪುರ ಬಸವರಾಜ್, ರಾಮಚಂದ್ರು, ಶಿವಶಂಕರ ಕುಂಟೆ, ಮನು, ಸ್ಟುಡಿಯೋ ರಘು, ಕಾಂತರಾಜ್, ಹುಲಿಕೆರೆ ಸಂಪತ್ ಕುಮಾರ್, ಮಲ್ಲೇಶ್, ಇಸಿಒ ಜೈಪ್ರಕಾಶ್, ಬಿಆರ್‌ಪಿ ಶಾಂತರಾಜ್, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಜ್ಯೋತಿ, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಮುಖ್ಯ ಶಿಕ್ಷಕರಾದ ಲತೀಫ್, ಮಂಜುಳಾ, ಸೇರಿದಂತೆ ಎಲ್ಲಾ ಶಾಲೆಗಳ ಶಿಕ್ಷಕರು ಮತ್ತು ದೈಹಿಕ ಶಿಕ್ಷಕರು ಹಾಗೂ ಮಕ್ಕಳ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.