ADVERTISEMENT

ತೆಂಗು ಸಂರಕ್ಷಣೆಗೆ ತುರ್ತು ಕ್ರಮ ಕೈಗೊಳ್ಳಿ: ಶಾಸಕ ಕೆ.ಎಂ. ಶಿವಲಿಂಗೇಗೌಡ ಸೂಚನೆ

ದಿಶಾ ಸಭೆಯಲ್ಲಿ ಅಧಿಕಾರಿಗಳಿಗೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಸೂಚನೆ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2025, 5:02 IST
Last Updated 18 ನವೆಂಬರ್ 2025, 5:02 IST
ಹಾಸನದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ದಿಶಾ ಸಭೆಯಲ್ಲಿ ಸಂಸದ ಶ್ರೇಯಸ್ ಪಟೇಲ್‌ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಸಿಇಒ ಬಿ.ಆರ್.ಪೂರ್ಣಿಮಾ, ಶಾಸಕ ಕೆ.ಎಂ.ಶಿವಲಿಂಗೇಗೌಡ, ಜಿಲ್ಲಾಧಿಕಾರಿ ಕೆ.ಎಸ್‌.ಲತಾಕುಮಾರಿ ಪಾಲ್ಗೊಂಡಿದ್ದರು
ಹಾಸನದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ದಿಶಾ ಸಭೆಯಲ್ಲಿ ಸಂಸದ ಶ್ರೇಯಸ್ ಪಟೇಲ್‌ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಸಿಇಒ ಬಿ.ಆರ್.ಪೂರ್ಣಿಮಾ, ಶಾಸಕ ಕೆ.ಎಂ.ಶಿವಲಿಂಗೇಗೌಡ, ಜಿಲ್ಲಾಧಿಕಾರಿ ಕೆ.ಎಸ್‌.ಲತಾಕುಮಾರಿ ಪಾಲ್ಗೊಂಡಿದ್ದರು   

ಹಾಸನ: ತೆಂಗು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದು, ರೋಗಬಾಧೆ ಇದೇ ರೀತಿ ಮುಂದುವರಿದರೆ ಜಿಲ್ಲೆಯಲ್ಲಿ ತೆಂಗು ಉಳಿಯುವುದಿಲ್ಲ. ಕೂಡಲೇ ಕೇಂದ್ರ ಸರ್ಕಾರದ ಜೊತೆ ಮಾತುಕತೆ ನಡೆಸಿ ತೆಂಗು ಬೆಳೆ ಸಂರಕ್ಷಣೆಗೆ ತುರ್ತು ಕ್ರಮ ಕೈಗೊಳ್ಳುವಂತೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಸೂಚನೆ ನೀಡಿದರು.

ಸಂಸದ ಶ್ರೇಯಸ್ ಪಟೇಲ್ ಅಧ್ಯಕ್ಷತೆಯಲ್ಲಿ ಸೋಮವಾರ ಇಲ್ಲಿನ ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ನಡೆದ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ (ದಿಶಾ)ಯಲ್ಲಿ ಅವರು ಮಾತನಾಡಿದರು.

40 ಲಕ್ಷ ಗಿಡಗಳಿಗೆ ಕೀಟಬಾಧೆ ಇದೆ ಎಂದು ಗೊತ್ತಿದೆ. ಸಮರೋಪಾದಿಯಲ್ಲಿ ಒಂದೇ ಬಾರಿಗೆ ಔಷಧಿ ಸಿಂಪಡಣೆ ಮಾಡುವುದರಿಂದ ಕಾಯಿಲೆ ಹತೋಟಿಗೆ ಬರಲಿದೆ. ಈ ನಿಟ್ಟಿನಲ್ಲಿ ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದ ಅವರು, ಹಾಸನ, ಹೊಳೆನರಸೀಪುರ, ಅರಸೀಕೆರೆ ಸೇರಿದಂತೆ ತೆಂಗು ಬೆಳೆ ಬೆಳೆಯುವ ತಾಲ್ಲೂಕಿನ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕಿದೆ ಎಂದರು.

ADVERTISEMENT

ತೆಂಗಿನ ಬೆಳೆಗೆ ಕಪ್ಪು ತಲೆ ಹುಳ, ಬಿಳಿ ಸುಳಿ, ಕಾಂಡಕೊರಕ ಸೇರಿದಂತೆ 80 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ 40 ಲಕ್ಷ ತೆಂಗಿನ ಮರಗಳಿಗೆ ಹಾನಿಯಾಗಿದೆ. ಈ ನಿಟ್ಟಿನಲ್ಲಿ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಯೋಗೇಶ್‌ ತಿಳಿಸಿದರು.

ತೋಟಗಾರಿಕೆ ಇಲಾಖೆಗೆ ಕೇಂದ್ರ ಪುರಸ್ಕೃತ ಯೋಜನೆ ಅಡಿ ವಿವಿಧ ಯೋಜನೆ ಅನುಷ್ಠಾನಕ್ಕೆ ₹ 10 ಕೋಟಿಗಳ ಮೊತ್ತದ ಅಂದಾಜು ಪಟ್ಟಿ ಸಲ್ಲಿಸಲಾಗಿತ್ತು. ಕೇಂದ್ರ ಸರ್ಕಾರದಿಂದ ₹ 21 ಕೋಟಿ ಬಿಡುಗಡೆಯಾಗಿದೆ. ತೆಂಗು ಬೆಳೆ ಸುಧಾರಣೆಗೆ ₹ 11 ಕೋಟಿ ಬಿಡುಗೆಯಾಗಿದ್ದು, ₹ 6.66 ಕೋಟಿ ಖರ್ಚು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಕೃಷಿ ಇಲಾಖೆಗೆ ಕೇಂದ್ರ ಪುರಸ್ಕೃತ ಯೋಜನೆ ಅಡಿ ₹ 37 ಕೋಟಿ ವೆಚ್ಚದ ಯೋಜನೆಗಳ ಅಂದಾಜು ಪಟ್ಟಿಯನ್ನು ಸಲ್ಲಿಸಲಾಗಿತ್ತು. ಇದರಲ್ಲಿ ₹ 12 ಕೋಟಿ ಬಿಡುಗಡೆಯಾಗಿದ್ದು, ₹ 11.86 ಕೋಟಿ ವೆಚ್ಚ ಮಾಡುವ ಮೂಲಕ ಶೇ 98 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ರಮೇಶ್‌ಕುಮಾರ್‌ ಮಾಹಿತಿ ನೀಡಿದರು.

ಕೇಂದ್ರ ಸರ್ಕಾರದಿಂದ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ₹ 2.86 ಕೋಟಿ ಬಿಡುಗಡೆಯಾಗಿದ್ದು, ರೈತರಿಗೆ ಪ್ರಾತ್ಯಕ್ಷಿಕೆಯ ಮೂಲಕ ಮೆಕ್ಕೆಜೋಳ, ಸಾಮೆ ಸೇರಿದಂತೆ ಇತರೆ ಬೆಳೆಗಳ ಬಿತ್ತನೆಗೆ ನೆರವು ನೀಡಲಾಗಿದೆ. 3,425 ಎಕರೆಯಲ್ಲಿ ಬಿತ್ತನೆ ನಡೆದಿದ್ದು, ಬೆಳೆಯೂ ಕಟಾವಿನ ಹಂತ ತಲುಪಿದೆ ಎಂದು ಹೇಳಿದರು.

ಕೃಷಿ ಯಾಂತ್ರಿಕರಣ ಯೋಜನೆ ಅಡಿ ₹ 3.37 ಕೋಟಿ ವೆಚ್ಚ ಮಾಡಲಾಗಿದ್ದು, 1421 ರೈತರಿಗೆ ವಿವಿಧ ಬಗೆಯ ಯಂತ್ರಗಳನ್ನು ವಿತರಿಸಲಾಗಿದೆ. ಪಿಎಂಕೆಎಸ್‌ವೈ ಯೋಜನೆ ಅಡಿ ಪಿವಿಸಿ, ಸ್ಪ್ರಿಂಕ್ಲರ್ ಪೈಪ್ ವಿತರಣೆಗೆ ಮಾಡಲಾಗಿದೆ ಎಂದರು.

‘ಜಿಲ್ಲೆಯಲ್ಲಿ ರಾಸಾಯನಿಕ ಗೊಬ್ಬರ ಯೂರಿಯಾ ಸೇರಿದಂತೆ ಇತರೆ ಸೌಲಭ್ಯ ರೈತರಿಗೆ ಸರಿಯಾಗಿ ವಿತರಣೆ ಮಾಡಬೇಕು. ಮುಂಗಾರು ಹಾಗೂ ಹಿಂಗಾರು ಬಿತ್ತನೆ ವೇಳೆ ತೊಂದರೆ ಆಗದಂತೆ ಕ್ರಮವಹಿಸಬೇಕು’ ಎಂದು ಸಂಸದ ಶ್ರೇಯಸ್ ಪಟೇಲ್ ಅಧಿಕಾರಿಗಳಿಗೆ ತಾಕೀತು ಮಾಡಿದರು.

‘ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಿಂದ ರೈತರಿಗೆ ಕುರಿ ಸೇರಿದಂತೆ ಇತರೆ ಜಾನುವಾರು ವಿತರಣೆಯಲ್ಲಿ ಲೋಪವಾಗಿದೆ. ಬೇಕಾಬಿಟ್ಟಿಯಾಗಿ ಯೋಜನೆ ಅನುಷ್ಠಾನ ಮಾಡಲಾಗಿದ್ದು, ದುಡ್ಡು ಕೊಟ್ಟವರಿಗೆ ಮಾತ್ರ ಯೋಜನೆಯ ಲಾಭ ದೊರೆತಿದೆ’ ಎಂದು ಶಾಸಕ ಶಿವಲಿಂಗೇಗೌಡ ಆರೋಪಿಸಿದರು.

ಬಾಣಾವರ ಹೋಬಳಿಯ ಹಲವು ಮಂದಿ ಈ ರೀತಿ ಅಕ್ರಮವಾಗಿ ಯೋಜನೆ ಲಾಭ ಪಡೆದಿದ್ದಾರೆ. ಈ ಸಂಬಂಧ ಪಟ್ಟಿ ನೀಡುವಂತೆ ಅಧಿಕಾರಿಗೆ ಸೂಚನೆ ನೀಡಿದರು.

‘ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಡಿ ಸರ್ಕಾರಿ ಆಸ್ಪತ್ರೆಗಳಲ್ಲಿ ಗುಣಮಟ್ಟದ ಚಿಕಿತ್ಸೆ ದೊರೆಯುತ್ತಿಲ್ಲ. ಬಡವರಿಗೆ ಯೋಜನೆಯ ಲಾಭ ತಲುಪುತ್ತಿಲ್ಲ. ಅಲ್ಲದೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುವ ಕೆಲ ವೈದ್ಯರು ಸಂಜೆ 5 ಗಂಟೆ ಆಗುತ್ತಿದ್ದಂತೆ ತಮ್ಮ ಖಾಸಗಿ ಕ್ಲಿನಿಕ್‌ಗಳಿಗೆ ಹೋಗುತ್ತಾರೆ. ಇದರಿಂದ ಬಡವರಿಗೆ ಚಿಕಿತ್ಸಾ ಸೌಲಭ್ಯ ದೊರೆಯುತ್ತಿಲ್ಲ’ ಎಂದು ಶಿವಲಿಂಗೇಗೌಡ ಆರೋಪಿಸಿದರು.

‘ಅರಸೀಕೆರೆ ಸರ್ಕಾರಿ ಆಸ್ಪತ್ರೆಯಲ್ಲೂ ಇದೇ ಪರಿಸ್ಥಿತಿ ಇದ್ದು, ಮಧ್ಯರಾತ್ರಿ ಯಾರಿಗಾದರೂ ಶಸ್ತ್ರಚಿಕಿತ್ಸೆ ಆಗಬೇಕು ಎಂದರೆ ತಿಪಟೂರಿನಿಂದ ಅರಿವಳಿಕೆ ತಜ್ಞರನ್ನು ಕರೆ ತರುವ ಪರಿಸ್ಥಿತಿ ಇದೆ’ ಎಂದು ದೂರಿದರು.

ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಆರ್. ಪೂರ್ಣಿಮಾ ಇದ್ದರು.

ದಿಶಾ ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳು

ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವ ಆಂಬುಲೆನ್ಸ್ ಚಾಲಕರು

108 ತುರ್ತು ಆಂಬುಲೆನ್ಸ್‌ ವಾಹನ ಚಾಲಕರಿಗೆ ದುರಹಂಕಾರ ಎಂದು ಆಕ್ರೋಶ ವ್ಯಕ್ತಪಡಿಸಿದ ಸಂಸದ ಶ್ರೇಯಸ್ ಪಟೇಲ್ ಆಂಬುಲೆನ್ಸ್‌ಗಳು ನೇರವಾಗಿ ಸರ್ಕಾರಿ ಆಸ್ಪತ್ರೆಗೆ ಬರುವ ಬದಲು ಖಾಸಗಿ ಆಸ್ಪತ್ರೆಗಳಿಗೆ ತೆರಳುತ್ತಿವೆ. ಇದರಿಂದ ಬಡವರು ಮನೆ ಜಮೀನು ಮಾರಿಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಜಿಲ್ಲೆಯ ನಾಲ್ಕು ಐದು ಮಂದಿ ಆಂಬುಲೆನ್ಸ್‌ ಚಾಲಕರು ಈ ರೀತಿ ವರ್ತನೆ ತೋರಿಸುತ್ತಿದ್ದು ಇದೇ ರೀತಿ ಮುಂದುವರಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಈ ವೇಳೆ ಸಭೆಗೆ ಹಾಜರಾದ 108 ತುರ್ತು ವಾಹನ ಜಿಲ್ಲಾ ಸಂಯೋಜಕ ಶಾಸಕರು ಹಾಗೂ ಸಂಸದರ ಪ್ರಶ್ನೆಗೆ ಉತ್ತರಿಸಲು ತಬ್ಬಿಬ್ಬಾದರು. ನಾಲ್ಕು ಜಿಲ್ಲೆಗಳ ತುರ್ತು ವಾಹನ ಸೇವೆಯನ್ನು ನೋಡಿಕೊಳ್ಳುತ್ತೇನೆ. ಆದರೆ ಯಾವುದೇ ದೂರುಗಳು ಬಂದಿಲ್ಲ ಎಂದರು. ಜಿಲ್ಲೆ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸಾ ಸೌಲಭ್ಯವಿದ್ದರೂ ಆಂಬುಲೆನ್ಸ್‌ ವಾಹನ ಚಾಲಕರು ಖಾಸಗಿ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗುತ್ತಿರುವುದು ಏಕೆ ಎಂದು ಪ್ರಶ್ನಿಸಿದ ಸಂಸದ ಶ್ರೇಯಸ್‌ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆರೋಗ್ಯಾಧಿಕಾರಿಗೆ ಸೂಚನೆ ನೀಡಿದರು.

ಫಸಲ್‌ ಬಿಮಾದಲ್ಲಿ ಅಕ್ರಮ: ಆರೋಪ

ಫಸಲ್ ಬಿಮಾ ಯೋಜನೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಶೇ 50ರಷ್ಟು ಪಾಲು ನೀಡುತ್ತಿವೆ. ಇದರಲ್ಲಿ ಭಾರಿ ಅಕ್ರಮ ನಡೆಯುತ್ತಿದ್ದು ಟೆಂಡರ್ ಪಡೆಯುವವರೇ ಒಬ್ಬರು ವಿಮೆ ಮೊತ್ತ ನೀಡುವ ಕಂಪನಿಯೇ ಮತ್ತೊಂದು ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಆರೋಪಿಸಿದರು. ರೈತರಿಗೆ ಸರಿಯಾದ ಮಾಹಿತಿ ನೀಡದೇ ವಿಮೆ ಮಾಡಿಸಲಾಗುತ್ತಿದೆ. ಹೆಚ್ಚಿನ ಪ್ರಮಾಣದ ರೈತರು ಇದರ ಲಾಭ ಪಡೆಯುತ್ತಿಲ್ಲ. ಕೇವಲ 10X10 ಅಡಿ ಬೆಳೆ ಪ್ರದೇಶ ಸರ್ವೇ ಮಾಡುವ ಮೂಲಕ ಅವೈಜ್ಞಾನಿಕವಾಗಿ ವಿಮೆ‌ ಪರಿಹಾರ ಮೊತ್ತದ ಪರಿಷ್ಕರಣೆ ಮಾಡಲಾಗುತ್ತಿದೆ. ಇದರಿಂದ ಅನ್ಯಾಯವಾಗುತ್ತಿದ್ದು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಹಲವು ಬಾರಿ ದಿಶಾ ಸಭೆಯಲ್ಲಿ ಚರ್ಚಿಸಲಾಗಿದೆ ಎಂದರು.

ವಿಮೆ ಏಜೆನ್ಸಿಯವರನ್ನು ಸಭೆಗೆ ಕರೆಸಿ. ಕೇವಲ ರೈತರ ದುಡ್ಡು ಹೊಡೆದುಕೊಂಡು ಹೋಗುವುದು ಅಷ್ಟೇ ಅವರ ಕೆಲಸವಲ್ಲ. ವಿಮೆ ಕಂಪನಿಯವರಿಗೆ ಕನ್ನಡ ಬರುವುದೇ ಇಲ್ಲ. ಕೇವಲ ಹಿಂದಿ ಮಾತನಾಡುತ್ತಾರೆ. ಅವರು ಹೇಳುವ ಯಾವುದೇ ಮಾಹಿತಿ ರೈತರಿಗೆ ಸರಿಯಾಗಿ ತಲುಪುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಫಸಲ್ ಬಿಮಾ ಯೋಜನೆಯಡಿ 1.09 ಲಕ್ಷ ರೈತರು ವಿಮೆ ಕಂತು ಪಾವತಿ ಮಾಡಿದ್ದು ಇದರಲ್ಲಿ ₹ 1.11 ಕೋಟಿ ವಿಮೆ ಮೊತ್ತವನ್ನು ರೈತರಿಗೆ ವಿತರಿಸಲಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ರಮೇಶ್‌ಕುಮಾರ್‌ ಮಾಹಿತಿ ನೀಡಿದರು.

Cut-off box - ಶಾಸಕರ ಗೈರು: ಶಿವಲಿಂಗೇಗೌಡರ ಸಾರಥ್ಯ ಸೋಮವಾರ ನಡೆದ ದಿಶಾ ಸಭೆಗೆ ಶಾಸಕ ಕೆ.ಎಂ.ಶಿವಲಿಂಗೇಗೌಡರನ್ನು ಹೊರತುಪಡಿಸಿ ಯಾವೊಬ್ಬ ಶಾಸಕರೂ ಹಾಜರಿರಲಿಲ್ಲ. ಜಿಲ್ಲೆಯಲ್ಲಿ ಜೆಡಿಎಸ್‌ನ ನಾಲ್ಕು ಬಿಜೆಪಿ ಇಬ್ಬರು ಸೇರಿದಂತೆ 7 ಮಂದಿ ಶಾಸಕರಿದ್ದಾರೆ. ಅದರಲ್ಲಿ ಒಬ್ಬರೇ ಶಾಸಕರು ಸಭೆಗೆ ಹಾಜರಾಗಿದ್ದು ಬಿಜೆಪಿ ಜೆಡಿಎಸ್ ಶಾಸಕರು ಸಭೆಯಲ್ಲಿ ಭಾಗವಹಿಸಿರಲಿಲ್ಲ. ಈ ಮಧ್ಯೆ ಇಡೀ ದಿಶಾ ಸಭೆಯ ಸಾರಥ್ಯವನ್ನು ಶಾಸಕ ಶಿವಲಿಂಗೇಗೌಡರೇ ವಹಿಸಿದಂತೆ ಕಾಣುತ್ತಿತ್ತು. ಪ್ರತಿ ಇಲಾಖೆಯ ಪ್ರಗತಿಯ ಬಗ್ಗೆ ಶಿವಲಿಂಗೇಗೌಡರೇ ಮಾತನಾಡಿದ್ದು ವಿಶೇಷವಾಗಿತ್ತು. ಸಭೆ ಪ್ರಾರಂಭ ಆದಾಗಿನಿಂದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಅವರು ಕೇಂದ್ರ ಪುರಸ್ಕೃತ ಯೋಜನೆಯ ಲಾಭ ಜಿಲ್ಲೆಗೆ ಎಷ್ಟರಮಟ್ಟಿಗೆ ಸದುಪಯೋಗವಾಗಿದೆ? ಕೇಂದ್ರ ಸರ್ಕಾರದಿಂದ ಯಾವ ಯೋಜನೆಗೆ ಎಷ್ಟು ಹಣ ಬಂದಿದೆ ಎಂಬುದರ ಮಾಹಿತಿ ಒದಗಿಸುವಂತೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಈ ನಡುವೆ ಸಂಸದ ಶ್ರೇಯಸ್ ಪಟೇಲ್ ಶಿವಲಿಂಗೇಗೌಡರ ಪ್ರಶ್ನೆಗಳಿಗೆ ದನಿಗೂಡಿಸುತ್ತ ಸಭೆ ಮುನ್ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.