ಶ್ರವಣಬೆಳಗೊಳ: ತೆಂಗಿನಕಾಯಿ, ಎಳನೀರಿಗೆ ಬಂಪರ್ ಬೆಲೆ ಬಂದಿದ್ದು, ತೆಂಗು ಬೆಳೆಗಾರರು ಸಂತಸಗೊಂಡಿದ್ದಾರೆ. ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದ್ದರೂ, ತೆಂಗಿನ ಇಳುವರಿ ಕಡಿಮೆಯಾಗಿದ್ದು, ಬೆಳೆಗಾರರು ಅನೇಕ ವರ್ಷಗಳಿಂದ ಶಾಶ್ವತ ಪರಿಹಾರ ಕಾಣದೇ ಆತಂಕಕ್ಕೆ ಒಳಗಾಗಿದ್ದಾರೆ.
3 ವರ್ಷಗಳಿಂದ ಕೊಬ್ಬರಿ ಧಾರಣೆ ಇಳಿಮುಖವಾಗಿದ್ದು, ಸರ್ಕಾರಗಳು ಬೆಂಬಲ ಬೆಲೆ ನೀಡಿದರೂ ಬೆಲೆಗಳು ಸ್ಥಿರವಾಗಿರದೇ ರೈತರು ಕಂಗಾಲಾಗಿದ್ದರು. ಕೋವಿಡ್–19 ನಂತರ ದೇಶವ್ಯಾಪಿ ತಾಜಾ ಎಳನೀರಿಗೆ ಎಲ್ಲಿಲ್ಲದ ಬೇಡಿಕೆ ಬಂದಿದ್ದು, ಎಳನೀರಿಗೆ ಶುಕ್ರದೆಸೆ ಬಂದಿತ್ತು. ಕೊಬ್ಬರಿ ಬೆಲೆ ಕುಸಿತದಿಂದ ತತ್ತರಿಸಿದ್ದ ರೈತರು, ತೆಂಗಿನಕಾಯಿಗಳನ್ನು ಕಿತ್ತು ವರ್ಷಾನುಗಟ್ಟಲೇ ಸಂಗ್ರಹಿಸಿ ಕೊಬ್ಬರಿ ಮಾಡುವುದಕ್ಕಿಂತ ಕಡಿಮೆ ಖರ್ಚಿನ ಎಳನೀರನ್ನು ಮಾರುವುದು ಲೇಸು ಎನ್ನುವ ನಿರ್ಧಾರಕ್ಕೆ ಬಂದಿದ್ದರು.
ದೇಶದಲ್ಲಿಯೇ ಕರ್ನಾಟಕದ ಎಳನೀರಿಗೆ ಹೆಚ್ಚಿನ ಬೇಡಿಕೆ ಇದೆ. ದೆಹಲಿ, ಉತ್ತರ ಪ್ರದೇಶ, ಹರಿಯಾಣ, ಬಿಹಾರ, ಪಶ್ಚಿಮ ಬಂಗಾಳ, ಮುಂಬೈ, ಜಮ್ಮು– ಕಾಶ್ಮೀರ, ಪಂಜಾಬ್, ಒಡಿಶಾ ರಾಜ್ಯಗಳಿಗೆ ಶ್ರವಣಬೆಳಗೊಳ ವ್ಯಾಪ್ತಿಯಲ್ಲಿ ಸಂಗ್ರಹಿಸಿದ ಎಳನೀರನ್ನು ನಿತ್ಯ 30 ರಿಂದ 40 ಲಾರಿಗಳಲ್ಲಿ ತಲಾ 20 ರಿಂದ 22 ಟನ್ ಪೂರೈಸಲಾಗುತ್ತಿದೆ ಎಂದು ಎಳನೀರು ವ್ಯಾಪಾರಿಗಳಾದ ಶ್ರೀನಿವಾಸ, ಬಸವಣ್ಣ, ಸಾಯಿ ಸತೀಶ್ ಹೇಳುತ್ತಾರೆ.
ಎಳನೀರು ಕಾಯಿಗಳಿಗೆ ₹37 ದರ ಸಿಗುತ್ತಿದ್ದು, ತೆಂಗಿನ ಕಾಯಿಗೂ ಈಗ ಬೆಲೆ ಹೆಚ್ಚಾಗಿದೆ. ಈ ಹಿಂದೆ ಒಂದು ತೆಂಗಿನಕಾಯಿಗೆ ₹12 ರಿಂದ ₹20 ದೊರೆಯುತ್ತಿತ್ತು. ಇದೀಗ ತೂಕದಲ್ಲಿ ಮಾರಾಟ ಜಾರಿಗೆ ಬಂದಿದ್ದರಿಂದ ತೆಂಗಿನ ಕಾಯಿಗಳ ಇತಿಹಾಸದಲ್ಲಿಯೇ ಬಂಪರ್ ಬೆಲೆ ಆಗಿದ್ದು, ಕೆಜಿಗೆ ₹64 ರಿಂದ ₹68 ಆಗಿದೆ.
‘ಇಲ್ಲಿನ ಎಪಿಎಂಸಿ ಮಾರ್ಕೆಟ್‌ನಲ್ಲಿ ರೈತರಿಂದ ಖರೀದಿಸಿದ ಕಾಯಿಗಳನ್ನು ಕಮಿಷನ್ ಆಧಾರದ ಮೇಲೆ ಸಗಟು ವ್ಯಾಪಾರಿಗಳು, ಲಾರಿಗಳ ಮೂಲಕ ಬೆಂಗಳೂರು, ಪುಣೆ ಸೇರಿದಂತೆ ಬೇಡಿಕೆ ಇರುವ ರಾಜ್ಯಗಳಿಗೆ ಸರಬರಾಜು ಮಾಡುತ್ತೇವೆ’ ಎನ್ನುತ್ತಾರೆ ಮಧ್ಯವರ್ತಿಗಳಾದ ದಿವಾಕರ್, ಮುರಳಿ, ಬಸಪ್ಪಾಜಿ.
‘ಎಕರೆಗೆ ಸರಾಸರಿ 50 ರಿಂದ 60 ಸಸಿಗಳನ್ನು ನೆಟ್ಟು, ಕಾಲ ಕಾಲಕ್ಕೆ ನೀರು, ಕೊಟ್ಟಿಗೆ ಗೊಬ್ಬರ ಹಾಕಿ, ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಿ. 6 ರಿಂದ 7 ವರ್ಷ ಮಗುವಿನಂತೆ ನನ್ನನ್ನು ಸಾಕಿದರೆ ನಿನ್ನನ್ನೂ ಜೀವನ ಪರ್ಯಂತ ಸಾಕುತ್ತೇನೆ ಎಂದು ತೆಂಗು ಹೇಳುತ್ತದೆ ಎನ್ನುವ ಪ್ರತೀತಿ ಇದೆ’ ಎನ್ನುತ್ತಾರೆ ತೆಂಗು ಬೆಳೆಗಾರರಾದ ಎಚ್.ಎಂ.ಶಿವಣ್ಣ, ಜವರಪ್ಪ.
‘ತೆಂಗಿನ ಮರಗಳ ಆಯಸ್ಸು ಸರಾಸರಿ 90 ರಿಂದ 120 ವರ್ಷಗಳಿದ್ದು, ನಿರಂತರ ಫಲ ಕೊಡುತ್ತವೆ. ಅವುಗಳಿಗೆ ಕೊಟ್ಟಿಗೆ ಗೊಬ್ಬರ, ಹನಿ ನೀರಾವರಿ ಅಳವಡಿಕೆ, ಆಗಿಂದಾಗ್ಗೆ ಉಳುಮೆ, ಕೆರೆಗಳ ಮಣ್ಣನ್ನು ಕಾಲ ಕಾಲಕ್ಕೆ ಹಾಕಿ ನಿರ್ವಹಣೆ ಮಾಡಿದರೆ ಒಳ್ಳೆಯದು. ಕಾಯಿಲೆಗೆ ತುತ್ತಾಗಿ ಇಳುವರಿ ಕುಂಠಿತವಾದ ಮರಗಳನ್ನು ತೆಗೆದು, ಅದೇ ಜಾಗಕ್ಕೆ ಹೊಸ ಸಸಿ ಬೆಳೆಸುವುದರಿಂದ ಇಳುವರಿಯಲ್ಲಿ ಅಷ್ಟೇನು ವ್ಯತ್ಯಾಸವಾಗುವುದಿಲ್ಲ’ ಎನ್ನುತ್ತಾರೆ ತಜ್ಞ ವಿಜ್ಞಾನಿಗಳು.
ತೋಟಗಳಿಂದ ಮಧ್ಯವರ್ತಿಗಳು ಗುರುತಿಸಿರುವ ಸ್ಥಳಕ್ಕೆ ರೈತರು ತಮ್ಮ ವಾಹನದಲ್ಲಿಯೇ ಎಳನೀರನ್ನು ಸರಬರಾಜು ಮಾಡಿದರೆ 1 ಕಾಯಿಗೆ ₹37 ರಿಂದ ₹38 ದರ ಸಿಗುತ್ತದೆ. ಎಳನೀರು ಮಾರಾಟ ಮಾಡುವುದು.
-ಸೂಕ್ತ ಮಹಾದೇವ್ ರಮೇಶ್ ಬೆಳೆಗಾರ
________
ಎಳನೀರಿಗಿಂತ ಕಾಯಿಗೆ ಹೆಚ್ಚಿನ ಅವಧಿ ಹಿಡಿಯುತ್ತದೆ. ನಿರ್ವಹಣೆಗೆ ಕಾರ್ಮಿಕರು ಅಗತ್ಯ. ಅಲ್ಲದೇ ಮಾರಾಟದ ಸಂದರ್ಭದಲ್ಲಿ ಇಷ್ಟೇ ಬೆಲೆ ಸಿಗುತ್ತದೆ ಎಂದು ಹೇಳಲಾಗದು.
- ಮೀಸೆ ಮಂಜೇಗೌಡ ರೈತ ಮುಖಂಡ
________
ಒಂದು ತೆಂಗಿನಕಾಯಿ ಕನಿಷ್ಠ 400 ಗ್ರಾಂನಿಂದ 600 ಗ್ರಾಂ ಇರಲಿದ್ದು ಕೆ.ಜಿ.ಗೆ 2 ಕಾಯಿಗಳು ಬರುತ್ತವೆ. ಒಂದಕ್ಕೆ ₹32 ರಿಂದ ₹34 ದರ ಸಿಗುತ್ತಿದ್ದು ಸಾಧಾರಣ ಕಾಯಿಗಳಾದರೆ ಕೆ.ಜಿ.ಗೆ 4 ಬರುತ್ತವೆ.
-ಶಿವೇಗೌಡ ರೈತ
15583 ಹೆಕ್ಟೇರ್‌ನಲ್ಲಿ ತೆಂಗು
‘3 ವರ್ಷದಿಂದ ಒಣ ಕೊಬ್ಬರಿ ಬೆಲೆ ಕಡಿಮೆ ಇದ್ದು ಏಕಾಏಕಿ ಎಳನೀರಿಗೆ ಬೇಡಿಕೆ ಹೆಚ್ಚಿದೆ. ಕಾಯಿಗಳ ಉತ್ಪನ್ನದಲ್ಲಿ ಏರುಪೇರು ಆಗಿದ್ದರೂ ತಾಲ್ಲೂಕಿನ 15583.35 ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆ ಇದೆ. ಶ್ರವಣಬೆಳಗೊಳ ವ್ಯಾಪ್ತಿಯಲ್ಲಿ 8030.98 ಹೆಕ್ಟೇರ್‌ನಲ್ಲಿ ತೆಂಗು ಬೆಳೆ ಪ್ರದೇಶ ಇದೆ’ ಎನ್ನುತ್ತಾರೆ ಸಹಾಯಕ ತೋಟಗಾರಿಕಾ ಇಲಾಖೆ ಅಧಿಕಾರಿ ಪ್ರದೀಪ್ ಸಿ.ಬಿ.
‘ರೈತರಿಗೆ ಒಳ್ಳೆಯ ಬೆಲೆ ಸಿಕ್ಕಿರುವುದು ಸಂತಸದ ವಿಷಯ. ಕೊಬ್ಬರಿ ಬೆಲೆಯೂ ಹೆಚ್ಚಾಗುತ್ತಿದ್ದು ಭವಿಷ್ಯದ ದೃಷ್ಟಿಯಿಂದ ಎಳನೀರು ಮಾರಾಟ ಮಾಡುತ್ತಿರುವ ಯೋಚಿಸುವಂತೆ ರೈತರಿಗೆ ಮನವಿ ಮಾಡುವುದಾಗಿ’ ರಾಜ್ಯ ಸಹಕಾರ ಮಾರಾಟ ಮಹಾ ಮಂಡಲದ ನಿರ್ದೇಶಕ ಸಿ.ಎನ್.ಪುಟ್ಟಸ್ವಾಮಿ ಗೌಡ ಹೇಳುತ್ತಾರೆ.
ಎಳನೀರು ಆರ್ಭಟ: ಇಳುವರಿಗೆ ಹೊಡೆತ
ಹೆಚ್ಚಾಗಿ ಎಳನೀರನ್ನು ಕಿತ್ತು ಮಾರುವುದೇ ತೆಂಗಿನಕಾಯಿ ಇಳುವರಿ ಕಡಿಮೆಯಾಗಲು ಮುಖ್ಯ ಕಾರಣ. ಕೀಳುವ ಸಮಯದಲ್ಲಿ ಒಂದೊಂದೇ ಎಳನೀರನ್ನೂ ಕೀಳದೇ ಐದಾರು ಇರುವ ಗೊಂಚಲನ್ನು ಕೀಳುವುದರಿಂದ ಪಕ್ಕದಲ್ಲಿ ಬಿಡುತ್ತಿರುವ ಹೊಂಬಾಳೆಯೊಂದಿಗೆ ಹೂವಿನ ಅಳಿಗಳೂ ಸಹ ಉದುರುತ್ತವೆ.
‘ತೆಂಗಿನ ಕಾಯಿಗಳನ್ನು ಕೀಳಲು ಮರಕ್ಕೆ ₹40 ಮತ್ತು ಸಿಪ್ಪೆ ಸುಲಿಯಲು ಸಾವಿರ ಕಾಯಿಗೆ ₹1 ಸಾವಿರ ಖರ್ಚಾಗುತ್ತದೆ. ಹಾಗೆಯೇ ಮಾರುಕಟ್ಟೆಗೆ ಸಾಗಿಸಲು ಬಾಡಿಗೆ ಬರುತ್ತದೆ’ ಎನ್ನುತ್ತಾರೆ ಹೊಸಹಳ್ಳಿ ರೈತ ನಂಜುಂಡಪ್ಪ.
‘ಇತ್ತೀಚಿನ ಹವಾಮಾನ ವೈಪರೀತ್ಯದಿಂದಾಗಿ ಅನೇಕ ರೋಗಗಳು ತೆಂಗಿನ ಮರಗಳಿಗೆ ಬಾಧಿಸಿದ್ದರಿಂದಾಗಿ ಸಾವಿರ ತೆಂಗಿನ ಮರಗಳಿಗೆ ಒಂದು ವರ್ಷದ ಅವಧಿಯಲ್ಲಿ ಒಂದು ಲಕ್ಷ ಕಾಯಿಗಳ ಇಳುವರಿ ಇದ್ದು ಇದೀಗ 50 ಸಾವಿರ ಕಾಯಿಗಳ ಇಳುವರಿ ಕಡಿಮೆಯಾಗಿದೆ’ ಎನ್ನುತ್ತಾರೆ ಸಾವಯವ ಕೃಷಿಕ ಬಿ.ರಾಘವೇಂದ್ರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.