
ಸಕಲೇಶಪುರ: ಕಳ್ಳತನ ಮಾಡಿಕೊಂಡು ತಂದ ಕಾಫಿಯನ್ನು ಕೊಳ್ಳುವ ವ್ಯಾಪಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿವೈಎಸ್‌ಪಿ ಮಾಲತೇಶ್ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ಕಾಫಿ ಕೊಳ್ಳುವ ವ್ಯಾಪಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಕಾಫಿ ಕೊಯ್ಲಿಗೆ ಬಂದಿದ್ದು, ಕಳ್ಳರು ತೋಟಗಳಿಗೆ ನುಗ್ಗಿ ಗಿಡದಿಂದಲೇ ಕಾಫಿ ಕಳವು ಮಾಡುತ್ತಿರುವುದು ಹಾಗೂ ಒಣಗಲು ಹಾಕಿದ್ದ ಕಣದಿಂದ, ದಾಸ್ತಾನು ಇಟ್ಟಿರುವ ಗೋದಾಮುಗಳಿಂದ ಕಾಫಿ ಕಳ್ಳತನ ಮಾಡಿರುವ ಪ್ರಕರಣಗಳು ನಡೆಯುತ್ತಿವೆ ಎಂದರು.
ಇದನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಎಷ್ಟೇ ಕಾಫಿ ಮಾರಾಟಕ್ಕೆ ತಂದರೂ, ಮಾರಾಟ ಮಾಡಲು ಬರುವವರ ಆಧಾರ್ ಕಾರ್ಡ್ ಪ್ರತಿ, ಮೊಬೈಲ್ ನಂಬರ್, ಜಮೀನಿನ ಆರ್‌ಟಿಸಿ ಪಡೆದುಕೊಳ್ಳಬೇಕು. ಪ್ರತಿಯೊಬ್ಬ ವ್ಯಾಪಾರಿಯೂ ಒಂದು ದಾಖಲಾತಿ ಇಟ್ಟುಕೊಂಡು ಕಾಫಿ ತಂದು ಕೊಟ್ಟವರು ಯಾರು? ಅವರ ವಿಳಾಸ, ಎಷ್ಟು ಚೀಲ ಮಾರಾಟಕ್ಕೆ ತಂದಿದ್ದರು ಎಂಬೆಲ್ಲ ವಿವರ ದಾಖಲಿಸಲೇಬೇಕು ಎಂದರು.
ಈ ಯಾವುದೇ ದಾಖಲಾತಿ ಪಡೆಯದೆ, ಕಾಫಿ ಖರೀದಿಸಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಕಾಫಿ ಕದ್ದ ಕಳ್ಳ ಸಿಕ್ಕಿ ಬಿದ್ದು, ಇಂತಹ ಅಂಗಡಿಯಲ್ಲಿ ಮಾರಾಟ ಮಾಡಿದ್ದೇನೆ ಎಂದು ಹೇಳಿಕೆ ನೀಡಿದರೆ, ಖರೀದಿಸಿದ ವ್ಯಾಪಾರಿ ವಿರುದ್ಧ ಮುಲಾಜಿಲ್ಲದೆ ಪ್ರಕರಣ ದಾಖಲು ಮಾಡಲಾಗುವುದು. ಪರವಾನಗಿ ರದ್ದುಗೊಳಿಸಲು ಸಂಬಂಧಪಟ್ಟ ಇಲಾಖೆಗೆ ಶಿಫಾರಸು ಮಾಡಲಾಗುವುದು ಎಂದು ತಿಳಿಸಿದರು.
ಕಾಫಿ ಮಾರಾಟ ಮಾಡಲು ಬಂದ ವ್ಯಕ್ತಿ ಬಗ್ಗೆ ಅನುಮಾನ ಬಂದರೆ ಕೂಡಲೇ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ವರ್ಷವೆಲ್ಲಾ ಕಷ್ಟಪಟ್ಟು ಹಣ, ಶ್ರಮ ಹಾಕಿ ಕಾಫಿ ಬೆಳೆಯಲಾಗುತ್ತದೆ. ವರ್ಷಕ್ಕೊಮ್ಮೆ ಸಿಗುವ ಫಸಲನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗುವುದಕ್ಕೆ ಪೊಲೀಸರು ಮಾತ್ರವಲ್ಲ ಯಾವುದೇ ನಾಗರಿಕ ಬಿಡಬಾರದು. ಪೊಲೀಸರಿಗೆ ಸಾರ್ವಜನಿಕರು ಮಾಹಿತಿ ನೀಡಿದರೆ ಸಮಾಜದಲ್ಲಿ ಇಂತಹ ಕಳ್ಳತನ ಸಂಪೂರ್ಣ ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದರು.
ಇನ್‌ಸ್ಪೆಕ್ಟರ್ ವಿ.ಸಿ.ವನರಾಜು, ನಗರ ಪಿಎಸ್‌ಐ ಮಹೇಶ್, ಗ್ರಾಮಾಂ ತರ ಪಿಎಸ್‌ಐ ಪ್ರಸನ್ನ, ಯಸಳೂರು ಪಿಎಸ್‌ಐ ಸಲ್ಮಾನ್ ಖಾನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.