ADVERTISEMENT

ಕಾಫಿ ಕೌಶಲಾಭಿವೃದ್ಧಿಗೆ ನೆರವು: ಸಚಿವ ಪಿಯೂಷ್‌ ಗೋಯಲ್‌

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2024, 0:27 IST
Last Updated 24 ಡಿಸೆಂಬರ್ 2024, 0:27 IST
ಹಾಸನ ಜಿಲ್ಲೆ ಸಕಲೇಶಪುರದಲ್ಲಿ ಸೋಮವಾರ ಆಯೋಜಿಸಿದ್ದ ಕಾಫಿ ಬೆಳೆಗಾರರ ಸಮಾವೇಶದಲ್ಲಿ ಭಾಗವಹಿಸಿದ್ದ ಕೇಂದ್ರ ಸಚಿವರಾದ ಪಿಯೂಷ್‌ ಗೋಯಲ್‌ ಮತ್ತು ಎಚ್.ಡಿ. ಕುಮಾರಸ್ವಾಮಿ ಕಾಫಿ ಸವಿದರು. ಕಾಫಿ ಬೆಳೆಗಾರರ ಒಕ್ಕೂಟದ ಪದಾಧಿಕಾರಿಗಳು, ಶಾಸಕರು ಭಾಗವಹಿಸಿದ್ದರು ಪ್ರಜಾವಾಣಿ ಚಿತ್ರ
ಹಾಸನ ಜಿಲ್ಲೆ ಸಕಲೇಶಪುರದಲ್ಲಿ ಸೋಮವಾರ ಆಯೋಜಿಸಿದ್ದ ಕಾಫಿ ಬೆಳೆಗಾರರ ಸಮಾವೇಶದಲ್ಲಿ ಭಾಗವಹಿಸಿದ್ದ ಕೇಂದ್ರ ಸಚಿವರಾದ ಪಿಯೂಷ್‌ ಗೋಯಲ್‌ ಮತ್ತು ಎಚ್.ಡಿ. ಕುಮಾರಸ್ವಾಮಿ ಕಾಫಿ ಸವಿದರು. ಕಾಫಿ ಬೆಳೆಗಾರರ ಒಕ್ಕೂಟದ ಪದಾಧಿಕಾರಿಗಳು, ಶಾಸಕರು ಭಾಗವಹಿಸಿದ್ದರು ಪ್ರಜಾವಾಣಿ ಚಿತ್ರ   

ಸಕಲೇಶಪುರ (ಹಾಸನ ಜಿಲ್ಲೆ): ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನ ಕೇಂದ್ರ ಕಾಫಿ ಸಂಶೋಧನಾ ಸಂಸ್ಥೆಯಲ್ಲಿ (ಸಿಸಿಆರ್‌ಐ) ಕಾಫಿ ಕೌಶಲಾಭಿವೃದ್ಧಿ ಕೇಂದ್ರ ಆರಂಭಿಸಲು ನಿರ್ಧರಿಸಲಾಗಿದೆ. ಇದಕ್ಕೆ ಅಗತ್ಯ ಅನುದಾನ ಒದಗಿಸಲು ಕೇಂದ್ರ ಬದ್ಧವಾಗಿದೆ’ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್‌ ಗೋಯಲ್‌ ಹೇಳಿದರು.

ಕಾಫಿ ಬೆಳೆಗಾರರ ಒಕ್ಕೂಟದಿಂದ ಪಟ್ಟಣದಲ್ಲಿ ಸೋಮವಾರ ಆಯೋಜಿಸಿದ್ದ ಕಾಫಿ ಬೆಳೆಗಾರರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ಕಾಫಿ ಬೆಳವಣಿಗೆಗೆ ಮುಂದೆ ಬರುವ ನವೋದ್ಯಮಗಳಿಗೆ ಅಗತ್ಯ ಸೌಕರ್ಯ ನೀಡಲು ನಿರ್ಧರಿಸಲಾಗಿದೆ. ಇದರಿಂದ ಕಾಫಿ ಸಂಸ್ಕರಣೆ, ಬ್ರ್ಯಾಂಡ್‌, ಮಾರಾಟಕ್ಕೆ ಹೆಚ್ಚು ಸಹಕಾರಿ ಆಗಲಿದೆ’ ಎಂದರು.

ADVERTISEMENT

‘ಸಮಗ್ರ ಕಾಫಿ ಅಭಿವೃದ್ಧಿ ಯೋಜನೆಯು 2011ರಿಂದ ಸ್ಥಗಿತಗೊಂಡಿದ್ದು, ಅದನ್ನು ಮರು ಜಾರಿಗೊಳಿಸಲಾಗಿದೆ. ಈ ಮೂಲಕ ಕಾಫಿ ಗುಣಮಟ್ಟದ ವೃದ್ಧಿ, ಯಾಂತ್ರೀಕರಣಕ್ಕೆ ಒತ್ತು ನೀಡಲಾಗುವುದು. ಕಾಫಿ ಬೆಳೆಗಾರರಿಗೆ ಸಹಾಯಧನ ನೀಡಲು ₹100 ಕೋಟಿ ಹೆಚ್ಚುವರಿ ಅನುದಾನ ನೀಡುವಂತೆ ಕೇಂದ್ರ ಹಣಕಾಸು ಸಚಿವರೊಂದಿಗೆ ಚರ್ಚಿಸಲಾಗುವುದು’ ಎಂದರು.

‘ಬೆಳೆ ಸಾಲವು ಸರ್ಫೇಸಿ ಕಾಯ್ದೆಯಡಿ ಬರುವುದಿಲ್ಲ. ಆದರೆ, ಬಹುತೇಕ ಬೆಳೆಗಾರರು ಜಮೀನು ಅಡಮಾನವಿಟ್ಟು ಸಾಲ ಪಡೆದಿದ್ದಾರೆ. ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಕೆನರಾ ಬ್ಯಾಂಕ್‌ ಡಿಸೆಂಬರ್ 26 ಹಾಗೂ 27ರಂದು ಕೊಡಗು, ಚಿಕ್ಕಮಗಳೂರು, ಹಾಸನದಲ್ಲಿ ಲೋಕ ಅದಾಲತ್‌ ಆಯೋಜಿಸಿದೆ’ ಎಂದರು.

‘ಮಾನವ–ವನ್ಯಜೀವಿ ಸಂಘರ್ಷಕ್ಕೆ ಕಡಿವಾಣ ಹಾಕಲು ಬೆಂಗಳೂರಿನ ಐಐಎಸ್ಸಿ ಪ್ರಾಧ್ಯಾಪಕ ಸುರೇಂದ್ರ ವರ್ಮಾ ನೇತೃತ್ವದ ಸಮಿತಿ ನೀಡುವ ವರದಿಗೆ ಅನುಗುಣವಾಗಿ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.