ADVERTISEMENT

ದೌರ್ಜನ್ಯ ಖಂಡಿಸಿ "ಕರಾಳ ಮಹಿಳಾ ದಿನ'

ವಿವಿಧ ಸಂಘಟನೆಗಳಿಂದ ಮೌನ ಮೆರವಣಿಗೆ; ಎಸ್ಪಿ, ಡಿ.ಸಿಗೆ ಮನವಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2021, 13:25 IST
Last Updated 31 ಮಾರ್ಚ್ 2021, 13:25 IST
ಮಹಿಳೆ ಮತ್ತು ಮಕ್ಕಳ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ಖಂಡಿಸಿ ಕರಾಳ ಮಹಿಳಾ ದಿನ ಆಚರಣಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು
ಮಹಿಳೆ ಮತ್ತು ಮಕ್ಕಳ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ಖಂಡಿಸಿ ಕರಾಳ ಮಹಿಳಾ ದಿನ ಆಚರಣಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು   

ಹಾಸನ : ಜಿಲ್ಲೆಯಲ್ಲಿ ಮಹಿಳೆ ಮತ್ತು ಮಕ್ಕಳ ಮೇಲೆ ಹೆಚ್ಚುತ್ತಿರುವ ದೌರ್ಜನ್ಯವನ್ನು ಖಂಡಿಸಿ ನಗರದಲ್ಲಿ ಬುಧವಾರ ಕರಾಳ ಮಹಿಳಾ ದಿನ ಆಚರಿಸಲಾಯಿತು.

ಕರಾಳ ಮಹಿಳಾ ದಿನ ಆಚರಣಾ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಮುಖಂಡರು ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಮೆರವಣಿಗೆಯಲ್ಲಿ ತೆರಳಿ ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ್‌ಗೌಡ ಅವರಿಗೆ ಮನವಿ ಸಲ್ಲಿಸಿದರು.

‘ನಾಲ್ಕು ತಿಂಗಳ ಹಿಂದೆ ರಸ್ತೆ ಬದಿ ಮಲಗಿದ್ದ ನಿರ್ಗತಿಕ ಮಹಿಳೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ
ಮಾಡಿ ನಂತರ ಅತ್ಯಾಚಾರ ನಡೆಸಿದ್ದ ಆರೋಪಿಯನ್ನು ಇದುವರೆಗೂ ಬಂಧಿಸಿಲ್ಲ. ಮೂರು ದಿನಗಳ ಹಿಂದೆ
ಹೊಸ ಬಸ್ ನಿಲ್ದಾಣದಲ್ಲಿ ಪೋಷಕರೊಂದಿಗೆ ಮಲಗಿದ್ದ 7 ವರ್ಷದ ಬಾಲಕಿಯನ್ನು ಹೊತ್ತೊಯ್ದು ಅತ್ಯಾಚಾರ
ಎಸಗಿದ ಆರೋಪಿಯನ್ನೂ ಪತ್ತೆ ಮಾಡಿಲ್ಲ. ಇದು ಅತ್ಯಂತ ನೋವಿನ ಸಂಗತಿ’ ಎಂದು ಪ್ರತಿಭಟನಕಾರರು
ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಮಹಾರಾಜ ಉದ್ಯಾನದಲ್ಲಿ ಅಪ್ರಾಪ್ತೆಯೊಬ್ಬಳ ನಿರಂತರ ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ದೂರು
ನೀಡಲಾಗಿತ್ತು. ಹೀಗೆ ನಗರದ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆ ಮತ್ತು ಮಕ್ಕಳಿಗೆ ಸುರಕ್ಷತೆ ಇಲ್ಲವೆಂದಾದರೆ
ಇನ್ನಿತರ ಕಡೆ ರಕ್ಷಣೆ ಹೇಗೆ ನಿರೀಕ್ಷಿಸುವುದು’ ಎಂದು ಪ್ರಶ್ನಿಸಿದರು.

ಸಾಮಾಜಿಕ ಕಾರ್ಯಕರ್ತೆ ರೂಪ ಹಾಸನ ಮಾತನಾಡಿ, ‘ಮಹಿಳೆ, ಮಕ್ಕಳು ಮತ್ತು ಲಿಂಗತ್ವ ಅಲ್ಪಸಂಖ್ಯಾತರ
ದೌರ್ಜನ್ಯಕ್ಕೆ ಸಂಬಂಧಿಸಿದ ಯಾವುದೇ ಪ್ರಕರಣ ಪೊಲೀಸ್ ಠಾಣೆಗೆ ಬಂದರೂ ಅದಕ್ಕೆ ಸಮರ್ಪಕ ಸೆಕ್ಷನ್ ಹಾಕಿ,
ಕಡ್ಡಾಯವಾಗಿ ಪ್ರಕರಣ ದಾಖಲಿಸಬೇಕು. ಯಾವುದೇ ಪ್ರಭಾವದಿಂದ ಮುಚ್ಚಿ ಹೋಗದಂತೆ ನೋಡಿಕೊಳ್ಳಬೇಕು. ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕು. ಬಾಲ್ಯವಿವಾಹತಡೆಗಟ್ಟಲು ವಿವಿಧ ಇಲಾಖೆಗಳ ಸಮ್ಮಿಲನ ಸಮಿತಿ ರಚಿಸಿ, ನಿರಂತರ ಸಮನ್ವಯ ಸಭೆ ಜತೆಗೆ ಕ್ಷೇತ್ರಕಾರ್ಯದ ಮೂಲಕ ನಿಯಂತ್ರಿಸಬೇಕು’ ಎಂದು ಆಗ್ರಹಿಸಿದರು.

ಪೋಕ್ಸೊ ಪ್ರಕರಣ, ಬಾಲ್ಯವಿವಾಹ, ಮಹಿಳೆ, ಮಕ್ಕಳನ್ನು ಕದ್ದೊಯ್ಯುವ, ದುರ್ಬಳಕೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ.ಪ್ರತಿ ಶಾಲಾ ಮತ್ತು ಕಾಲೇಜುಗಳಲ್ಲಿ ಕಡ್ಡಾಯವಾಗಿ ದೌರ್ಜನ್ಯ ತಡೆ ಸಮಿತಿ ಹಾಗೂ ಬಸ್, ರೈಲ್ವೆ ನಿಲ್ದಾಣ,ಪಾರ್ಕ್, ಚಿತ್ರಮಂದಿರ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ರಕ್ಷಣೆ ಒದಗಿಸಲುಕ್ರಮವಹಿಸಬೇಕುಎಂದು ಆಗ್ರಹಿಸಿದರು.

ಬಳಿಕ ಜಿಲ್ಲಾಧಿಕಾರಿ ಆರ್‌.ಗಿರೀಶ್ ಅವರಿಗೂ ಮನವಿ ಸಲ್ಲಿಸಲಾಯಿತು.

ಜನನಿ ಫೌಂಡೇಶನ್ ಜಿಲ್ಲಾಧ್ಯಕ್ಷೆ ಎಚ್.ಎಸ್. ಭಾನುಮತಿ, ಸ್ತ್ರೀ ರೋಗ ತಜ್ಞೆ ಡಾ. ಭಾರತಿ ರಾಜಶೇಖರ್, ಅನನ್ಯ ಟ್ರಸ್ಟ್ ಅಧ್ಯಕ್ಷೆ ಕೆ.ಟಿ. ಜಯಶ್ರೀ, ಲೇಖಕಿ ಸುವರ್ಣ ಕೆ.ಟಿ.ಶಿವಪ್ರಸಾದ್‌, ಕಲಾವಿದ ಕೆ.ಟಿ. ಶಿವಪ್ರಸಾದ್, ಡಿವೈಎಫ್‍ಐ ಮುಖಂಡ ಎಂ.ಜಿ. ಪೃಥ್ವಿ, ಸಿಐಟಿಯು ಪ್ರಧಾನ ಕಾರ್ಯದರ್ಶಿ ಎಂ.ಬಿ. ಪುಷ್ಪ, ನವಕರ್ನಾಟಕ ಯುವಶಕ್ತಿ ವೇದಿಕೆ ಉಪಾಧ್ಯಕ್ಷ ಡಿ. ಶಂಕರಗೌಡ,ಕರ್ನಾಟಕ ರಕ್ಷಣಾ ವೇದಿಕೆ ನಮ್ಮ ಸ್ವಾಭಿಮಾನ ಬಳಗದ ಅಧ್ಯಕ್ಷ ಹರೀಶ್‌ಗೌಡ, ವೈ.ಎಸ್. ವೀರ ಭದ್ರಪ್ಪ, ರಾಣಿ,ಕಲಾವತಿ ಮಧುಸೂದನ್‌, ಶಿವಮ್ಮ, ಭವ್ಯ ನಾಗರಾಜ್‌ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.