ADVERTISEMENT

ಆನೆ ಟಾಸ್ಕ್ ಫೋರ್ಸ್‌ನಿಂದ ಸಂಘರ್ಷ ನಿಯಂತ್ರಣ: ಜಾವೀದ್‌ ಅಖ್ತರ್‌

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2022, 5:00 IST
Last Updated 8 ಡಿಸೆಂಬರ್ 2022, 5:00 IST
ಸಕಲೇಶಪುರದಲ್ಲಿ ಮಂಗಳವಾರ ರಾತ್ರಿ ಅರಣ್ಯ, ಜೀವ ವೈವಿದ್ಯ ಮತ್ತು ಪರಿಸರ ಇಲಾಖೆ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಜಾವೇದ್‌ ಅಕ್ತರ್ ಆನೆ ಟಾಸ್ಕ್‌ಪೋರ್ಸ್‌ ವಾಹನಗಳಿಗೆ ಚಾಲನೆ ನೀಡಿದರು
ಸಕಲೇಶಪುರದಲ್ಲಿ ಮಂಗಳವಾರ ರಾತ್ರಿ ಅರಣ್ಯ, ಜೀವ ವೈವಿದ್ಯ ಮತ್ತು ಪರಿಸರ ಇಲಾಖೆ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಜಾವೇದ್‌ ಅಕ್ತರ್ ಆನೆ ಟಾಸ್ಕ್‌ಪೋರ್ಸ್‌ ವಾಹನಗಳಿಗೆ ಚಾಲನೆ ನೀಡಿದರು   

ಸಕಲೇಶಪುರ: ಆನೆ ಟಾಸ್ಕ್ ಪೋರ್ಸ್‌ ನಿಂದ ಕಾಡಾನೆ ಹಾಗೂ ಮಾನವ ಸಂಘರ್ಷ ಹಾಗೂ ಬೆಳೆ ಹಾನಿ ನಿಯಂತ್ರಣ ಮಾಡಲಾಗುವುದು ಎಂದು ಅರಣ್ಯ, ಜೀವ ವೈವಿದ್ಯ ಮತ್ತು ಪರಿಸರ ಇಲಾಖೆ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಜಾವೇದ್‌ ಅಕ್ತರ್ ಹೇಳಿದರು.ಪಟ್ಟಣದಲ್ಲಿ

ಮಂಗಳವಾರ ಆನೆ ಟಾಸ್ಕ್‌ ಪೋರ್ಸ್ ಉದ್ಘಾಟಿಸಿ ಮಾತನಾಡಿದರು. ಕಾಡಾನೆ ನಿಯಂತ್ರಣ ಹಾಗೂ ಸಾರ್ವಜನಿಕರಿಗೆ ಆನೆಗಳ ಚಲನ ವಲನಗಳ ಬಗ್ಗೆ ಮಾಹಿತಿ ನೀಡಲು ಇರುವ ಎಸ್ಎಂಎಸ್‌. ಆನೆಗಳಿರುವ ಲೊಕೇಷನ್ ಹಂಚಿಕೆ, ನಾಮಫಲಕಗಳ ಮೂಲಕ ಎಚ್ಚರಿಕೆ ಸಂದೇಶದಲ್ಲಿ ಮತ್ತಷ್ಟು ಅಭಿವೃದ್ಧಿಗೊಳಿಸಲಾಗುವುದು.

ಟಾಸ್ಕ್‌ ಪೋರ್ಸ್‌ಗೆ ಒಬ್ಬರು ಡಿಸಿಎಫ್‌, ಎಸಿಎಫ್‌, ಆರ್‌ಎಫ್‌ಗಳು ಸೇರಿದಂತೆ 15 ಮಂದಿ ಅಧಿಕಾರಿಗಳು 32 ಮಂದಿ ವಾಚರ್‌ಗಳನ್ನು ನೇಮಕ ಮಾಡಲಾಗಿದೆ. ಸಹಾಯವಾಣಿ (9480817474) 24X7 ಕಾರ್ಯ ನಿರ್ವಹಿಸಲಿದೆ. ಸಕಲೇಶಪುರದಲ್ಲಿ ಡಿಸಿಎಫ್‌, ಎಸಿಎಫ್‌ ಹಾಗೂ ಆರ್‌ಎಫ್‌ ಕಚೇರಿ ಇದ್ದರೆ, ಬಾಳ್ಳುಪೇಟೆ, ಮಗ್ಗೆ, ಬಿಕ್ಕೋಡು ಹಾಗೂ ಹೆತ್ತೂರಿನಲ್ಲಿ ಡಿಆರ್‌ಎಫ್‌ಓ ಕಚೇರಿಗಳನ್ನು ತೆರೆಯಲಾಗುವುದು. ಅಲ್ಲಿ ಒಬ್ಬರು ಡಿಆರ್‌ಎಫ್‌ಓ ಇಬ್ಬರು ಗಾರ್ಡ್‌, 8 ಮಂದಿ ವಾಚರ್‌ ಹಾಗೂ ಒಂದು ವಾಹನ ವ್ಯವಸ್ಥೆ ಇರುತ್ತದೆ. ಆನೆಗಳು ಯಾವ ಗ್ರಾಮದಲ್ಲಿ ಇರುತ್ತವೆಯೋ ಅಲ್ಲಿ ಒಂದು ವಾಹನ ಅಧಿಕಾರಿ ಹಾಗೂ ಸಿಬ್ಬಂದಿ ಇರುತ್ತಾರೆ. ಜೀವ ಹಾನಿ ಹಾಗೂ ಬೆಳೆ ಹಾನಿ ಆಗದಂತೆ ತಡೆಯುವ ಕೆಲಸವನ್ನು ಈ ತಂಡ ನಿರ್ವಹಿಸುತ್ತದೆ ಎಂದರು.

ADVERTISEMENT

ರಾಜ್ಯದಲ್ಲಿ ಸುಮಾರು 6 ಸಾವಿರಕ್ಕೂ ಹೆಚ್ಚು ಆನೆಗಳಿದ್ದು, ಎಲ್ಲಾ ಆನೆಗಳನ್ನು ಸ್ಥಳಾಂತರ ಮಾಡುವುದಕ್ಕೆ ಸಾಧ್ಯವಿಲ್ಲ. ಸ್ಥಳಾಂತರ ಮಾಡುವುದಾದರೂ, ಎಲ್ಲಿಗೆ ಸ್ಥಳಾಂತರ ಮಾಡಬೇಕು ಎಂಬ ಪ್ರಶ್ನೆಗೆ ಉತ್ತರ ಇಲ್ಲ. ಒಂದು ಆನೆಯನ್ನು ಹಿಡಿದು ಸ್ಥಳಾಂತರ ಮಾಡುವುದಕ್ಕೆ ಕೇಂದ್ರ ಸರ್ಕಾರದ ಅನುಮತಿ ಬೇಕು. ಯಾವುದೇ ಒತ್ತಡಗಳು ಬಂದರೂ ಅರಣ್ಯ ಇಲಾಖೆ ಕಾನೂನು ಬದ್ದವಾಗಿಯೇ ನಿರ್ಣಯಗಳನ್ನು ಕೈಗೊಳ್ಳಬೇಕು ಎಂದರು.

ಕಾಯ್ದಿರಿಸಿದ ರಕ್ಷಿತ ಅರಣ್ಯದಲ್ಲಿ ಸ್ಥಳೀಯ ಸಂಸ್ಥೆಗಳು ರಸ್ತೆ, ಕುಡಿಯುವ ನೀರಿನ ಪೈಪ್‌ಲೈನ್‌ ಸೇರಿದಂತೆ ಯಾವುದೇ ಅಭಿವೃದ್ಧಿ ಯೋಜನೆಗಳನ್ನು ಮಾಡುವುದಕ್ಕೆ ಕೇಂದ್ರ ಪರಿಸರ ಮಂತ್ರಾಲಯದ ಅನುಮತಿ ಕಡ್ಡಾಯ. ಅರಣ್ಯ ಇಲಾಖೆಯ ಸ್ಥಳೀಯ ಮಾತ್ರವಲ್ಲ ರಾಜ್ಯ ಮಟ್ಟದ ಅಧಿಕಾರಿಗಳೂ ಸಹ ಅನುಮತಿ ನೀಡುವುದಕ್ಕೆ ಸಾಧ್ಯವಿಲ್ಲ. ಆದ್ದರಿಂದ ಹಲವೆಡೆ ಸಮಸ್ಯೆಗಳು ಉದ್ಬವಿಸಿದ್ದು, ಇಂತಹ ಪ್ರಕರಣಗಳ ಅನುಮತಿಗಾಗಿ ಕೇಂದ್ರಕ್ಕೆ ಕಳಿಸಲಾಗಿದೆ ಎಂದರು.

ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಕುಮಾರ್ ಪುಷ್ಕರ್, ಸಿಸಿಎಫ್‌ ಸಿದ್ದರಾಮಪ್ಪ, ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಕೆ.ಎನ್‌. ಬಸವರಾಜು, ಎಎಸ್‌ಪಿ ಎಚ್‌.ಎನ್‌. ಮಿಧುನ್‌, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ್‌ ಹಾಗೂ ಪ್ರಭು, ವಲಯ ಅರಣ್ಯ ಅಧಿಕಾರಿಗಳಾದ ಎಸ್‌.ಎಲ್‌. ಶಿಲ್ಪಾ, ಕಾಮರೇಕರ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.