ADVERTISEMENT

ಕಿತ್ತಾಡಿದ ಆಡಳಿತಾರೂಢ ಕಾಂಗ್ರೆಸ್‌ ಸದಸ್ಯರು

ಬೇಲೂರು ಪುರಸಭೆ ಸಾಮಾನ್ಯ ಸಭೆಯಲ್ಲಿ ಗೊಂದಲ ವಾತಾವರಣ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2025, 4:24 IST
Last Updated 28 ಅಕ್ಟೋಬರ್ 2025, 4:24 IST
ಬೇಲೂರು ಪುರಸಭೆಯ ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ಕಿತ್ತಾಟ ಮಾಡಿಕೊಂಡರು.
ಬೇಲೂರು ಪುರಸಭೆಯ ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ಕಿತ್ತಾಟ ಮಾಡಿಕೊಂಡರು.   

ಬೇಲೂರು: ಇಲ್ಲಿನ ಪುರಸಭೆಯ ವೇಲಾಪುರಿ ಸಭಾಂಗಣದಲ್ಲಿ  ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಶಾಸಕ ಎಚ್.ಕೆ.ಸುರೇಶ್ ಸಮ್ಮುಖದಲ್ಲೇ ಆಡಳಿತಾರೂಢ ಕಾಂಗ್ರೆಸ್‌ ಸದಸ್ಯರು ಕಿತ್ತಾಟ ನಡೆಸಿದರು.

ಪುರಸಭಾ ಸದಸ್ಯ ಸಿ.ಎನ್. ದಾನಿ ನಿರ್ಮಿಸುತ್ತಿರುವ ಕಟ್ಟಡ ಪೂರ್ಣಗೊಳ್ಳದಿದ್ದರೂ ಇ– ಸ್ವತ್ತು ನೀಡಲಾಗಿದೆ ಎಂದು ಸದಸ್ಯ ಆರ್.ಅಶೋಕ್ ಮುಖ್ಯಾಧಿಕಾರಿಗೆ ಪ್ರಶ್ನೆ ಮಾಡಿದರು. ಈ ವೇಳೆ ಕಾಂಗ್ರೆಸ್‌ ಸದಸ್ಯರಾದ ಸಿ.ಎನ್.ದಾನಿ, ಜಿ.ಶಾಂತಕುಮಾರ್ ಇನ್ನಿತರ ಸದಸ್ಯರ ನಡುವೆ ತೀವ್ರ ಮಾತಿನ ಚಕಮುಕಿ ನಡೆಯಿತು. ಇದರಿಂದಾಗಿ ಸಭೆಯಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಯಿತು. ಸದಸ್ಯ ಫಯಾಜ್, ಕುಡಿಯುವ ನೀರಿನ ಗಾಜಿನ ಲೋಟವನ್ನು ಒಡೆದು ಆಕ್ರೋಶ ವ್ಯಕ್ತಪಡಿಸಿದರು.

ಸದಸ್ಯ ಸಿ.ಎನ್.ದಾನಿ ಮಾತನಾಡಿ, ‘ನಾನು ಯಾವುದೇ ಅಕ್ರಮಗಳಲ್ಲಿ ಭಾಗಿಯಾಗಿಲ್ಲ. ಕಟ್ಟಡ ಪೂರ್ಣಗೊಂಡ ನಂತರವೇ ಸಂಪೂರ್ಣ ದಾಖಲೆ ನೀಡಿ ಇ–ಸ್ವತ್ತು ಮಾಡಿಸಿಕೊಂಡಿದ್ದೇನೆ. ಇಲ್ಲಿ ಯಾರು, ಯಾವ ರೀತಿ ಭ್ರಷ್ಟಾಚಾರ ಮಾಡಿದ್ದಾರೆ ಎಂಬುಂದು ಜನತೆಗೆ ತಿಳಿದಿದೆ’ ಎಂದರು.

ADVERTISEMENT

ಅಭಿವೃದ್ಧಿಗೆ ಬೆಂಬಲ ನೀಡಿ: ಇದಕ್ಕೂ ಮೊದಲು ಮಾತನಾಡಿದ ಶಾಸಕ ಎಚ್.ಕೆ. ಸುರೇಶ್‌, ಪುರಸಭೆಯ ಎಲ್ಲ ಸದಸ್ಯರು ಒಗ್ಗಟ್ಟಿನಿಂದ ಬೆಂಬಲ ನೀಡಿದರೆ ಮಾತ್ರ ಪಟ್ಟಣ ಅಭಿವೃದ್ಧಿ ಆಗಲು ಸಾಧ್ಯ ಎಂದು ಹೇಳಿದರು.

ವೈಯಕ್ತಿಕ ಹಿತಾಸಕ್ತಿಗಾಗಿ ಒಬ್ಬರ ಮೇಲೊಬ್ಬರು ಆರೋಪ ಮಾಡಿಕೊಂಡು ಕೂರುವ ಬದಲು, ನಮಗೆ ಮತ ನೀಡಿರುವ ಜನರಿಗಾಗಿ ಕೆಲಸ ಮಾಡಿ. ಅವರ ಋಣ ತೀರಿಸುವ ಕೆಲಸ ಮಾಡಲು  ಮುಂದಾಗಬೇಕು ಎಂದರು.

ಸದಸ್ಯ ಜಿ.ಶಾಂತಕುಮಾರ್ ಮಾತನಾಡಿ, ಪುರಸಭೆಯಲ್ಲಿ ಒಬ್ಬರ ಖಾತೆಯನ್ನು ಇನ್ನೊಬ್ಬರಿಗೆ ಮಾಡಿಕೊಡುವ ಮೂಲಕ ಅಧಿಕಾರಿಗಳು ಭ್ರಷ್ಟಾಚಾರ ಮಾಡುತ್ತಿದ್ದಾರೆ. ಪುರಸಭೆ ವ್ಯಾಪ್ತಿಯ ಸರ್ಕಾರಿ ಜಾಗವನ್ನು ಖಾತೆ ಮಾಡಿಕೊಡಲಾಗುತ್ತಿದೆ. ಮೀನು ಮಾರುಕಟ್ಟೆ ಬಳಿ ಕಂದಾಯ ಇಲಾಖೆ ಅಧಿಕಾರಿಗಳೇ ಅಕ್ರಮ ಕಟ್ಟಡ ಗೊತ್ತು ಮಾಡಿದ್ದರೂ, ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದರು.

ಸದಸ್ಯ ಜಗದೀಶ್ ಮಾತನಾಡಿ, ಕ್ರಿಯಾ ಯೋಜನೆಗಳನ್ನು ತಯಾರಿಸುವ ಸಂದರ್ಭ 23 ಸದಸ್ಯರ ಗಮನಕ್ಕೆ ತರಬೇಕು ಎಂದರು.

ಸದಸ್ಯ ಗಿರೀಶ್ ಮಾತನಾಡಿ, ಗಣಪತಿ ದೇವಾಲಯಕ್ಕೆ ಮೀಸಲಿಟ್ಟ ಜಾಗವನ್ನು ಖಾಸಗಿ ವ್ಯಕ್ತಿಗಳಿಗೆ ಖಾತೆ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿದರು.

ಸದಸ್ಯ ಭರತ್ ಮಾತನಾಡಿ, ಶ್ರೀನಿವಾಸ ಬಡಾವಣೆಯಲ್ಲಿ ಉದ್ಯಾನಕ್ಕೆ ಮೀಸಲಿಟ್ಟ ಜಾಗದಲ್ಲಿ ಅಕ್ರಮ ಕಟ್ಟಡ ಕಟ್ಟುತ್ತಿರುವ ಬಗ್ಗೆ ಮಾಹಿತಿ ನೀಡಿದರೂ ಅಧಿಕಾರಿಗಳು ಕ್ರಮ ಕೈಗೊಳ್ಳದೇ ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.

ಪುರಸಭೆ ಅಧ್ಯಕ್ಷೆ ಉಷಾ ಸತೀಶ್, ಮುಖ್ಯಾಧಿಕಾರಿ ಬಸವರಾಜು ಕಾಟಪ್ಪ ಶಿಗ್ಗಾವಿ, ಸದಸ್ಯರು ಮತ್ತು ಅಧಿಕಾರಿಗಳು ಇದ್ದರು.

ಬೇಲೂರು ಪುರಸಭೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಶಾಸಕ ಎಚ್.ಕೆ.ಸುರೇಶ್ ಮಾತನಾಡಿದರು. ಮುಖ್ಯಾಧಿಕಾರಿ ಬಸವರಾಜು ಕಾಟಪ್ಪ ಶಿಗ್ಗಾವಿ ಪುರಸಭೆ ಅಧ್ಯಕ್ಷೆ ಉಷಾ ಸತೀಶ್ ಇದ್ದರು. 

ಭ್ರಷ್ಟಾಚಾರಕ್ಕೆ ಅವಕಾಶವಿಲ್ಲ

ನನ್ನ ಅವಧಿಯಲ್ಲಿ ಅಕ್ರಮ ಮತ್ತು ಭ್ರಷ್ಟಾಚಾರ ಮಾಡುವವರಿಗೆ ಅವಕಾಶ ಇಲ್ಲ. ನನಗೆ ಸಾರ್ವಜನಿಕರ ಹಿತ ಮುಖ್ಯ. ಭ್ರಷ್ಟಾಚಾರದಲ್ಲಿ ಯಾರೇ ಭಾಗಿಯಾಗಿದ್ದರೂ ಅವರನ್ನು ಮಟ್ಟಹಾಕದೆ ಬಿಡುವುದಿಲ್ಲ ಎಂದು ಶಾಸಕ ಎಚ್‌.ಕೆ. ಸುರೇಶ್ ಎಚ್ಚರಿಕೆ ನೀಡಿದರು. 23 ಸದಸ್ಯರು ಒಮ್ಮತದಿಂದ ನನಗೆ ಸಹಕಾರ ನೀಡಿ. ಅಭಿವೃದ್ಧಿ ಜೊತೆಗೆ ಇಲ್ಲಿ ಏನು ಭ್ರಷ್ಟಾಚಾರ ಆಗಿದೆ? ಯಾರ ಕಾಲದಲ್ಲಿ ಆಗಿದೆ ಎಂದು ಉನ್ನತ ತನಿಖೆ ಮಾಡಿಸಲು ಸಿದ್ಧ. ಅಭಿವೃದ್ಧಿಗೆ ಸಹಕಾರ ನೀಡಿದರೆ ಸರ್ಕಾರದ ಮೇಲೆ ಒತ್ತಡ ತಂದು ಅನುದಾನ ತರಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.