ಚನ್ನರಾಯಪಟ್ಟಣ: ಧರ್ಮಸ್ಥಳ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರಿಗೆ ನೈತಿಕ ಸ್ಥೈರ್ಯ ತುಂಬಲು ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಶನಿವಾರ ಧರ್ಮಯಾತ್ರೆ ಕೈಗೊಂಡರು.
ಪಟ್ಟಣದಲ್ಲಿ ಆಂಜನೇಯಸ್ವಾಮಿ ದೇಗುಲದಲ್ಲಿ ಕಾಂಗ್ರೆಸ್ ಮುಖಂಡ ಎಂ.ಎ.ಗೋಪಾಲಸ್ವಾಮಿ ನೇತೃತ್ವದಲ್ಲಿ ಮುಖಂಡರು ಮತ್ತು ಕಾರ್ಯಕರ್ತರು ಪೂಜೆ ಸಲ್ಲಿಸಿದರು. ಎಲ್ಲರು ಕೇಸರಿ ಶಾಲು ಧರಿಸಿದ್ದರು.
ಧರ್ಮಯಾತ್ರೆಗೆ ತೆರಳುವ ವಾಹನಗಳಿಗೆ ಗೋಪಾಲಸ್ವಾಮಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಲೋಕ ಕಲ್ಯಾಣಕ್ಕಾಗಿ ಧರ್ಮಸ್ಥಳ ಟ್ರಸ್ಟ್ ಮತ್ತು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಸಾಲ ಸೌಲಬ್ಯ ನೀಡುವ ಮೂಲಕ ಆರ್ಥಿಕ ಚೈತನ್ಯ ಒದಗಿಸುತ್ತಿದೆ. ದೇವಸ್ಥಾನಗಳ ಜೀರ್ಣೋದ್ದಾರ, ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ನಿರ್ಮಾಣಕ್ಕೆ ನೆರವು ನೀಡುವುದು ಹಾಗು ಶುದ್ಧ ಕುಡಿಯುವ ನೀರಿನ ಘಟಕ ತೆರೆಯಲು ಆರ್ಥಿಕ ನೆರವು ಒದಗಿಸುವ ಮೂಲಕ ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಂಡಿದೆ. ಸಮಾಜದ ಒಳಿತು ಬಯಸುವ ಶ್ರೀಕ್ಷೇತ್ರದ ಬಗ್ಗೆ ನಡೆಯುತ್ತಿರುವ ಅಪಪ್ರಚಾರ ನಿಲ್ಲಬೇಕು’ ಎಂದು ಆಗ್ರಹಿಸಿದರು.
‘ಹೊರರಾಜ್ಯ ಸೇರಿ ಕರ್ನಾಟಕದಿಂದ ನಿತ್ಯ ಸಾವಿರಾರು ಭಕ್ತರು ಕ್ಷೇತ್ರಕ್ಕೆ ಆಗಮಿಸಿ ಪೂಜೆಸಲ್ಲಿಸುತ್ತಾರೆ. ಜನರ ಪಾಲಿಗೆ ಧರ್ಮಸ್ಥಳ ಶ್ರದ್ಧಾಭಕ್ತಿ ಕೇಂದ್ರ ಎನ್ನಿಸಿಕೊಂಡಿದೆ. ವಾಹನಗಳಲ್ಲಿ ಧರ್ಮಸ್ಥಳಕ್ಕೆ ತೆರಳಿ ದೇವರಿಗೆ ಪೂಜೆ ಸಲ್ಲಿಸಿ, ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರಿಗೆ ನೈತಿಕ ಸ್ಥೈರ್ಯ ತುಂಬಲಾಗುವುದು’ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ಮಂಜೇಗೌಡ, ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಎಲ್.ಪಿ.ಪ್ರಕಾಶ್‍ಗೌಡ, ಸದಸ್ಯರಾದ ಕೆ.ಎನ್.ನಾಗೇಶ್, ಮಿಲ್ಟ್ರಿ ಮಂಜು, ನಾಗೇಶ್, ಪೀಕಾರ್ಡ್ ಬ್ಯಾಂಕ್ ಅಧ್ಯಕ್ಷ ಬಿ.ಎನ್.ಮಂಜುನಾಥ್, ನಿರ್ದೇಶಕ ಎಂ.ಶಂಕರ್, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಜಿ.ಆರ್.ಮೂರ್ತಿ, ಮುಖಂಡರಾದ ಎ.ಸಿ.ಆನಂದ್ ಕುಮಾರ್, ಶಶಾಂಕ್, ಮೋಹನ್, ಆನಂದ್ ಗೌಡ, ಎಚ್.ಎನ್.ಲವಣ್ಣ, ಜಗದೀಶ್, ಸಿ.ಎಸ್.ಯುವರಾಜ್, ಗಿರೀಶ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.