ಬಾಗೂರು: ಕಲ್ಲೇಸೋಮನಹಳ್ಳಿ ಏತ ನೀರಾವರಿ ಯೋಜನೆ ಪರಿಪೂರ್ಣವಾಗಿ ಪೂರ್ಣಗೊಂಡು ಯಶಸ್ವಿಯಾಗಲು ಕಾಂಗ್ರೆಸ್ ಸರ್ಕಾರವೇ ಕಾರಣ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ. ಗೋಪಾಲಸ್ವಾಮಿ ಹೇಳಿದರು.
ಹೋಬಳಿಯ ಎಂ. ಶಿವರ ಗ್ರಾಮದ ಕೆರೆ ಸಂಪೂರ್ಣವಾಗಿ ತುಂಬಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಏರ್ಪಡಿಸಿದ್ದ ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ಯೋಜನೆಗೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಬಾರ್ಡ್ ನೆರವಿನೊಂದಿಗೆ ಸುಮಾರು ₹ 35 ಕೋಟಿ ಅನುದಾನ ಬಿಡುಗಡೆ ಮಾಡಲಾಗಿತ್ತು. ಈ ಏತ ನೀರಾವರಿ ಯೋಜನೆ ವ್ಯಾಪ್ತಿಗೆ ತಗಡೂರು, ಎಂ.ಶಿವರ, ಕೆಂಬಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ 18ಕ್ಕೂ ಹೆಚ್ಚು ಕೆರೆಗಳು ಬರುತ್ತವೆ. ಯೋಜನೆಗೆ ಈ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನೀರಾವರಿ ಸಚಿವರಾಗಿದ್ದ ಎಂ.ಬಿ. ಪಾಟೀಲ್ ಅವರಿಗೆ ನನ್ನನ್ನು ಸೇರಿದಂತೆ ಮಾಜಿ ಶಾಸಕ ಸಿ.ಎಸ್. ಪುಟ್ಟೇಗೌಡರು ಹಾಗೂ ಈ ಭಾಗದ ರೈತರು ರೈತ ಸಂಘದ ಮುಖಂಡರು ಒತ್ತಡ ತರುವ ಮೂಲಕ ಈ ಯೋಜನೆ ಅನುಷ್ಠಾನಕ್ಕೆ ಬಂದಿದೆ ಎಂದರು.
ಕ್ಷೇತ್ರದ ಜೆಡಿಎಸ್ ಶಾಸಕರು ನೀರಾವರಿ ವಿಚಾರದಲ್ಲಿ ಸುಳ್ಳು ಹೇಳುವ ಮೂಲಕ ತಾಲ್ಲೂಕಿನಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ಅವರು ಹೇಳಿದಂತೆ ಜೆಡಿಎಸ್ ಸರ್ಕಾರದ ಅವಧಿಯಲ್ಲಿ ಆಗಿಲ್ಲ. ಬದಲಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ನೀರಾವರಿ ಸಚಿವರಾದ ಮೇಲೆ ಯೋಜನೆಗೆ ಹೆಚ್ಚಿನ ಬಲ ತುಂಬಿ ಅನುದಾನ ನೀಡಿದ್ದಾರೆ. ಅವರು ಸ್ವಂತವಾಗಿ ತಾಲ್ಲೂಕಿನಲ್ಲಿ ಒಂದು ನೀರಾವರಿ ಯೋಜನೆಯನ್ನು ಹೊಸದಾಗಿ ತಂದಿಲ್ಲ ಎಂದು ಟೀಕಿಸಿದರು.
ಮಾಜಿ ಶಾಸಕ ಸಿ ಎಸ್ ಪುಟ್ಟೇಗೌಡ ಮಾತನಾಡಿ, ಈ ಯೋಜನೆಗೆ ಮೊದಲು ಜೀವ ಬಂದಿದ್ದು ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ. ರಾಜಕೀಯ ಕಾರಣಗಳಿಂದ ಯೋಜನೆ ಮೂಲೆಗುಂಪಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಈ ಯೋಜನೆ ಪರಿಪೂರ್ಣವಾಗಿದ್ದು, ಪ್ರಾರಂಭದಲ್ಲೇ ಎಂ.ಶಿವರ ಕೆರೆ ತುಂಬಿದೆ. ಮುಂಬರುವ ದಿನಗಳಲ್ಲಿ ಎಲ್ಲ ಕೆರೆಗಳು ಭರ್ತಿಯಾಗುವ ವಿಶ್ವಾಸವಿದೆ ಎಂದರು.
ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎ.ಸಿ. ಆನಂದ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜತ್ತೆನಹಳ್ಳಿ ರಾಮಚಂದ್ರು, ಮಂಜೇಗೌಡ, ರಾಜ್ಯ ವಿದ್ಯುತ್ ಕಾರ್ಖಾನೆ ನಿಗಮದ ಅಧ್ಯಕ್ಷ ಲಲಿತ ರಾಘವ ದೀಪು ಮಾತನಾಡಿದರು. ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ತೆಂಕನಹಳ್ಳಿ ಎಂ ಶಂಕರ್, ಯುವ ಕಾಂಗ್ರೆಸ್ ಮುಖಂಡರಾದ ಯುವರಾಜ್, ದಿಂಡಗೂರು ಆನಂದ್, ಜೆ.ಕೆ. ಮಂಜುನಾಥ್, ಕೃಷಿ ಪತ್ತಿನ ನಿರ್ದೇಶಕ ತಿಮ್ಮಪ್ಪ ಗೌಡ, ಜಗದೀಶ್ ಸೇರಿದಂತೆ ರೈತ ಸಂಘದ ಮುಖಂಡರು, ಗ್ರಾಮಸ್ಥರು ಹಾಜರಿದ್ದರು.
ಗ್ರಾಮದೇವತೆ ಲಕ್ಷ್ಮೀದೇವಿ ಅಮ್ಮ (ಶಿವರದಮ್ಮ) ಹಾಗೂ ದೂತರಾಯ ಕೆಂಚರಾಯ ದೇವರ ಉತ್ಸವದೊಂದಿಗೆ ಕೆರೆಯ ಏರಿ ಮೇಲೆ ದೇವರಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಗಂಗೆ ಪೂಜೆ ನೆರವೇರಿಸಿ ಬಾಗಿನ ಅರ್ಪಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.