ADVERTISEMENT

ಅಧಿಕಾರ ದರ್ಪದಿಂದ ಸೋತ ಕಾಂಗ್ರೆಸ್‌

ಜನ ಸೇವಕ ಸಮಾವೇಶದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್‌ ಕಟೀಲ್

​ಪ್ರಜಾವಾಣಿ ವಾರ್ತೆ
Published 12 ಜನವರಿ 2021, 12:53 IST
Last Updated 12 ಜನವರಿ 2021, 12:53 IST
ಹಾಸನದಲ್ಲಿ ಮಂಗಳವಾರ ನಡೆದ ಬಿಜೆಪಿಯ ಜನ ಸೇವಕ ಸಮಾವೇಶದಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಮಾತನಾಡಿದರು. ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಶಾಸಕ ಪ್ರೀತಂ ಗೌಡ ಇದ್ದಾರೆ.
ಹಾಸನದಲ್ಲಿ ಮಂಗಳವಾರ ನಡೆದ ಬಿಜೆಪಿಯ ಜನ ಸೇವಕ ಸಮಾವೇಶದಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಮಾತನಾಡಿದರು. ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಶಾಸಕ ಪ್ರೀತಂ ಗೌಡ ಇದ್ದಾರೆ.   

ಹಾಸನ: ಆರು ದಶಕಗಳ ಕಾಲ ದೇಶವನ್ನಾಳಿದ್ದ ಕಾಂಗ್ರೆಸ್‌ ಇಂದು ಅವನತ್ತಿಯತ್ತ ಸಾಗಿದೆ ಎಂದು ಬಿಜೆಪಿ ರಾಜ್ಯಘಟಕದ ಅಧ್ಯಕ್ಷ ನಳಿನ್ ಕುಮಾರ್‌ ಕಟೀಲ್‌ ಹೇಳಿದರು.

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದಿರುವ, ಪಕ್ಷದ ಬೆಂಬಲಿತ ಸದಸ್ಯರನ್ನು ಸನ್ಮಾನಿಸಲು ನಗರದಪವನಪುತ್ರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಬಿಜೆಪಿ ಆಯೋಜಿಸಿದ್ದ ‘ಜನ ಸೇವಕ‌’ ಸಮಾವೇಶಉದ್ಘಾಟಿಸಿ ಮಾತನಾಡಿದರು.

ಗಾಂಧೀಜಿ, ಅಂಬೇಡ್ಕರ್‌, ಗೋಮಾತೆಯ ಶಾಪ ಕಾಂಗ್ರೆಸ್‌ಗೆ ತಟ್ಟಿದೆ. ಸ್ವಾತಂತ್ರ್ಯ ಬಂದ ನಂತರ ಗಾಂಧಿವಿಚಾರವನ್ನು ಕೈ ಬಿಟ್ಟಿದೆ. ಇನ್ನು ಅಂಬೇಡ್ಕರ್ ಅವರನ್ನು ಎರಡು ಬಾರಿ ಸೋಲಿಸಿತು. ಅಂಬೇಡ್ಕರ್ ಅವರ ಶವ ಸಂಸ್ಕಾರಕ್ಕೂ ದೆಹಲಿಯಲ್ಲಿ ಅವಕಾಶ ನೀಡಲಿಲ್ಲ. ವಿ.ಪಿ. ಸಿಂಗ್ ಸರ್ಕಾರ ಅವರಿಗೆ ಭಾರತ ರತ್ನನೀಡಿದ್ದು. ಈ ಶಾಪ ಕೂಡ ಕಾಂಗ್ರೆಸ್‌ಗೆ ತಟ್ಟಿದೆ. ಗೋ ‌ರಕ್ಷಣೆ ಬದಲು ಗೋ ಹತ್ಯೆಗೆ ಪ್ರೋತ್ಸಾಹ ನೀಡಿತು. ಹಾಗಾಗಿ ಈ ಮೂರು ಶಾಪಗಳು ತಟ್ಟಿದೆ ಎಂದು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

ADVERTISEMENT

ಗಾಂಧೀಜಿ ಚಿಂತನೆಯ ಗ್ರಾಮ ಸ್ವರಾಜ್‌ ಕನಸು ನನಸು ಮಾಡಿದವರು ಪ್ರಧಾನಿ ನರೇಂದ್ರ ಮೋದಿ. ಕಾಂಗ್ರೆಸ್‌ಅಧಿಕಾರ ದರ್ಪ, ಅಹಂಕಾರದಿಂದ ಇಂದು ಸೋತಿದೆ. ಆದ್ದರಿಂದ ಅಧಿಕಾರದ ದರ್ಪ, ಅಹಂ ದೂರ ಇಟ್ಟು ಜನಸೇವಕರಾಗಿ ಕೆಲಸ ಮಾಡಿದರೆ ಮಾತ್ರ ಜನ ಮಾನಸದಲ್ಲಿ ಉಳಿಯಲು ಸಾಧ್ಯ ಎಂದು ನುಡಿದರು.

ರಾಜ್ಯದಲ್ಲಿ ಎಲ್ಲೇ ಬರ ಬಂದರೂ, ಯಾವ ಕೆರೆ ಬತ್ತಿದರೂ ಎಚ್‌.ಡಿ.ದೇವೇಗೌಡರ ಕಣ್ಣಲ್ಲಿ ನೀರು ಬತ್ತುವುದಿಲ್ಲ.ಕಣ್ಣೀರಿನಿಂದ ಜನರ ಮನಸ್ಸು ಗೆಲ್ಲಲು ಸಾಧ್ಯವಿಲ್ಲ ಎಂಬುದನ್ನು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜಿಲ್ಲೆಯ ಜನರು ಸಾಬೀತು ಮಾಡಿದ್ದಾರೆ ಎನ್ನುವ ಮೂಲಕ ಜೆಡಿಎಸ್ ವರಿಷ್ಠ ದೇವೇಗೌಡರನ್ನು ಟೀಕಿಸಿದರು.

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿರುವವರು ಹೆದರಬೇಕಿಲ್ಲ. ಹಿಂದೆ ಅಟಲ್‌ ಬಿಹಾರಿವಾಜಪೇಯಿ, ಯಡಿಯೂರಪ್ಪ ಸೋತು, ಗೆದ್ದವರು. ಸೋಲನ್ನು ಸವಾಲಾಗಿ ಸ್ವೀಕಾರ ಮಾಡಬೇಕು. ಸೋತವರನ್ನೂ ಕೈ ಹಿಡಿಯುವುದು ಬಿಜೆಪಿಯ ಸಿದ್ಧಾಂತ ಎಂದು ಹೇಳಿದರು.

ಸಂಸದ ಪ್ರಾತಾಪ್ ಸಿಂಹ ಮಾತನಾಡಿ, ಜಿಲ್ಲೆಯಲ್ಲಿ 1999 ರಲ್ಲಿ ಬಿ.ಬಿ. ಶಿವಪ್ಪ ಅವರನೇತೃತ್ವದಲ್ಲಿ ಐದು ಕ್ಷೇತ್ರಗಳಲ್ಲಿ ಬಿಜೆಪಿ ಬಾವುಟ ಹಾರಿಸಲಾಗಿತ್ತು. ಕಾರ್ಯಕರ್ತರು‌ ಉತ್ಸಾಹ ಕಳದುಕೊಳ್ಳದೆ ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಏಳು ‌ಕ್ಷೇತ್ರಗಳಲ್ಲೂ ಬಿಜೆಪಿ ಬಾವುಟ ಹಾರಿಸಲು ಶ್ರಮಿಸಬೇಕು ಎಂದು ಕರೆ ನೀಡಿದರು.

ಹಾಸನಕ್ಕೆ ಪಾಸ್ ಪೋರ್ಟ್ ಸೇವಾ ಕೇಂದ್ರ, ಬಿಳಿಕೆರೆಯಿಂದ-ಬೇಲೂರು, ಹಾಸನ - ಮಂಗಳೂರು ರಸ್ತೆ,ಹೊಸ ಬಸ್ ನಿಲ್ದಾಣ ಸಮೀಪದ ರೈಲ್ವೆ ಮೇಲ್ಸೇತುವೆ ಹಾಗೂ ಬೇಲೂರು - ಹಾಸನ ನಡುವಿನ ರೈಲ್ವೆ ಮಾರ್ಗಕ್ಕೆ ಹಣ ನೀಡಿದ್ದು ಕೇಂದ್ರ ಸರ್ಕಾರ. ಕಾರ್ಯಕರ್ತರು ಇದನ್ನು ಅರ್ಥ ಮಾಡಿಕೊಂಡು ಸರ್ಕಾರದ ಸಾಧನೆಗಳನ್ನು ಮನೆ ಮನೆಗೆ ತಲುಪಿಸಬೇಕು ತಿಳಿಸಿದರು.

ಬಿಜೆಪಿ ರಾಜ್ಯ ಪರಿಶಿಷ್ಟ ಜಾತಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಜನ್‌ಧನ್‌ ಖಾತೆಗಳನ್ನು ತೆರೆದು ನೇರವಾಗಿ ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡಲಾಗುತ್ತಿದೆ. ಇದರಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದಂತಾಯಿತು ಎಂದು ವಿವರಿಸಿದರು.

ಹಿರಿಯ ಮುಖಂಡ ಎ.ಮಂಜು ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆತಲುಪಿಸಬೇಕು. ಹಲವು ವರ್ಷಗಳಿಂದ ಆಯಾ ಕಟ್ಟಿನ ಜಾಗದಲ್ಲಿ ಠಿಕಾಣಿ ಹೂಡಿರುವ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕು ಎಂದು ಪಕ್ಷದ ಅಧ್ಯಕ್ಷರಿಗೆ ಮನವಿ ಮಾಡಿದರು.

ಇದಕ್ಕೂ ಮುನ್ನ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದಿರುವ ಪಕ್ಷದ ಬೆಂಬಲಿತ ಸದಸ್ಯರಿಗೆ ನಾಯಕರು ಪುಷ್ಪವೃಷ್ಟಿ ಮಾಡಿ ಅಭಿನಂದಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಕೆ. ಸುರೇಶ್‌ ಸ್ವಾಗತಿಸಿದರು. ರಾಜ್ಯ ಸಂಘಟನಾ ಕಾರ್ಯದರ್ಶಿ ಅಶ್ವಥ್ನಾರಾಯಣ, ಉಪಾಧ್ಯಕ್ಷ ರಾಜೇಂದ್ರ, ಮೈ.ವಿ. ರವಿಶಂಕರ್, ಮುಖಂಡರಾದ ಎ.ಎಸ್. ಬಸವರಾಜು,ಎಚ್.ಎಂ. ವಿಶ್ವನಾಥ್, ಬಿ.ಆರ್. ಗುರುದೇವ್, ನವಿಲೆ ಅಣ್ಣಪ್ಪ, ರೇಣುಕುಮಾರ್‌, ಹುಡಾ ಅಧ್ಯಕ್ಷ ಲಲಾಟಮೂರ್ತಿ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಹೇಮಂತ್‌ ಗೌಡ, ಸಕಲೇಶಪುರದ ಶ್ವೇತಾ ಪ್ರಸನ್ನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.