
ಅರಸೀಕೆರೆ: ‘ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ (ನರೇಗಾ) ಹೆಸರನ್ನು ರದ್ದುಪಡಿಸಿ ವಿಬಿ–ಜಿ ರಾಮ್ ಜಿ ಎಂದು ಹೊಸ ಹೆಸರಿಟ್ಟು ಕೃಷಿ ಕಾರ್ಮಿಕರಿಗೆ, ಸಣ್ಣ, ಅತೀ ಸಣ್ಣ ರೈತರಿಗೆ ಕೆಲಸ ನೀಡುವ ಯೋಜನೆಯ ಹಕ್ಕನ್ನು ಕೇಂದ್ರ ಸರ್ಕಾರ ಕಿತ್ತುಕೊಂಡಿದೆ’ ಎಂದು ಗೃಹಮಂಡಳಿ ಅಧ್ಯಕ್ಷ, ಶಾಸಕ ಕೆ.ಎಂ.ಶಿವಲಿಂಗೇಗೌಡ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಹೊರವಲಯದಲ್ಲಿರುವ ಕಸ್ತೂರ ಬಾ ಶಿಬಿರದ ಮಹಾತ್ಮ ಗಾಂಧಿ ಚಿತಾಭಸ್ಮವಿರುವ ಸ್ಥಳದಲ್ಲಿ ತಾಲ್ಲೂಕು ಕಾಂಗ್ರೆಸ್ ಘಟಕದಿಂದ ಶನಿವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.
‘ಕೇಂದ್ರ ಸರ್ಕಾರವು ಲಕ್ಷಾಂತರ ಮಂದಿಗೆ ಉದ್ಯೋಗ ನೀಡುವಂತಹ ಮಹಾತ್ಮ ಗಾಂಧೀಜಿಯ ಹೆಸರಿನಲ್ಲಿದ್ದ ಯೋಜನೆ ಕೈಬಿಟ್ಟು ಅವರ ಹೆಸರಿಗೆ ಕಳಂಕ ತಂದಿರುವುದು ಖಂಡನೀಯ. ಗ್ರಾಮೀಣ ಭಾಗದ ರೈತಾಪಿ ವರ್ಗದ ಜೀವನದ ಅನೂಕೂಲಕ್ಕಾಗಿ ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಯೋಜನೆ ಜಾರಿಗೆ ತಂದಿದ್ದರು. ಆದರೆ ಇಂದು ಏಕಾಏಕಿ ಕೇಂದ್ರ ಸರ್ಕಾರ ಮಾರ್ಪಡುಗಳನ್ನು ತಂದಿರುವುದು ದೇಶಕ್ಕೆ ಕಳಂಕವಾಗಿದೆ’ ಎಂದರು.
‘ವಿಶೇಷ ಅಧಿವೇಶನದಲ್ಲಿ ಈ ಯೋಜನೆ ತಿರಸ್ಕರಿಸಿ ಮತ್ತೊಮ್ಮೆ ಮಹಾತ್ಮ ಗಾಂಧೀಜಿ ಹೆಸರಿನಲ್ಲಿ ಯೋಜನೆ ಜಾರಿಗೆ ತರಬೇಕು ಎಂಬ ನಿಲುವನ್ನು ಕಳಿಸುವ ಹೋರಾಟ ಮಾಡಲಾಗುತ್ತದೆ. ಗ್ರಾಮೀಣ ಬದುಕಿಗೆ ಕಂಟಕ ಪ್ರಾಯವಾಗಿರುವ ವಿಬಿ– ಜಿ ರಾಮ್ ಜಿ ಯೋಜನೆ ಕೈಬಿಟ್ಟು ಪುನಃ ಮಹಾತ್ಮ ಗಾಂಧೀಜಿ ಉದ್ಯೋಗ ಖಾತ್ರಿ ಯೋಜನೆ ಜಾರಿಗೊಳಿಸುವುದೇ ನಮ್ಮ ಉದ್ದೇಶವಾಗಿದೆ’ ಎಂದರು.
‘ಈ ಹಿಂದೆ ನರೇಗಾ ಯೋಜನೆಯಡಿ ಕೇಂದ್ರ ಸರ್ಕಾರವೇ ಶೇಕಡಾ 90 ರಷ್ಟು ಅನುದಾನ ನೀಡುತ್ತಿತ್ತು. ಆದರೆ ನೂತನ ಯೋಜನೆಯ ಅಡಿ ಶೇ 60:40 ಅನುಪಾತದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಅನುದಾನ ನೀಡಬೇಕು ಎಂಬ ನಿಯಮವನ್ನು ಸೇರಿಸಲಾಗಿದೆ. ಆರ್ಥಿಕ ಹಿನ್ನಡೆಯಲ್ಲಿರುವ ರಾಜ್ಯಗಳ ಬಳಿ ಶೇ 40 ರಷ್ಟು ಅನುದಾನವಿಲ್ಲದೆ ಕೂಲಿ ಕಾರ್ಮಿಕರಿಗೆ ತೊಂದರೆಯಾಗಲಿದೆ’ ಎಂದು ಹೇಳಿದರು.
ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಗಂಡಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೆಟ್ರೋ ಬಾಬು, ಬಾಣಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್, ಮಾಜಿ ಅಧ್ಯಕ್ಷ ಗಂಜಿಗೆರೆ ಚಂದ್ರಶೇಖರ್, ಶಶಿಧರ್, ನಗರಸಭೆ ನಿಕಟ ಪೂರ್ವ ಅಧ್ಯಕ್ಷ ಎಂ.ಸಮಿವುಲ್ಲಾ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಗೀಜಿಹಳ್ಳಿ ಧರ್ಮಶೇಖರ್ ಮಾತನಾಡಿದರು.
ನಗರಸಭೆ ಮಾಜಿ ಸದಸ್ಯರಾದ ವೆಂಕಟಮುನಿ ಉಮಾಶಂಕರ್ ಶ್ರೀನಿವಾಸ್, ದರ್ಶನ್, ಎಪಿಎಂಸಿ ಮಾಜಿ ಅಧ್ಯಕ್ಷ ಜಯರಾಂ, ಗೀಜೆಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಧರ್ಮೇಶ್, ದುಮ್ಮೇನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಗಿರೀಶ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.