ADVERTISEMENT

ಶಾಸಕರ ಸಂಧಾನ ಸಭೆ: ಸಮಸ್ಯೆ ಸುಖಾಂತ್ಯ

ವೇತನ ಪಾವತಿಗೆ ಆಗ್ರಹಿಸಿ ಪ್ರತಿಭಟನೆಗೆ ಮುಂದಾದ ಗುತ್ತಿಗೆ ಪೌರ ಕಾರ್ಮಿಕರು

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2020, 1:52 IST
Last Updated 19 ನವೆಂಬರ್ 2020, 1:52 IST
ಅರಸೀಕೆರೆ ನಗರಸಭೆ ಆವರಣದಲ್ಲಿ ಪ್ರತಿಭಟನೆಗೆ ಮುಂದಾದ ಗುತ್ತಿಗೆಪೌರ ಕಾರ್ಮಿಕರು ಹಾಗೂ ನಗರಸಭೆ ಸದಸ್ಯರು, ಪೌರಾಯುಕ್ತ, ಗುತ್ತಿಗೆ ಪೌರ ಕಾರ್ಮಿಕರೊಂದಿಗೆ ಸಂಧಾನ ಸಭೆ ನಡೆಸಿದ ಶಾಸಕ ಕೆ.ಎಂ. ಶಿವಲಿಂಗೇಗೌಡ
ಅರಸೀಕೆರೆ ನಗರಸಭೆ ಆವರಣದಲ್ಲಿ ಪ್ರತಿಭಟನೆಗೆ ಮುಂದಾದ ಗುತ್ತಿಗೆಪೌರ ಕಾರ್ಮಿಕರು ಹಾಗೂ ನಗರಸಭೆ ಸದಸ್ಯರು, ಪೌರಾಯುಕ್ತ, ಗುತ್ತಿಗೆ ಪೌರ ಕಾರ್ಮಿಕರೊಂದಿಗೆ ಸಂಧಾನ ಸಭೆ ನಡೆಸಿದ ಶಾಸಕ ಕೆ.ಎಂ. ಶಿವಲಿಂಗೇಗೌಡ   

ಅರಸೀಕೆರೆ: ಮೂರು ತಿಂಗಳಿಂದ ವೇತನ ಪಾವತಿಯಾಗದೇ ಪರದಾಡುತ್ತಿರುವ ಗುತ್ತಿಗೆ ಪೌರ ಕಾರ್ಮಿಕರು ನಗರಸಭೆ ಆವರಣದಲ್ಲಿ ಪ್ರತಿಭಟನೆಗೆ ಮುಂದಾದರು, ವಿಷಯ ತಿಳಿದ ಶಾಸಕ ಕೆ.ಎಂ. ಶಿವಲಿಂಗೇಗೌಡ, ಸದಸ್ಯರು ಹಾಗೂ ಅಧಿಕಾರಿಗಳೊಂದಿಗೆ ಸಮಾಲೋಚಿಸಿ, ಸಂಧಾನ ಸಭೆ ನಡೆಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.‌

‘ಕೊರೊನಾ ಸಂದಿಗ್ಧ ಸಸ್ಥಿತಿಯಲ್ಲಿ ಗುತ್ತಿಗೆ ಪೌರ ಕಾರ್ಮಿಕರ ಜೀವನ ನಿರ್ವಹಣೆ ದುಸ್ತರವಾಗಿತ್ತು. ಹಬ್ಬಗಳ ಆಚರಣೆಗೆ ಬಿಡಿಗಾಸೂ ಇಲ್ಲದೇ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಬ್ಬಕ್ಕಾದರೂ ಕನಿಷ್ಠ ಒಂದು ತಿಂಗಳ ವೇತನ ಪಾವತಿಸಿ ಎಂದು ಮನವಿ ಮಾಡಿದರೂ ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ತಾಳುತ್ತಿದ್ದಾರೆ’ ಎಂದು ಗುತ್ತಿಗೆ ಪೌರ ಕಾರ್ಮಿಕರು ತಮ್ಮ ಕಷ್ಟ ಹೇಳಿದರು.

ಸಂಧಾನ ಸಭೆ ಬಳಿಕ ಶಾಸಕ ಕೆ.ಎಂ. ಶಿವಲಿಂಗೇಗೌಡ ಪ್ರತಿಕ್ರಿಯಿಸಿ, ‘ಪ್ರತಿದಿನ ನಗರವನ್ನು ಸ್ವಚ್ಛವಾಗಿಡುವಲ್ಲಿ ಗುತ್ತಿಗೆ ಪೌರ ಕಾರ್ಮಿಕರು ಹಗಲಿರುಳು ದುಡಿಯುತ್ತಿದ್ದಾರೆ. ಅವರ ಕಷ್ಟ ಸುಖ ಕೇಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ನಾಳೆಯೇ ಗುತ್ತಿಗೆ ಪೌರ ಕಾರ್ಮಿಕರ ಬಾಕಿ ವೇತನವನ್ನು ಪಾವತಿಸುವಂತೆ ಪೌರಾಯುಕ್ತ ಕಾಂತರಾಜ್‌ಗೆ ಸೂಚಿಸಿದರು.

ADVERTISEMENT

ಪೌರಾಯುಕ್ತ ಕಾಂತರಾಜ್ ಮಾತನಾಡಿ, ‘ಕೊರೊನಾ ಸಂದಿಗ್ಧತೆಯಲ್ಲಿ ತೆರಿಗೆ ಸಂಗ್ರಹದಲ್ಲಾದ ವ್ಯತ್ಯಾಸದಿಂದಾಗಿ ಗುತ್ತಿಗೆ ಪೌರ ಕಾರ್ಮಿಕರಿಗೆ ನಿಗದಿತ ಸಮಯಕ್ಕೆ ವೇತನ ಪಾವತಿಸುವಲ್ಲಿ ವಿಳಂಬವಾಗಿದ್ದು, ಇದಕ್ಕೆ ಕ್ಷಮೆಯಾಚಿಸುತ್ತೇನೆ. ಆದರೂ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಒಂದು ತಿಂಗಳ ವೇತನ ಬಿಡುಗಡೆ ಮಾಡಲಾಗಿದೆ ಆದರೆ, ಲೆಕ್ಕಾಧಿಕಾರ ವಿಭಾಗದಲ್ಲಾದ ತಾಂತ್ರಿಕ ದೋಷದಿಂದಾಗಿ ಸಕಾಲದಲ್ಲಿ ವೇತನ ಪಾವತಿಸಲಾಗಿಲ್ಲ. ಬಾಕಿ ಇರುವ ವೇತನವನ್ನು ಕೂಡಲೇ ಪಾವತಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ನಗರಸಭೆ ಸದಸ್ಯರಾದ ಸಮೀವುಲ್ಲಾ, ಗಿರೀಶ್, ಕಾಂತೇಶ್, ದರ್ಶನ್, ಝಾಕೀರ್, ಪುಟ್ಟಸ್ವಾಮಿ, ಜೆಡಿಎಸ್ ಮುಖಂಡರಾದ ಮಲ್ಲಿಕಾರ್ಜುನ್, ಸಿಕಂದರ್ ಪಾಷಾ, ಬಿಜೆಪಿ ಮುಖಂಡರಾದ ರಮೇಶ್ ನಾಯ್ಡು, ಶಿವನ್ ರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.