ADVERTISEMENT

ಹಾಸನ: ಕೊರೊನಾ ಬೇಗೆ, ತರಕಾರಿ- ದಿನಸಿ ತುಟ್ಟಿ

ಜಿಲ್ಲೆಯಲ್ಲಿ ಆಹಾರ ಸಾಮಗ್ರಿಗಳ ಕೃತಕ ಅಭಾವ, ಶೇ 25ರಷ್ಟು ಬೆಲೆ ಹೆಚ್ಚಳ

ಕೆ.ಎಸ್.ಸುನಿಲ್
Published 8 ಏಪ್ರಿಲ್ 2020, 19:45 IST
Last Updated 8 ಏಪ್ರಿಲ್ 2020, 19:45 IST
ಹಾಸನದ ವಿದ್ಯಾನಗರದ ದಿನಸಿ ಅಂಗಡಿಯಲ್ಲಿ ಗ್ರಾಹಕರು ಪದಾರ್ಥ ಖರೀದಿಸಿದರು
ಹಾಸನದ ವಿದ್ಯಾನಗರದ ದಿನಸಿ ಅಂಗಡಿಯಲ್ಲಿ ಗ್ರಾಹಕರು ಪದಾರ್ಥ ಖರೀದಿಸಿದರು   

ಹಾಸನ: ಲಾಕ್‌ಡೌನ್‌ ಪರಿಸ್ಥಿತಿ ದುರುಪಯೋಗ ಪಡಿಸಿಕೊಂಡ ಪರಿಣಾಮ ತರಕಾರಿ ಮತ್ತು ದಿನಸಿ ದರದಲ್ಲಿ ದುಬಾರಿಯಾಗಿದೆ.

ಜಿಲ್ಲಾ ಕ್ರೀಡಾಂಗಣ, ನಗರ ಬಸ್‌ ನಿಲ್ದಾಣ ಮತ್ತು ಹೊಸ ಬಸ್‌ ನಿಲ್ದಾಣದಲ್ಲಿ ತರಕಾರಿ ಮತ್ತು ಹಣ್ಣು ಖರೀದಿಗೆ ಜಿಲ್ಲಾಡಳಿತ ಅನುಕೂಲ ಕಲ್ಪಿಸಿದೆ. ಲಾಕ್‌ಡೌನ್‌ ಜಾರಿಯಾದಾಗಿನಿಂದ ತರಕಾರಿ ದರದಲ್ಲಿ ಏರಿಕೆಯಾಗುತ್ತಿದೆ.

ಮನೆ ಬಳಿ ಬರುವ ತಳ್ಳುವ ಗಾಡಿ, ಗೂಡ್ಸ್‌ ಆಟೊಗಳಲ್ಲಿ ₹10ಕ್ಕೆ 4 ಕಟ್ಟು ಸೊಪ್ಪು ಇದ್ದರೆ, ಕ್ರೀಡಾಂಗಣದಲ್ಲಿ ಎರಡು ಕಟ್ಟು ಸೊಪ್ಪು ದೊರೆಯುತ್ತಿದೆ.

ADVERTISEMENT

ಟೊಮೆಟೊ ಕೆ.ಜಿ. ₹20, ಈರುಳ್ಳಿ ₹25 , ನುಗ್ಗೆಕಾಯಿ ₹40, ಬೀನ್ಸ್ ₹60, ಬೆಂಡೆಕಾಯಿ ₹50, ಆಲೂಗಡ್ಡೆ ₹40, ಹಸಿರು ಮೆಣಸಿನ ಕಾಯಿ ₹40, ಕ್ಯಾರೆಟ್ ₹60, ಬೆಳ್ಳುಳ್ಳಿ ₹120 ಹಾಗೂ ತೆಂಗಿನಕಾಯಿ ಒಂದಕ್ಕೆ ₹20ರಿಂದ ₹30ರವರೆಗೂ ಮಾರಾಟವಾಗುತ್ತಿತ್ತು.

ಹಣ್ಣುಗಳ ದರದಲ್ಲೂ ಅಲ್ಪ ಏರಿಳಿತವಾಗಿದೆ. ಬಾಳೆಹಣ್ಣು ಕೆ.ಜಿ ₹50ರಿಂದ ₹80, ದ್ರಾಕ್ಷಿ ₹80ರಿಂದ ₹50, ಸೇಬು ₹100, ದಾಳಿಂಬೆ ₹160, ಸಪೋಟ ₹40ರಿಂದ ₹50, ಕಲ್ಲಂಗಡಿ ಕೆ.ಜಿಗೆ ₹15ರಂತೆ ಲಭ್ಯ ಇವೆ.

ಹಾಸನ ಮಾರುಕಟ್ಟೆಗೆ ಹಾಸನ ಸುತ್ತಮುತ್ತ, ಬೇಲೂರು, ಹಳೇಬೀಡು, ಅರಕಲಗೂಡು ಹಾಗೂ ಬೆಂಗಳೂರಿನಿಂದ ತರಕಾರಿ ಆವಕವಾಗುತ್ತದೆ. ಕೊರೊನಾ ನಿರ್ಬಂಧದಿಂದಾಗಿ ವಾಹನಗಳ ಸಂಚಾರ ಕಡಿಮೆ ಆಗಿ ಮಾಲು ಕಡಿಮೆ ಪೂರೈಕೆ ಆಗುತ್ತಿದೆ.

ಲಾಕ್‌ಡೌನ್‌ನಿಂದಾಗಿ ಆಹಾರ ಸಾಮಗ್ರಿಗಳ ಕೃತಕ ಅಭಾವವೂ ಜಿಲ್ಲೆಯಲ್ಲಿ ಸೃಷ್ಟಿಯಾಗುತ್ತಿದೆ. ಸಗಟು ವರ್ತಕರ ಪ್ರಕಾರ ಪ್ರತಿ ಪಡಿತರ ಬೆಲೆಯೂ ಶೇ 25ರಷ್ಟು ಹೆಚ್ಚಳವಾಗಿದೆ.

25 ಕೆ.ಜಿ. ತೂಕದ ಅಕ್ಕಿ ಚೀಲ ₹800ರಿಂದ ₹1,200ಕ್ಕೇರಿದೆ. ಸಕ್ಕರೆ ಕೆ.ಜಿ. ₹40 ರಿಂದ ₹50ಕ್ಕೆ ಮಾರಾಟವಾಗುತ್ತಿದೆ. ಸೂರ್ಯಕಾಂತಿ ಎಣ್ಣೆ ಕೆ.ಜಿ ₹95ರಿಂದ ₹102 ತಲುಪಿದೆ. ಇನ್ನು ಸೋಪು, ಹ್ಯಾಂಡ್ ವಾಶ್, ಸ್ಯಾನಿಟೈಸರ್‌ ದೊರೆಯುತ್ತಿಲ್ಲ.

ಆಹಾರ ಪದಾರ್ಥದ ಕೊರತೆ ಇಲ್ಲದಿದ್ದರೂ ನಿಗದಿತ ವೇಳೆಯಲ್ಲಿ ಮಾತ್ರ ಖರೀದಿಗೆ ಹೊರಡಿಸಿರುವ ಆದೇಶ ನೆಪವಾಗಿಟ್ಟಿಕೊಂಡು ಬೆಲೆ ಏರಿಕೆ ಮಾಡಲಾಗಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ಜನರು ಸಹ ಲಾಕ್‌ಡೌನ್‌ ಅವಧಿ ವಿಸ್ತರಣೆ ಆಗಬಹುದೆಂಬ ಆತಂಕದಿಂದ ಅಗತ್ಯ ವಸ್ತುಗಳ ಖರೀದಿಗೆ ಮುಗಿ ಬಿದ್ದಿದ್ದಾರೆ.

‘ಕೊರೊನಾ ಹಿನ್ನೆಲೆಯಲ್ಲಿ ದಿನ ಬಿಟ್ಟು ದಿನ ತರಕಾರಿ ಮಾರಾಟ ಮಾಡಲು ಅವಕಾಶ ನೀಡಲಾಗಿದೆ. ಇವತ್ತು ವ್ಯಾಪಾರ ಆಗದಿದ್ದರೆ ಮತ್ತೆ ಎರಡು ದಿನದವರೆಗೆ ಕಾಯಬೇಕು. ಅಷ್ಟರಲ್ಲಿ ತರಕಾರಿ ಹಾಳಾಗುವ ಸಾಧ್ಯತೆ ಇದೆ. ಮಾರುಕಟ್ಟೆಗೆ ಬರುತ್ತಿರುವ ಮಾಲು ಕಡಿಮೆ ಆಗಿದೆ. ಹಾಗಾಗಿ ದರದಲ್ಲಿ ಹೆಚ್ಚಳವಾಗಿದೆ. ಬೆಳಿಗ್ಗೆ 7ರಿಂದ 12ರವರೆಗೆ ಮಾರಾಟ ಮಾಡಲು ಮಾತ್ರ ಅವಕಾಶವಿದೆ’ ಎನ್ನುತ್ತಾರೆ ತರಕಾರಿ ವ್ಯಾಪಾರಿ ಮಂಜುಳಾ.

‘ತಳ್ಳುವ ಗಾಡಿಗಳಲ್ಲಿ ಮನೆ ಬಾಗಿಲಿಗೆ ತರಕಾರಿಗಳು ಬರುತ್ತಿವೆ. ಅವರು ಹೇಳಿದ ಬೆಲೆಗೆ ಕೊಂಡುಕೊಳ್ಳಬೇಕು. ಬೇರೆ ದಾರಿ ಇಲ್ಲ’ ಎಂದು ವಿದ್ಯಾನಗರ ನಿವಾಸಿ ಮಂಜುನಾಥ್‌ ಅಲವತ್ತುಕೊಂಡರು.

*
ಲಾಕ್‌ಡೌನ್ ಇದ್ದರೂ ಆಹಾರ ಮತ್ತು ಅಗತ್ಯ ಪದಾರ್ಥಗಳ ಸಾಗಣೆಗೆ ನಿರ್ಬಂಧವಿಲ್ಲ. ವರ್ತಕರು ಪಡಿತರವನ್ನು ದುಬಾರಿ ಬೆಲೆಗೆ ಮಾರಾಟ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು.
-ಆರ್.ಗಿರೀಶ್‌, ಜಿಲ್ಲಾಧಿಕಾರಿ

*
ಅಕ್ಕಿ ಮಿಲ್‌ಗಳಲ್ಲೇ ಬೆಲೆ ಏರಿಕೆಯಾಗಿರುವ ಕಾರಣ ಪದಾರ್ಥಗಳ ದರ ಸಹಜವಾಗಿಯೇ ಶೇ 25ರಷ್ಟು ಹೆಚ್ಚಳವಾಗಿದೆ.
-ಸುಂದರೇಶ್‌, ಸಗಟು ವರ್ತಕ

*
ಪರಿಸ್ಥಿತಿ ದುರುಪಯೋಗ ಮಾಡಿಕೊಂಡು ದಿನ ಬಳಕೆ ವಸ್ತುಗಳನ್ನು ವರ್ತಕರು ಹೆಚ್ಚಿನ ಬೆಲೆಗೆ ಮಾರಾಟ ಮಾಡಬಾರದು.
-ಪ್ರಜ್ವಲ್ ರೇವಣ್ಣ, ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.