ADVERTISEMENT

ಮನೆ ಹಾನಿ ಪರಿಹಾರಕ್ಕೆ ಲಂಚ ಬೇಡಿಕೆ: ಗ್ರಾಮ ಲೆಕ್ಕಾಧಿಕಾರಿಗೆ ಶಾಸಕ ಸುರೇಶ್ ತರಾಟೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2024, 13:48 IST
Last Updated 10 ಜನವರಿ 2024, 13:48 IST
<div class="paragraphs"><p>ಹಳೇಬೀಡಿನ ಪಾರ್ವತಮ್ಮ ನಂಜೇಗೌಡ ಕಲ್ಯಾಣ ಮಂಟಪದಲ್ಲಿ ಮಂಗಳವಾರ ರಾತ್ರಿ ನಡೆದ ಗ್ರಾಮ ಸಭೆಯಲ್ಲಿ ಪ್ರಕೃತಿ ವಿಕೋಪದಿಂದ ಹಾನಿಯಾದ ಮನೆಗೆ ಪರಿಹಾರ ಕೊಡಿಸಲು ಲಂಚ ಕೇಳಿದ ಗ್ರಾಮ ಲೆಕ್ಕಾಧಿಕಾರಿ ಭರತ್ ಅವರನ್ನು ಶಾಸಕ ಎಚ್.ಕೆ.ಸುರೇಶ್ ವಿಚಾರಣೆ ನಡೆಸಿದರು.</p></div>

ಹಳೇಬೀಡಿನ ಪಾರ್ವತಮ್ಮ ನಂಜೇಗೌಡ ಕಲ್ಯಾಣ ಮಂಟಪದಲ್ಲಿ ಮಂಗಳವಾರ ರಾತ್ರಿ ನಡೆದ ಗ್ರಾಮ ಸಭೆಯಲ್ಲಿ ಪ್ರಕೃತಿ ವಿಕೋಪದಿಂದ ಹಾನಿಯಾದ ಮನೆಗೆ ಪರಿಹಾರ ಕೊಡಿಸಲು ಲಂಚ ಕೇಳಿದ ಗ್ರಾಮ ಲೆಕ್ಕಾಧಿಕಾರಿ ಭರತ್ ಅವರನ್ನು ಶಾಸಕ ಎಚ್.ಕೆ.ಸುರೇಶ್ ವಿಚಾರಣೆ ನಡೆಸಿದರು.

   

ಹಳೇಬೀಡು: ಪ್ರಕೃತಿ ವಿಕೋಪದಿಂದ ಮನೆ ಹಾಳಾಗಿದ್ದಕ್ಕೆ ಸರ್ಕಾರದಿಂದ ಪರಿಹಾರ ಕೊಡಿಸಲು ₹50ಸಾವಿರ ಲಂಚ ಕೇಳುತ್ತಾರೆ ಎಂದು ಹಳೇಬೀಡು ಜನತಾ ಕಾಲೊನಿ ನಿವಾಸಿ ಮಂಜು ಎಂಬುವವರು ಶಾಸಕರಿಗೆ ದೂರು ನೀಡಿದರು.

ಮಂಗಳವಾರ ನಡೆದ ಗ್ರಾಮಸಭೆಯಲ್ಲಿ ಈ ಪ್ರಕರಣ ನಡೆಯಿತು. ಮಳೆಯಿಂದ ಮನೆ ಶಿಥಿಲವಾಗಿದೆ. ಪರಿಹಾರಕ್ಕೆ ಅರ್ಜಿ ಹಾಕಿದ್ದು, ಕಂದಾಯ ಇಲಾಖೆಯವರು ಮಹಜರ್ ನಡೆಸಿದ್ದಾರೆ. ಪರಿಹಾರ ಕೊಡಿಸಿ ಎಂದು ಕೇಳಿದರೆ, ₹ 5ಲಕ್ಷ ಪರಿಹಾರ ಕೊಡಿಸಲು, ₹ 50ಸಾವಿರ ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಹಣ ಕೊಡದಿದ್ದರೆ ಅರ್ಜಿ ವಜಾ ಮಾಡುತ್ತೇನೆ ಎಂದು ಭಯಪಡಿಸುತ್ತಾರೆ ಎಂದು ಮಂಜು ಅಳಲು ತೋಡಿಕೊಂಡರು. ಗ್ರಾಮ ಲೆಕ್ಕಾಧಿಕಾರಿ ಲಂಚ ಬೇಡಿಕೆ ಇಟ್ಟು ಮಾತನಾಡಿದ ಆಡಿಯೊ ರೆಕಾರ್ಡಿಂಗ್ ಅನ್ನು ಸಭೆಯಲ್ಲಿ ಬಹಿರಂಗ ಪಡಿಸಿದರು.

ADVERTISEMENT

ಶಾಸಕ ಎಚ್.ಕೆ.ಸುರೇಶ್ ವಿಚಾರಣೆ ನಡೆಸಿ, ಗ್ರಾಮ ಲೆಕ್ಕಾಧಿಕಾರಿ ಭರತ್ ಅವರನ್ನು ತರಾಟೆಗೆ ತೆಗೆದುಕೊಂಡರು. ಬಡ ಜನರ ಕಷ್ಟಕ್ಕೆ ಸ್ಪಂದಿಸಬೇಕು. ಅರ್ಜಿದಾರ ಮಂಜು ಅವರಿಗೆ ತಕ್ಷಣ ಪರಿಹಾರ ಕೊಡಿಸುವ ಕೆಲಸಕ್ಕೆ ಕೈಹಾಕಬೇಕು ಎಂದು ಭರತ್ ಅವರಿಗೆ ಎಚ್ಚರಿಕೆ ನೀಡಿದರು.
ಅಂಗನವಾಡಿ ಮಕ್ಕಳಿಗೆ ಕೊಡುವ ಆಹಾರ ಗುಣಮಟ್ಟ ಇಲ್ಲ. ಆಹಾರದಲ್ಲಿ ಹುಳು ಕಾಣಿಸುತ್ತದೆ ಎಂದು ಬಸ್ತಿಹಳ್ಳಿಯ ಗಣೇಶ್ ಆಹಾರದ ಪ್ಯಾಕೆಟ್ ತಂದು ಶಾಸಕರಿಗೆ ತೋರಿಸಿದರು. ಅಧಿಕಾರಿಗಳ ಜತೆ ಚರ್ಚಿಸುವುದಾಗಿ ಶಾಸಕರು ತಿಳಿಸಿದರು.

ಹಳೇಬೀಡು ಸಂಪರ್ಕ ರಸ್ತೆಗಳು ಅಭಿವೃದ್ದಿಯಾಗುತ್ತಿದೆ. ಸರ್ಕಾರಿ ವಸತಿ ಶಾಲೆಗಳಿಗೆ ಸಂಪರ್ಕ ಕಲ್ಪಿಸುವ ಕುಂಟಮ್ಮ ಸೇತುವೆಯಿಂದ ದ್ವಾರಸಮುದ್ರ ಕೆರೆ ಕೋಡಿಗೆ ತಲುಪುವ ರಸ್ತೆಯ ಡಾಂಬರೀಕರಣ ಕಾಮಗಾರಿ ನಡೆಯುತ್ತಿದೆ. ಹಳೇಬೀಡಿನಿಂದ ಹಗರೆ ಸಂಪರ್ಕ ಕಲ್ಪಿಸುವ ರಸ್ತೆ ಕೆಲಸ ಪೂರ್ಣಗೊಂಡಿದೆ ಎಂದು ಅವರು ತಿಳಿಸಿದರು.

ನರೇಗಾ ಯೋಜನೆ ಅಡಿಯಲ್ಲಿ ವಾರ್ಡ್ ಸಭೆಯಲ್ಲಿ ನಿರ್ಣಯ ಕೈಗೊಂಡ ಕಾಮಗಾರಿಗಳಿಗೆ ಅನುಮೊದನೆ ನೀಡಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷ ನಿತ್ಯಾನಂದ ಅಧ್ಯಕ್ಷತೆವಹಿಸಿದ್ದರು. ಉಪಾಧ್ಯಕ್ಷೆ ಕವಿತ ರಮೇಶ್, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಸತೀಶ್. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಸ್.ಸಿ.ವಿರೂಪಾಕ್ಷ, ಕಾರ್ಯದರ್ಶಿ ಶೈಲಜ.ಬಿ.ಎನ್ ಗ್ರಾಮ ಪಂಚಾಯಿತಿ ಸದಸ್ಯರಾದ ಮಲ್ಲೇಶಪ್ಪ, ಚಂದ್ರಶೇಖರ್, ನಿಂಗಪ್ಪ, ಸಿ.ಆರ್.ಲಿಂಗಪ್ಪ, ಕಾಮತಮಣಿ, ಶಿವಕುಮಾರ್, ರಮೇಶ್, ಸುರೇಶ್. ಮಧು, ಲಕ್ಷ್ಮಿ. ಮೋಹನ್, ವಾಣಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.