ಹೊಳೆನರಸೀಪುರ ತಾಯಿ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ 8 ಹಾಸಿಗೆಗಳ ಅತ್ಯಾಧುನಿಕ ಐಸಿಯು ಘಟಕ ಹಾಗೂ ಆಸ್ಪತ್ರೆಯ ನೂತನ 2 ನೇ ಶಸ್ತ್ರ ಚಿಕಿತ್ಸಾ ಕೊಠಡಿಯನ್ನು ಶಾಸಕ ಎಚ್.ಡಿ.ರೇವಣ್ಣ ಸೋಮವಾರ ಉದ್ಘಾಟಿಸಿದರು.
ಹೊಳೆನರಸೀಪುರ: ‘ತಾಲ್ಲೂಕುಗಳಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಪ್ರತೀ ವರ್ಷ ಸರ್ಕಾರ ₹18 ಲಕ್ಷ ಹಣ ಬಿಡುಗಡೆ ಮಾಡುತ್ತದೆ. ಆದರೆ ಇದು ಗ್ರಾಮೀಣ ಜನರಿಗೆ ಬಳಕೆ ಆಗುತ್ತಿಲ್ಲ. ಹೊಳೆನರಸೀಪುರ ತಾಲ್ಲೂಕು ಆಡಳಿತ ವೈದ್ಯಾಧಿಕಾರಿ ಡಾ. ರಾಜೇಶ್ ಹಾಗೂ ಜಿಲ್ಲಾ ಆಡಳಿತ ವೈದ್ಯಾಧಿಕಾರಿ ಡಾ.ಅನಿಲ್ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಈ ಬಗ್ಗೆ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಶಾಸಕ ಎಚ್.ಡಿ ರೇವಣ್ಣ ಆಗ್ರಹಿಸಿದರು.
ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ನೂತನ ಐಸಿಯು ಘಟಕ ಹಾಗೂ 2ನೇ ಶಸ್ತ್ರ ಚಿಕಿತ್ಸಾ ಘಟಕ ಉದ್ಘಾಟಿಸಿ ಮಾತನಾಡಿ, ‘ನಮ್ಮ ಪಡವಲಹಿಪ್ಪೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈ ಹಿಂದೆ ಅತ್ಯತ್ತಮ ಸೇವೆ ಸಿಗುತ್ತಿತ್ತು. ಆದರೆ ಈಗ ಆಸ್ಪತ್ರೆಯು ಮುಚ್ಚುವ ಹಂತ ತಲುಪಿದೆ ಆದರೂ ಯಾರ ವಿರುದ್ದವೂ ಕ್ರಮ ತೆಗೆದುಕೊಂಡಿಲ್ಲ’ ಎಂದರು.
‘ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲೂ ಡಿ ಗ್ರೂಪ್ ಮತ್ತು ದಿನಗೂಲಿ ನೌಕರರು ವೈದ್ಯರನ್ನು ನಿಯಂತ್ರಿಸುತ್ತಿದ್ದಾರೆ ಎನ್ನುವ ಆರೋಪ ವ್ಯಾಪಕವಾಗಿದೆ. ನೀವು ವೈದ್ಯರು ತಲೆ ಕೆಡಿಸಿಕೊಳ್ಳಬೇಡಿ. ಸರಿಯಾಗಿ ಕೆಲಸ ಮಾಡದವರನ್ನು ಮುಲಾಜಿಲ್ಲದೆ ತೆಗೆದುಹಾಕಿ’ ಎಂದು ಸಲಹೆ ನೀಡಿದರು.
‘ತಾಲ್ಲೂಕಿನಲ್ಲಿ 7 ಸಮುದಾಯ ಆಸ್ಪತ್ರೆಗಳ ಕಾಮಗಾರಿ ನಡೆಯುತ್ತಿದೆ. ಈ ಆಸ್ಪತ್ರೆಗಳ ಕಾಮಗಾರಿ ಪೂರ್ಣಗೊಂಡರೆ ಪ್ರತೀ ಕೇಂದ್ರದಲ್ಲಿ 7 ಜನ ವೈದ್ಯರು, 7 ಜನ ದಾದಿಯರು, 5 ಜನ ತಾಂತ್ರಿಕ ಸಿಬ್ಬಂದಿಗೆ ಅವಕಾಶ ಸಿಗಲಿದೆ. ಈ ಸರ್ಕಾರಿ ಆಸ್ಪತ್ರೆ ಹಾಗೂ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಆಧುನೀಕರಣಕ್ಕೆ ₹50 ಕೊಟಿ ಹಣ ಕೊಡಿಸಿದ್ದೇನೆ. ಡಯಾಲಿಸಿಸ್, ಸಿ.ಟಿ.ಸ್ಕ್ಯಾನ್ ಸೌಲಭ್ಯ, ಆಧುನಿಕ ಸೌಲಭ್ಯದ ಐಸಿಯುಗಳು, 25 ಜನ ತಜ್ಞ ವೈದ್ಯರು, 70 ಕ್ಕೂ ಹೆಚ್ಚು ದಾದಿಯರು, 100ಕ್ಕೂ ಹೆಚ್ಚು ಸಿಬ್ಬಂದಿ ಅತ್ಯುತ್ತಮವಾದ ಪ್ರಯೋಗಾಲಯ ಎಲ್ಲವೂ ಇದ್ದು ರಾಜ್ಯದ ಯಾವುದೇ ತಾಲ್ಲೂಕಿನಲ್ಲಿ ಇಂತಹ ಸರ್ಕಾರಿ ಆಸ್ಪತ್ರೆ ಇಲ್ಲ’ ಎಂದರು.
ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಧನ್‍ಶೇಖರ್ ಮಾತನಾಡಿ, ‘ಶಾಸಕರು ಮುಂದಿನ 20 ವರ್ಷಗಳಿಗೆ ಆಗುವಂತಹ 5 ಅಂತಸ್ತಿನ ಕಟ್ಟಡವನ್ನು, ಆಧುನಿಕ ಸೌಲಭ್ಯಗಳನ್ನು ಒದಗಿಸಿಕೊಟ್ಟಿದ್ದಾರೆ. ಬಂಜೆತನ ನಿವಾರಣಾ ಕೇಂದ್ರ ಹಾಗೂ ಎಂ.ಆರ್.ಐ. ಸ್ಕ್ಯಾನಿಂಗ್ ಮತ್ತು ಹೃದ್ರೋಗ ಚಿಕಿತ್ಸಾ ಸೌಲಭ್ಯ ದೊರಕುವಂತಾದರೆ ಇದೊಂದು ಪರಿಪೂರ್ಣ ಆಸ್ಪತ್ರೆ ಆಗುತ್ತದೆ’ ಎಂದು ಹೇಳಿದರು.
ಡಾ. ಸೆಲ್ವಕುಮಾರ್, ಡಾ.ನಾಗೇಂದ್ರ, ಡಾ.ಕುಸುಮಾ, ಡಾ.ರೇಖಾ, ಡಾ.ಅಶ್ವತಿ, ಡಾ.ಸತ್ಯಪ್ರಕಾಶ್, ಡಾ.ಲೋಕೇಶ್, ಡಾ.ಅಜಯ್ ಅವರನ್ನು ಶಾಸಕರು ಸನ್ಮಾನಿಸಿದರು.
ತಹಶೀಲ್ದಾರ್ ರೇಣುಕುಮಾರ್, ಬಿ.ಇ.ಒ ಸೋಮಲಿಂಗೇಗೌಡ, ಸಮಾಜಕಲ್ಯಾಣಾಧಿಕಾರಿ ಕೃಷ್ಣಮೂರ್ತಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.