ADVERTISEMENT

ಕೋವಿಡ್‌ನಿಂದ ಮತ್ತೆ 7 ಜನ ಸಾವು

ಜಿಲ್ಲೆಯಲ್ಲಿ 177 ಜನರಿಗೆ ಸೋಂಕು ದೃಢ; 133 ಜನ ಗುಣಮುಖ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2020, 16:53 IST
Last Updated 18 ಆಗಸ್ಟ್ 2020, 16:53 IST

ಹಾಸನ: ಜಿಲ್ಲೆಯಲ್ಲಿ ಹೊಸದಾಗಿ 177 ಜನರಿಗೆ ಕೊರೊನಾ ಪಾಸಿಟಿವ್‌ ದೃಢಪಟ್ಟಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 4,998ಕ್ಕೆ ಏರಿಕೆಯಾಗಿದೆ. ಕೋವಿಡ್‌ನಿಂದಾಗಿ ಮತ್ತೆ 7 ಜನರು ಮೃತಪಟ್ಟಿದ್ದು, ಒಟ್ಟು ಮೃತರ ಸಂಖ್ಯೆ 143ಕ್ಕೆ ಏರಿಕೆಯಾಗಿದೆ.

ಮೃತಪಟ್ಟ 7 ಜನರಲ್ಲಿ 5 ಜನ ಹಾಸನ ತಾಲ್ಲೂಕಿನವರಾಗಿದ್ದು, ಅವರಲ್ಲಿ 75 ವರ್ಷದ ವೃದ್ಧ, 55 ವರ್ಷ, 38 ವರ್ಷ ಮತ್ತು 51 ವರ್ಷದ ಪುರುಷರು ಹಾಗೂ 65 ವರ್ಷದ ವೃದ್ಧೆ. ಅರಸೀಕೆರೆ ತಾಲ್ಲೂಕಿನ 72 ವರ್ಷ ಹಾಗೂ 65 ವರ್ಷದ ವೃದ್ಧೆಯರು ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಆದರೆ ಚಿಕಿತ್ಸೆಗೆ ಸ್ಪಂದಿಸಿಲ್ಲ. ಸರ್ಕಾರದ ನಿಯಮಾನುಸಾರ ಅಂತ್ಯಕ್ರಿಯೆ ನೆರವೇರಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್‌ ತಿಳಿಸಿದರು.

ಜಿಲ್ಲೆಯಲ್ಲಿ 1,685 ಸಕ್ರಿಯ ಪ್ರಕರಣಗಳಿದ್ದು, ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಗಳವಾರ ಬಿಡುಗಡೆಯಾದ 133 ಜನ ಸೇರಿದಂತೆ ಈವರೆಗೆ 3,170 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ತೀವ್ರ ನಿಗಾ ಘಟಕದಲ್ಲಿ 52 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.

ಹೊಸದಾಗಿ ಪತ್ತೆಯಾದ 177 ಕೊರೊನಾ ಪ್ರಕರಣಗಳಲ್ಲಿ 37 ಜನ ಅರಸೀಕೆರೆ ತಾಲ್ಲೂಕಿನವರು, 12 ಜನ ಚನ್ನರಾಯಪಟ್ಟಣ ತಾಲ್ಲೂಕಿನವರು, ಆಲೂರು ತಾಲ್ಲೂಕಿನಲ್ಲಿ 9 ಜನ, 76 ಜನ ಹಾಸನ ತಾಲ್ಲೂಕು, 21 ಜನ ಹೊಳೆನರಸೀಪುರ ತಾಲ್ಲೂಕು, 9 ಜನ ಅರಕಲಗೂಡು ತಾಲ್ಲೂಕು, ಬೇಲೂರು ತಾಲ್ಲೂಕಿನಲ್ಲಿ 5 ಜನ, ಸಕಲೇಶಪುರ ತಾಲ್ಲೂಕಿನ 7 ಜನರಿಗೆ ಹಾಗೂ ಹೊರ ಜಿಲ್ಲೆಯ ಒಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.