ADVERTISEMENT

ಹಾಸನ: ಆರೋಗ್ಯ ಇಲಾಖೆಯ 13 ಸಿಬ್ಬಂದಿಗೆ ಕೋವಿಡ್, ಲಸಿಕೆ ಪಡೆದಿದ್ದ ವ್ಯಕ್ತಿ ಗಂಭೀರ

ಲಸಿಕೆ ಪಡೆದಿದ್ದ ಒಬ್ಬರ ಸ್ಥಿತಿ ಗಂಭೀರ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2021, 12:09 IST
Last Updated 2 ಏಪ್ರಿಲ್ 2021, 12:09 IST
   

ಹಾಸನ: ಜಿಲ್ಲೆಯಲ್ಲಿ ಕೋವಿಡ್‌ ಎರಡನೇ ಅಲೆ ತೀವ್ರಗೊಂಡಿದ್ದು, ಆರೋಗ್ಯಾಧಿಕಾರಿ ಕಚೇರಿಯ 13 ಮಂದಿ ಸೋಂಕಿಗೆ ಒಳಗಾಗಿದ್ದಾರೆ.

ಕೋವ್ಯಾಕ್ಸಿನ್‌ ಎರಡೂ ಡೋಸ್‌ ಲಸಿಕೆ ಹಾಕಿಸಿಕೊಂಡು ಪ್ರತಿಕಾಯ ಸೃಷ್ಟಿಯಾಗುವ ಒಂದು ತಿಂಗಳ ಅವಧಿಯನ್ನೂ ದಾಟಿದ್ದರೂ ಮತ್ತೆ ಸೋಂಕು ಬಂದಿದೆ. ಮರು ಸೋಂಕಿತರಾಗಿರುವ ಇಬ್ಬರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದ್ದು, ಹಿಮ್ಸ್‌ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶುಕ್ರವಾರ 87 ಸೋಂಕು ಪ್ರಕರಣಗಳು ವರದಿಯಾಗುವ ಮೂಲಕ ಈವರೆಗಿನ ಸೋಂಕಿತರ ಸಂಖ್ಯೆ 29,635 ಗಡಿ ದಾಟಿದೆ. ಇದರೊಂದಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 540ಕ್ಕೆ ಏರಿಕೆಯಾಗಿದೆ. ಈ ಪೈಕಿ ಗಂಭೀರ ಸಮಸ್ಯೆಯಿಂದ ತುರ್ತು ನಿಗಾ ಘಟಕದಲ್ಲಿ 8 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 34 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದುವ ಮೂಲಕ ಗುಣಮುಖರ ಸಂಖ್ಯೆ 28,623 ದಾಟಿದೆ. ಕಾಯಿಲೆಯಿಂದಾಗಿ ಈವರೆಗೆ 472 ಮಂದಿ ಅಸುನೀಗಿದ್ದಾರೆ.

ADVERTISEMENT

ಹೊಸದಾಗಿ ಆಲೂರು 1, ಅರಕಲಗೂಡು 3, ಅರಸೀಕೆರೆ 6, ಬೇಲೂರು 2, ಚನ್ನರಾಯಪಟ್ಟಣ 22, ಹಾಸನ 39, ಹೊಳೆನರಸೀಪುರ 10, ಸಕಲೇಶಪುರ 4 ಜನರಿಗೆ ಸೋಂಕು ಕಾಣಿಸಿಕೊಂಡಿದೆ. 45 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಕೋವಿಡ್‌ ಲಸಿಕೆ ಪಡೆಯಬೇಕು. ಇದರಿಂದ ಯಾವುದೇ ಅಡ್ಡಪರಿಣಾಮ ಇಲ್ಲ. ಮಾಸ್ಕ್ ಧರಿಸಬೇಕು, ಅಂತರ ಪಾಲನೆ ಮಾಡಬೇಕು. ಸಭೆ, ಸಮಾರಂಭಗಳನ್ನು ಸಾಧ್ಯವಾದಷ್ಟು ತಪ್ಪಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ.ಸತೀಶ್‌ಕುಮಾರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.