ADVERTISEMENT

ಹಳೇಬೀಡು: ಬೆಳೆಗೆ ತೊಡಕಾದ ಮೋಡ, ಮಳೆ

ಎಚ್.ಎಸ್.ಅನಿಲ್ ಕುಮಾರ್
Published 6 ಡಿಸೆಂಬರ್ 2025, 5:58 IST
Last Updated 6 ಡಿಸೆಂಬರ್ 2025, 5:58 IST
<div class="paragraphs"><p>ಹಳೇಬೀಡು ಸಮೀಪದ ಭಂಡಾರಿಕಟ್ಟೆ ಗ್ರಾಮದಲ್ಲಿ ಗುರುವಾರ ಸಂಜೆ ಸುರಿದ ಮಳೆಗೆ ರಾಗಿ ಬೆಳೆ ನೆಲಕ್ಕೆ ಸಾಗಿದೆ.</p></div>

ಹಳೇಬೀಡು ಸಮೀಪದ ಭಂಡಾರಿಕಟ್ಟೆ ಗ್ರಾಮದಲ್ಲಿ ಗುರುವಾರ ಸಂಜೆ ಸುರಿದ ಮಳೆಗೆ ರಾಗಿ ಬೆಳೆ ನೆಲಕ್ಕೆ ಸಾಗಿದೆ.

   

ಹಳೇಬೀಡು: 3 ದಿನಗಳಿಂದ ಮೋಡ ಮುಸುಕಿದ ವಾತಾವರಣ ಇದ್ದು, ಗುರುವಾರ ಸಂಜೆ ಸುರಿದ ಅಕಾಲಿಕ ಮಳೆಯಿಂದ ಈ ಭಾಗದಲ್ಲಿ ಕೃಷಿ ಚಟುವಟಿಕೆಗೆ ತೊಂದರೆಯಾಗಿದೆ.

ಅವರೆ ಹೂವು ಉದುರುತ್ತಿದ್ದು, ಫಸಲು ಕುಂಠಿತವಾಗಲಿದೆ. ಮುದುರುಗುಡಿ ಹಾಗೂ ಕೊಳೆ ರೋಗ ಬರುವ ಸಾಧ್ಯತೆ ಇದೆ. ಆವರೆ ಹೂವಾಗಿ ಕಾಯಿ ಕಟ್ಟುತ್ತಿರುವ ಸಂದರ್ಭದಲ್ಲಿ ಮಳೆ ಬೇಕಿರಲಿಲ್ಲ. ಗುರುವಾರ ಸಂಜೆ ಸುರಿದ ಮಳೆಯ ಹೊಡೆತಕ್ಕೆ ಸಾಕಷ್ಟು ಹೊಲದಲ್ಲಿ ಹೂವು ಉದುರಿದ್ದು, ಗಿಡದ ಕುಡಿಗಳೆ ಮುರಿದು ಹೋಗಿವೆ.

ADVERTISEMENT

ಬಿಸಿಲು ಕಾಣದೆ ನಿರಂತರ ಮೋಡದ ವಾತಾವರಣ ಮುಂದುವರಿದರೆ ಅವರೆ ಫಸಲು ಕಾಣಲು ಸಾಧ್ಯವಿಲ್ಲ. ಒಂದು ವೇಳೆ ಹೂವು ನಿಂತು ಕಾಯಿ ಕಟ್ಟಿದರೂ ಗುಣಮಟ್ಟದ ಅವರೆ ಉತ್ಪಾದನೆ ಆಗುವುದಿಲ್ಲ. ನಿರೀಕ್ಷಿತ ಪ್ರಮಾಣದ ಫಸಲು ಸಹ ದೊರಕುವುದಿಲ್ಲ ಎಂಬ ಆತಂಕ ರೈತರದ್ದಾಗಿದೆ.

ರಾಗಿ ಕೊಯ್ಲು ಮಾಡುವುದಕ್ಕೂ ಈಗಿನ ವಾತಾವರಣ ತೊಡಕಾಗಿದೆ. ಒಂದು ವೇಳೆ ಕೊಯ್ಲು ಮಾಡಿದರೂ ಕಣಕ್ಕೆ ಸಾಗಿಸಿ, ಒಕ್ಕಣೆ ಮಾಡುವುದು ಸುಲಭ ಸಾಧ್ಯವಿಲ್ಲ. ಗುರುವಾರ ಸಂಜೆ ಮಳೆ ಬಿದ್ದಿದ್ದರಿಂದ ಕಣಗಳಲ್ಲಿ ತೇವಾಂಶ ಹೆಚ್ಚಾಗಿದೆ. ಕಣ ಒಣಗುವುದಕ್ಕೆ ಬಿಸಿಲು ಬರುತ್ತಿಲ್ಲ. ಕೆಲವು ಕಡೆ ಕೊಯ್ಲು ಮಾಡುವುದಕ್ಕೆ ತೆನೆಯಲ್ಲಿರುವ ರಾಗಿ ಹಾಲು ತುಂಬಿ ಬಲಿಯಬೇಕಾಗಿದೆ. ನಿರಂತರ ಮೋಡದ ವಾತಾವರಣಕ್ಕೆ ತೆನೆ ಆರೋಗ್ಯಕರವಾಗಿ ಬೆಳೆಯದೇ ರಾಗಿ ಜೊಳ್ಳಾಗುತ್ತಿದೆ ಎಂದು ಹುಲಿಕೆರೆ ಗ್ರಾಮದ ರೈತರ ಸುರೇಶ್ ಹೇಳಿದರು.

ಮುಸುಕಿನ ಜೋಳ ಒಕ್ಕಣೆಗೂ ಮಳೆ ಅಡ್ಡಿಯಾಗಿದೆ. ಈಗ ಮುಸುಕಿನ ಜೋಳ ಒಕ್ಕಣೆ ಮಾಡಲು ರೈತರು ಕಣಕ್ಕೆ ಹಾಕುತ್ತಿಲ್ಲ. ಯಂತ್ರ ಒಕ್ಕಣೆಗೂ ತೊಂದರೆಯಾಗುತ್ತಿದೆ. ಜೋಳದ ತೆನೆ ಒಣಗಿದರೆ ಮಾತ್ರ, ಜೋಳ ಬಿಡಿಯಾಗಿ ಬರುತ್ತದೆ. ಬಲಿತ ಜೋಳ ಸಮರ್ಪಕವಾಗಿ ಒಣಗಿದರೆ ಮಾತ್ರ ಒಕ್ಕಣೆ ಸರಾಗವಾಗುತ್ತದೆ. ಯಂತ್ರದಿಂದ ಜೋಳ ಒಕ್ಕಣೆ ಮಾಡಿದರೂ ಸ್ವಲ್ಪ ಸಮಯ ಬಿಸಿಲಿನಲ್ಲಿ ಹರಡಿ ಚೀಲಕ್ಕೆ ತುಂಬಿಸಿದರೆ ಮಾತ್ರ ಗುಣಮಟ್ಟ ಕಾಪಾಡಲು ಸಾಧ್ಯ. ಒಕ್ಕಣೆ ಪರಿಪೂರ್ಣವಾಗಿ ಮುಗಿಯುವವರೆಗೂ ಮಳೆ ಬೀಳದೇ ಬಿಸಿಲು ಬಾರದಿದ್ದರೆ, ಜೋಳಕ್ಕೆ ಫಂಗಸ್ ಬರುವ ಸಾಧ್ಯತೆ ಇರುತ್ತದೆ. ಬೆಲೆ ಕುಸಿತದ ನಡುವೆ ವಾತಾವರಣ ವೈಪರೀತ್ಯ ಮುಸುಕಿನ ಜೋಳ ಬೆಳೆದವರನ್ನು ಕಾಡುತ್ತಿದೆ ಎಂದು ಹಳೇಬೀಡಿನ ರೈತ ಎಚ್.ಟಿ.ಯೋಗೀಶ್ ತಿಳಿಸಿದರು.

ವಾತಾವರಣದ ಸಮಸ್ಯೆಯಿಂದ ಟೊಮೆಟೊ ಹೂವು ಹಾಗೂ ಕಾಯಿ ಉದುರುತ್ತಿದೆ. ಎಲೆ ಕೋಸು ಗೆಡ್ಡೆ ಕಟ್ಟಲು ತೊಂದರೆಯಾಗಿದೆ. ಅಲಸಂದೆ ಬೆಳೆಗೂ ಪೂರಕ ವಾತಾವರಣದ ಕೊರತೆಯಾಗಿದೆ ಎಂದು ರೈತರು ಪೇಚಾಡುತ್ತಿದ್ದಾರೆ.

‘ಕೀಟ, ಶಿಲೀಂಧ್ರ ನಾಶಕ ದಾಸ್ತಾನು’

ಬೆಳೆಗಳಿಗೆ ರೋಗ ಹರಡಿದರೆ, ನಿಯಂತ್ರಣ ಕೈಗೊಳ್ಳಲು ಅವಕಾಶವಿದೆ. ಯಾವುದೇ ಬೆಳೆಗೆ ರೋಗ ಕಂಡು ಬಂದರೂ ರೈತರು ತಮ್ಮ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರದ ಅಧಿಕಾರಿಯನ್ನು ಸಂಪರ್ಕಿಸಬೇಕು ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕಾಂತರಾಜು ಜಿ. ಹೇಳಿದರು.

ವಾತಾವರಣದ ಬದಲಾವಣೆ ತಡೆಗಟ್ಟಲು ಸಾಧ್ಯವಿಲ್ಲ. ರೋಗ ಹಾಗೂ ಕೀಟ ಬಾಧೆ ನಿಯಂತ್ರಿಸಲು ಅವಕಾಶವಿದೆ. ರೈತ ಸಂಪರ್ಕ ಕೇಂದ್ರಗಳಲ್ಲಿ ಕೀಟ ಹಾಗೂ ಶಿಲೀಂಧ್ರ ನಾಶಕಗಳ ದಾಸ್ತಾನಿದೆ. ಅವರೆ ಬೆಳೆಯಲ್ಲಿ ರೋಗ, ಕೀಟ ಕಂಡು ಬಂದರೆ ರೈತರು ಆತಂಕ ಪಡದೇ ರೈತ ಸಂಪರ್ಕ ಕೇಂದ್ರದಲ್ಲಿ ಸಲಹೆ ಪಡೆದು ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.