ADVERTISEMENT

ಕೊರೊನಾ ನಿಯಂತ್ರಿಸುವಲ್ಲಿ ಸರ್ಕಾರ ಎಡವಿಲ್ಲ: ಸಿ.ಟಿ. ರವಿ ಸಮರ್ಥನೆ

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2021, 15:47 IST
Last Updated 29 ಏಪ್ರಿಲ್ 2021, 15:47 IST
ಸಿ.ಟಿ. ರವಿ
ಸಿ.ಟಿ. ರವಿ   

ಹಾಸನ: ಕೊರೊನಾ ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ಎಡವಿಲ್ಲ, ಸರ್ಕಾರ ಜಾರಿಗೆ ತಂದಿರುವ ನಿಯಮ ಪಾಲಿಸುವಲ್ಲಿ ಜನರು ಎಡವಿದ್ದಾರೆಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಸರ್ಕಾರದ ಕಾರ್ಯವನ್ನು ಸಮರ್ಥಿಸಿಕೊಂಡರು.

ಕೊರೊನಾ ಎರಡನೇ ಅಲೆ ಕಳೆದ ಬಾರಿಗಿಂತ ಎರಡು ಪಟ್ಟು ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿತ್ತು. ಅದಕ್ಕೆ ಬೇಕಾದ ಸಿದ್ಧತೆಯಲ್ಲಿ ಸರ್ಕಾರ ಮಗ್ನವಾಗಿತ್ತು. ಆದರೆ, ಏಕಾಏಕಿ 15 ಪಟ್ಟು ಹೆಚ್ಚಾಗಿ ಅಪ್ಪಳಿಸಲಿದೆ ಎಂದು ಯಾರೂ ಊಹಿಸಿರಲಿಲ್ಲ. ಸರ್ಕಾರ ನಿಭಾಯಿಸಿರುವ ರೀತಿ ತೃಪ್ತಿ ತಂದಿಲ್ಲ. ಅಂದ ಮಾತ್ರಕ್ಕೆ ಏನು ಮಾಡಿಲ್ಲವೆಂದಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳಲ್ಲೂ ಅತಿ ಹೆಚ್ಚು ಸಾವು, ನೋವು ಸಂಭವಿಸಿದೆ. ಅಲ್ಲಿನ ಪರಿಸ್ಥಿತಿ ಬಗ್ಗೆಯೂ ಮಾತನಾಡಬೇಕು. ಯೂರೋಪ್ ನಲ್ಲಿ 48 ದೇಶಗಳಿದ್ದು, 74 ಕೋಟಿ ಜನಸಂಖ್ಯೆ ಇದೆ. ವಿಶ್ವದ ದೊಡ್ಡಣ್ಣ ಅಮೆರಿಕಾದಲ್ಲೂ ಕೊರೊನಾ ಎರಡನೇ ಅಲೆ ಹಾಗೂ ಸಾವು ತಡೆಯಲು ಸಾಧ್ಯವಾಗಲಿಲ್ಲ. ದೇಶದ ಜನಸಂಖ್ಯೆ ಹೆಚ್ಚಿದ್ದು,ಸಾವು, ನೋವು ಹೆಚ್ಚಾಗಿದೆ. ಎಲ್ಲರೂ ಒಗ್ಗಟ್ಟಿನಿಂದ ಕೊರೊನಾ ವಿರುದ್ಧ ಹೋರಾಡಬೇಕು ಎಂದರು.

ADVERTISEMENT

ಕೊರೊನಾವನ್ನು ವೈದ್ಯಕೀಯ ತುರ್ತು ಪರಿಸ್ಥಿತಿ ಎಂದು ಪರಿಗಣಿಸಬೇಕೆ ಹೊರತು ಆಡಳಿತ ಪಕ್ಷವನ್ನು ಹೊಣೆಗಾರಿಕೆ ಮಾಡಿ ಟೀಕೆ ಮಾಡುವುದು ಸರಿಯಲ್ಲ. ಶೇಕಡಾ 90 ರಷ್ಟು ಸೋಂಕಿತರು ಆಸ್ಪತ್ರೆಗೆ ಹೋಗುವ ಅವಶ್ಯಕತೆ ಇಲ್ಲ. ಹೋಂ ಕ್ವಾರಂಟೈನ್‌ನಲ್ಲಿ ಇದ್ದುಕೊಂಡೇ ವೈದ್ಯರ ಸಲಹೆ, ಸೂಚನೆ ಪಾಲಿಸಿ ಸೋಂಕಿನಿಂದ ಮುಕ್ತಿ ಹೊಂದಬಹುದು. ಇನ್ನು ಆಸ್ಪತ್ರೆಯಲ್ಲಿ ದಾಖಲಾಗಿರುವ ಶೇಕಡಾ 10 ರಷ್ಟು ರೋಗಿಗಳಿಗೆ ಆಕ್ಸಿಜನ್ ಸೌಲಭ್ಯವಿರುವ ಹಾಸಿಗಳ ಅವಶ್ಯಕತೆ ಇಲ್ಲ. ಆದರೂ ಸೋಂಕಿತರು ಭಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದರಿಂದ ಅವಶ್ಯಕತೆ ಇರುವವರಿಗೆ ಸೌಲಭ್ಯಗಳು ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗೆ ಚಿಕ್ಕಮಗಳೂರು ಜಿಲ್ಲೆಯ ಜನರು ಹಾಸನ ಜಿಲ್ಲೆಗೆ ಬರುತ್ತಿರುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ರವಿ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ₹650 ಕೋಟಿ ಅನುದಾನ ಮಂಜೂರಾಗಿದ್ದು, ಕಾಮಗಾರಿ ನಡೆಯುತ್ತಿದೆ ಎಂದರು.

ಸರ್ಕಾರ ಟೀಕಿಸುತ್ತಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಮತ್ತು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್‌ ವಿರುದ್ಧ ಈವರೆಗೂ ಏಕೆ ಕ್ರಮ ಕೈಗೊಂಡಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಸಿ.ಟಿ.ರವಿ, ಕೋವಿಡ್ ಸಂಕಷ್ಟ ಸ್ಥಿತಿಯಿಂದ ಹೊರ ಬಂದ ಬಳಿಕ ನಾಲ್ಕು ಗೋಡೆ ಮಧ್ಯೆ ವಿಚಾರ ಮಾಡಿ, ತಪ್ಪುಗಳನ್ನು ತಿದ್ದಿಕೊಳ್ಳುತ್ತೇವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.