ADVERTISEMENT

ಮಠ ಪರಂಪರೆಯಿಂದ ಸಂಸ್ಕೃತಿ ಉಳಿವು: ರಂಭಾಪುರಿ ಶ್ರೀ

ಸುವರ್ಣ ಪೂಜಾ ಮಂಟಪ ಸಮರ್ಪಣೆಯ ಧಾರ್ಮಿಕ ಕಾರ್ಯ

​ಪ್ರಜಾವಾಣಿ ವಾರ್ತೆ
Published 14 ಜುಲೈ 2025, 6:48 IST
Last Updated 14 ಜುಲೈ 2025, 6:48 IST
ಬಾಗೂರು ಹೋಬಳಿಯ ನಾಗರನವಿಲೆ ಗ್ರಾಮದಲ್ಲಿ ಶಿವಾನುಗ್ರಹ ಸೇವಾ ಪ್ರತಿಷ್ಠಾನದ ವತಿಯಿಂದ ನವೀಕರಣಗೊಂಡಿದ್ದ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ವೀರ ಸಿಂಹಾಸನದ ಸುವರ್ಣ ಪೂಜಾ ಮಂಟಪ ವನ್ನು ಪೂಜ್ಯ ರಂಭಾಪುರಿ ಜಗದ್ಗುರುಗಳ ದಿವ್ಯ ಸಾನಿಧ್ಯದಲ್ಲಿ ಲೋಕಾರ್ಪಣೆಗೊಳಿಸಲಾಯಿತು.
ಬಾಗೂರು ಹೋಬಳಿಯ ನಾಗರನವಿಲೆ ಗ್ರಾಮದಲ್ಲಿ ಶಿವಾನುಗ್ರಹ ಸೇವಾ ಪ್ರತಿಷ್ಠಾನದ ವತಿಯಿಂದ ನವೀಕರಣಗೊಂಡಿದ್ದ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ವೀರ ಸಿಂಹಾಸನದ ಸುವರ್ಣ ಪೂಜಾ ಮಂಟಪ ವನ್ನು ಪೂಜ್ಯ ರಂಭಾಪುರಿ ಜಗದ್ಗುರುಗಳ ದಿವ್ಯ ಸಾನಿಧ್ಯದಲ್ಲಿ ಲೋಕಾರ್ಪಣೆಗೊಳಿಸಲಾಯಿತು.   

ಬಾಗೂರು (ನುಗ್ಗೇಹಳ್ಳಿ ): ಮಠಗಳ ಪರಂಪರೆಯಿಂದ ಮಾತ್ರ ಸಂಸ್ಕೃತಿ, ಧರ್ಮ ಉಳಿದು, ಜನರಲ್ಲಿ ಸನ್ಮಾರ್ಗದ ಗುಣಗಳನ್ನು ಬೆಳೆಸಿದೆ ಎಂದು  ಬಾಳೆಹೊನ್ನೂರು  ರಂಭಾಪುರಿ ಮಠದ ಜಗದ್ಗುರು ಪ್ರಸನ್ನ ರೇಣುಕ  ವೀರಸೋಮೇಶ್ವರ ದೇಶಿಕೇಂದ್ರ ಶಿವಾಚಾರ್ಯರು  ಹೇಳಿದರು.

ಹೋಬಳಿಯ ನಾಗರನವಿಲೆ ಗ್ರಾಮದಲ್ಲಿ ಶಿವಾನುಗ್ರಹ ಸೇವಾ ಪ್ರತಿಷ್ಠಾನದಿಂದ ಅಡ್ಡ ಪಲ್ಲಕ್ಕಿ ಮಹೋತ್ಸವದ ಸಂದರ್ಭ ಸುವರ್ಣ ಪೂಜಾ ಮಂಟಪ ಸಮರ್ಪಣೆಯ ಧಾರ್ಮಿಕ ಕಾರ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು. ‘ವಿಜ್ಞಾನ ಬೆಳೆದಂತೆ ಮನುಷ್ಯನ ಮನಸ್ಥಿತಿಯು ಬದಲಾಗುತ್ತಿದೆ.  ಪರಂಪರೆಯನ್ನು ಮರೆಯುತ್ತಿರುವ ಪರಿಣಾಮದಿಂದ  ಪ್ರಕೃತಿಯಲ್ಲಿ ಹಲವು ಬದಲಾವಣೆಗಳಾಗಿ ಅವಘಡಗಳು ಹೆಚ್ಚುತ್ತಿವೆ ಎಂದರು.  ಪೂಜಾ ಪೀಠವು  ಶಿಥಿಲಗೊಂಡಿತ್ತು.  ನವಿಲೆ ಗ್ರಾಮದ ಶಿವಾನುಗ್ರಹ ಸೇವಾ ಪ್ರತಿಷ್ಠಾನ   ಪೂಜಾ ಮಂಟಪವನ್ನು ಚಿನ್ನದ ಲೇಪನದೊಂದಿಗೆ  ಪುನರ್ ನಿರ್ಮಿಸಿದ್ದಾರೆ.  ನವಿಲೆ ನಾಗೇಶ್ವರ ಕ್ಷೇತ್ರ  ವಿಶ್ವಮಟ್ಟದಲ್ಲಿ ಪ್ರಸಿದ್ಧಿ ಹೊಂದಲಿ ಎಂದು ಹಾರೈಸಿದರು.

ಚಿಕ್ಕಮಗಳೂರು ಗೌರಿಗದ್ದೆಯ ಅವಧೂತ ಆಶ್ರಮದ ವಿನಯ್ ಗುರೂಜಿ ಮಾತನಾಡಿ , ಜಗದ್ಗುರುಗಳ ಆಶೀರ್ವಾದದಿಂದ ಸಮಾಜಮುಖಿ ಕೆಲಸಗಳಲ್ಲಿ ಹೆಚ್ಚು ತೊಡಕಿಕೊಂಡು ಕಾರ್ಯನಿರ್ವಹಿಸುತ್ತಿದ್ದೇನೆ ಎಂದರು.

ADVERTISEMENT

ನೊಣವಿನಕೆರೆ ಕಾಡ ಸಿದ್ದೇಶ್ವರ ಮಠದ  ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಮಾತನಾಡಿ, ಬಾಳೆಹೊನ್ನೂರು ರಂಭಾಪುರಿ ಮಠದ ಧರ್ಮ ಜಾಗೃತಿ ಕಾರ್ಯಗಳು ಜನರಲ್ಲಿ ಭಕ್ತಿ ಭಾವನೆವನ್ನು ಹೆಚ್ಚಿಸುತ್ತಿವೆ. ಚನ್ನರಾಯಪಟ್ಟಣ ಪಟ್ಟಣದ ವ್ಯಾಪ್ತಿಯಲ್ಲಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದ ಕಾಡು ಸಿದ್ದೇಶ್ವರ ಹಾಗೂ ಬಸವಣ್ಣನ ದೇವತೆಗಳು ಶಿಥಿಲಗೊಂಡಿದ್ದು   ಪುನರ್ ಪ್ರತಿಷ್ಠಾಪನೆ ಎಲ್ಲರ ಸಹಕಾರದೊಂದಿಗೆ ನೆರವೇರಿಸಲಾಗುತ್ತದೆ.ಸದ್ಯದಲ್ಲೇ ದೇವಾಲಯ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗುತ್ತದೆ ಎಂದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ನವಿಲೆ ಪರಮೇಶ್ ಮಾತನಾಡಿ, ಗ್ರಾಮದ  ಲಕ್ಷ್ಮಿಕಾಂತ ದೇವಾಲಯ ಜೀರ್ಣೋದ್ಧಾರಕ್ಕೆ  ಬಾಳೆಹೊನ್ನೂರು ಶ್ರೀಗಳು, ಶಾಸಕರು ಸಹಕಾರ ನೀಡುವಂತೆ ಮನವಿ ಮಾಡಿದರು. ಸಾಹಿತಿ ಗುರುಪಾದಯ್ಯ ಸಾಲಿಮಠ  ಹೊರತಂದಿದ್ದ   ‘ಜಗದ್ಗುರು ರೇಣುಕಾಚಾರ್ಯ ಪೂಜಾ ವ್ರತಂ’ ಕೃತಿಯನ್ನು ಶಾಸಕ ಸಿ.ಎನ್. ಬಾಲಕೃಷ್ಣ  ಬಿಡುಗಡೆಗೊಳಿಸಿದರು. ಶಿವಾನುಗ್ರಹ ಸೇವಾ ಟ್ರಸ್ಟ್ ನಿಂದ ಯೋಗೇಶ್, ಲೋಕೇಶ್ ಅವರಿಗೆ ‘ಸೇವ ರತ್ನ’  ಬಿರುದು ನೀಡಿ  ಸನ್ಮಾನಿಸಲಾಯಿತು.

ಮಾಜಿ ವಿಧಾನ ಪರಿಷತ್ ಸದಸ್ಯ ಗೋಪಾಲಸ್ವಾಮಿ, ನುಗ್ಗೇಹಳ್ಳಿ ಪುರ ವರ್ಗ ಹಿರೇಮಠ ಡಾ. ಮಹೇಶ್ವರ ಸ್ವಾಮೀಜಿ, ಬಾಳೆಹೊನ್ನೂರು ಶಾಖ ಮಠದ ಸ್ವಾಮೀಜಿಗಳಾದ ರೇವಣ್ಣ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಸದಾಶಿವ ಶಿವಾಚಾರ್ಯ ಸ್ವಾಮೀಜಿ, ಮುಜರಾಯಿ ತಹಶೀಲ್ದಾರ್ ಎಚ್. ಎಂ. ಲತಾ, ಶಿವಾನುಗ್ರಹ ಪ್ರತಿಷ್ಠಾನದ ಅಧ್ಯಕ್ಷ ಸಿದ್ದೇಶ್ ಶಾಸ್ತ್ರಿ, ಸದಸ್ಯರಾದ ಪವನ್ ಕುಮಾರ್, ಸಂದೀಪ್ ಕೆ., ಚನ್ನರಾಯಪಟ್ಟಣ ನಗರ ಅಧಿಕಾರದ ಮಾಜಿ ಅಧ್ಯಕ್ಷ ಎಸಿ ಆನಂದ್ ಕುಮಾರ್, ಉದ್ಯಮಿ ಭುವನಹಳ್ಳಿ ಯೋಗೇಶ್, ತಾಲೂಕು ಟಿಎಪಿಎಂಎಸ್ ಅಧ್ಯಕ್ಷ ಮರಗೂರು ಅನಿಲ್, ಸಾಹಿತಿ ಗುರುಪಾದಯ್ಯ ಸಾಲಿಮಠ, ಪ್ರಾಧ್ಯಾಪಕಿ ಮಮತಾ ಸಾಲಿಮಠ, ನವಿಲೆ ಕೃಷಿ ಪತ್ತಿನ ಅಧ್ಯಕ್ಷ ಕುಮಾರಸ್ವಾಮಿ, ಶಿವಾನುಗ್ರಹ ಸೇವಾ ಪ್ರತಿಷ್ಠಾನದ ಸದಸ್ಯರು, ಭಕ್ತರು ಭಾಗವಹಿಸಿದ್ದರು.

ಸಾಹಿತಿ ಗುರುಪಾದಯ್ಯ ಸಾಲಿಮಠ ಅವರು ಹೊರತಂದಿದ್ದ ಶ್ರೀ ಜಗದ್ಗುರು ರೇಣುಕಾಚಾರ್ಯ ಪೂಜಾ ವ್ರತಂ ಕೃತಿಯನ್ನು ಶಾಸಕ ಸಿಎನ್ ಬಾಲಕೃಷ್ಣ ರವರು ಬಿಡುಗಡೆಗೊಳಿಸಿದರು. ಬಾಳೆಹೊನ್ನೂರು ಮಠದ ರಂಭಾಪುರಿ ಜಗದ್ಗುರು ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು.

Highlights - ‘ದೇವರನ್ನು ಪರಿಪೂರ್ಣ ಭಕ್ತಿಯಿಂದ ಪೂಜಿಸಿದರೆ ಮಾತ್ರ ಪ್ರತಿಫಲ’ ‘ನಂಜನಗೂಡುನಂಜುಂಡೇಶ್ವರ, ನವಿಲೆ ದೇವಾಲಯ ಸಮನ್ವಯ’ ‘ಶಿವನ ಅನುಗ್ರಹವಿಲ್ಲದೆ ಜಗತ್ತಿನಲ್ಲಿ ಏನೂ ನಡೆಯಲು ಸಾಧ್ಯವಿಲ್ಲ’

‘₹ 5 ಕೋಟಿ ವೆಚ್ಚದ ಕಲ್ಯಾಣ ಮಂಟಪ’

ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ ನವಿಲೆ ನಾಗೇಶ್ವರ ಕ್ಷೇತ್ರದಲ್ಲಿ ಬರುವ ಭಕ್ತರ ಅನುಕೂಲಕ್ಕಾಗಿ ಪ್ರಮುಖ ನಾಲ್ಕು ರಸ್ತೆಗಳ ಅಭಿವೃದ್ಧಿಗೂ ಆದ್ಯತೆ ನೀಡಲಾಗಿದೆ  ಬಸ್ ವ್ಯವಸ್ಥೆ ಮತ್ತು  ಅನ್ನದಾನ ನಡೆಸಲಾಗುತ್ತಿದೆ. ನೂತನ ಕಲ್ಯಾಣ ಮಂಟಪ₹ 5 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು ಲೋಕಾರ್ಪಣೆಯನ್ನು  ರಂಭಾಪುರಿ ಜಗದ್ಗುರುಗಳಿಂದ ನೆರೆವೇರಿಸಲಾಗುತ್ತದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.