ಅರಸೀಕೆರೆ (ಹಾಸನ): ನಟ ಡಾಲಿ ಧನಂಜಯ ತಮ್ಮ ಮದುವೆಯ ನೆನಪಿಗಾಗಿ, ಹುಟ್ಟೂರಾದ ತಾಲ್ಲೂಕಿನ ಕಾಳೇನಹಳ್ಳಿ ಹಟ್ಟಿಯ ಸರ್ಕಾರಿ ಶಾಲಾಭಿವೃದ್ದಿಗೆ ಆರ್ಥಿಕ ನೆರವು ನೀಡಿದ್ದಾರೆ.
ಶಾಲೆಯಲ್ಲಿ 1 ರಿಂದ 7 ನೇ ತರಗತಿಯವರೆಗೆ 80 ಮಕ್ಕಳು ಕಲಿಯುತ್ತಿದ್ದು, ಸೋರುವಿಕೆ ತಪ್ಪಿಸಲು ಛಾವಣಿಗೆ ಚುರಿಕೆ, ನೆಲ ಅಂತಸ್ತಿನ ಕಲ್ಲು, ಗಾರೆ ದುರಸ್ತಿ, ಟೈಲ್ಸ್, ಗೋಡೆಗಳಿಗೆ ಸುಣ್ಣಬಣ್ಣ ಮಾಡಿಸಿದ್ದಾರೆ. ಶಿಕ್ಷಕರ ಕೊಠಡಿ, ಶೌಚಾಲಯ, ಕಾಂಪೌಂಡ್, ಗೇಟ್ ದುರಸ್ತಿ ಮಾಡಿಸಿದ್ದಾರೆ. ಕುಡಿಯುವ ನೀರಿನ ವ್ಯವಸ್ಥೆ ಮಾಡಿ, ಸುಸಜ್ಜಿತ ಅಡುಗೆ ಮನೆ, ಓವರ್ ಹೆಡ್ ಟ್ಯಾಂಕ್ ನಿರ್ಮಿಸಿ, ಹೊಸ ಕಿಟಕಿ, ಕುರ್ಚಿ– ಮೇಜನ್ನೂ ಪೂರೈಸಿದ್ದಾರೆ.
‘ಧನಂಜಯ ಅವರ ಈ ಕಾರ್ಯದಿಂದ ಸಂತಸವಾಗಿದೆ’ ಎಂದು ಗ್ರಾಮಸ್ಥರು ಹೇಳಿದರೆ, ಸುಮಾರು ₹10 ಲಕ್ಷ ವೆಚ್ಚದಲ್ಲಿ ಶಾಲೆಗೆ ಮೂಲಸೌಲಭ್ಯ ಒದಗಿಸಿದ ಅವರ ನಡೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಶಂಸೆ ವ್ಯಕ್ತವಾಗುತ್ತಿದೆ. ಅವರು ಶಾಲೆಗೆ ಭೇಟಿ ನೀಡಿ, ಅಭಿವೃದ್ಧಿ ಕುರಿತು ಚರ್ಚಿಸುತ್ತಿರುವ ವಿಡಿಯೊ ಕೂಡ ಹೆಚ್ಚು ಹರಿದಾಡಿದೆ.
ಅವರ ಮದುವೆ ಚಿತ್ರದುರ್ಗದ ವೈದ್ಯೆ ಡಾ.ಧನ್ಯತಾ ಅವರೊಂದಿಗೆ ಫೆಬ್ರುವರಿ 15 ಮತ್ತು 16 ರಂದು ಮೈಸೂರಿನಲ್ಲಿ ನಡೆಯಲಿದೆ. ಈ ಶಾಲೆಯಲ್ಲಿ ಓದದಿದ್ದರೂ ಅವರು ತವರೂರಿನ ಮೇಲಿನ ಅಭಿಮಾನದಿಂದ ಅಭಿವೃದ್ದಿಗೆ ಮುಂದಾಗಿದ್ದಾರೆ.
‘ಶಾಲೆಗೆ ಮೂಲಸೌಕರ್ಯಗಳನ್ನು ಕಲ್ಪಿಸಿಕೊಟ್ಟಿರುವುದಕ್ಕೆ ಇಲಾಖೆಯು ಧನಂಜಯ ಮತ್ತು ಅವರ ಕುಟುಂಬದವರಿಗೆ ಆಭಾರಿಯಾಗಿದೆ. ಸಾಧಕರ ಇಂಥ ಔದಾರ್ಯಗಳಿಂದ ಗ್ರಾಮೀಣ ಮಕ್ಕಳ ವಿದ್ಯಾಭ್ಯಾಸಕ್ಕೆ ಅನೂಕೂಲವಾಗುತ್ತದೆ’ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಮೋಹನ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.
‘ಧನಂಜಯ ಅವರ ಸಾಮಾಜಿಕ ಕಳಕಳಿ ಶ್ಲಾಘನೀಯ. ಗ್ರಾಮೀಣ ಭಾಗದ ಶೈಕ್ಷಣಿಕ ಅಭಿವೃದ್ಧಿಗೂ ಇದು ಪೂರಕವಾದ ನಡೆ. ಶಾಲೆಯಲ್ಲಿ ದಾಖಲಾತಿ ಹೆಚ್ಚಳಕ್ಕೂ ಸಹಕಾರಿ’ ಎಂದು ಮುಖ್ಯ ಶಿಕ್ಷಕ ನಂಜೇಗೌಡ ಸಿ. ತಿಳಿಸಿದ್ಧಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.