ಹಾಸನ: ದಲಿತರು, ಪೌರಕಾರ್ಮಿಕರಿಗೆ ವಸತಿ ಸೌಕರ್ಯ, ಭೂಮಿ ಸೇರಿದಂತೆ ಅಗತ್ಯ ಸೌಲಭ್ಯ ಒದಗಿಸುವಂತೆ ಆಗ್ರಹಿಸಿ ದಲಿತ ಸಂಘಟನೆಗಳ ಸಮನ್ವಯ ಸಮಿತಿ ನೇತೃತ್ವದಲ್ಲಿ ಪೌರಕಾರ್ಮಿಕರು ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.
ಈ ವೇಳೆ ದಲಿತ ಮುಖಂಡ ಕೃಷ್ಣದಾಸ್ ಮಾತನಾಡಿ, ಒಂದೂವರೆ ದಶಕದಿಂದಲೂ ಪೌರಕಾರ್ಮಿಕರಿಗೆ ನಿವೇಶನ, ವಸತಿ ಸೌಕರ್ಯ ಕಲ್ಪಿಸುವಂತೆ ಸ್ಥಳೀಯ ಆಡಳಿತವನ್ನು ಒತ್ತಾಯಿಸಲಾಗುತ್ತಿದೆ. ನಗರದಲ್ಲಿ ಸುಮಾರು 200ಕ್ಕೂ ಹೆಚ್ಚು ಪೌರಕಾರ್ಮಿಕರಿದ್ದು, ಇತ್ತೀಚಿಗೆ 41 ಫಲಾನುಭವಿಗಳಿಗೆ ಮಾತ್ರ ವಸತಿ ಸೌಕರ್ಯವನ್ನು ಕಲ್ಪಿಸಲಾಗಿದೆ ಎಂದರು.
ಆದರೆ ಈ ಕಾಮಗಾರಿಯೂ ಪೂರ್ಣಗೊಳ್ಳದೇ ಸ್ವಾಧೀನ ಪ್ರಕ್ರಿಯೆ ಸ್ಥಗಿತಗೊಂಡಿದೆ. ಉಳಿದ ಪೌರಕಾರ್ಮಿಕರಿಗೆ ಎರಡನೇ ಹಂತದಲ್ಲಿ ವಸತಿ ಸೌಕರ್ಯ ಮಾಡಿಕೊಡುವಂತೆ ಜಿಲ್ಲಾಡಳಿತಕ್ಕೆ ಹಲವಾರು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.
ರೈತರ ಜಮೀನಿನ ಪೋಡಿ ದುರಸ್ತು ಕಾರ್ಯ ಮಾಡಲು ಮುಂದಾಗಿರುವುದು ಉತ್ತಮ ಬೆಳವಣಿಗೆ. ಆದರೆ ದಲಿತರ ಇನಾಮು ಜಮೀನನ್ನು ಪೋಡಿ ದುರಸ್ತು ಮಾಡಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ. ಕಾರಣ ಇನಾಮು ಜಮೀನಿನ ಕಂದಾಯ ದಾಖಲಾತಿಗಳು ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳ ರೆಕಾರ್ಡ್ ರೂಂನಿಂದ ಕಣ್ಮರೆಯಾಗಿವೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಅರಸೀಕೆರೆ ತಾಲ್ಲೂಕು ಹಂಗರಹಳ್ಳಿಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಸುಮಾರು 10 ಕುಟುಂಬಗಳು 30 ವರ್ಷಗಳಿಂದ ಬಗರ್ ಹುಕುಂ ಸಾಗುವಳಿ ಮಾಡುತ್ತಿದ್ದು, ಸಕ್ರಮಗೊಳಿಸಿ ಸಾಗುವಳಿ ಪತ್ರ ನೀಡಲಾಗಿದೆ. ಎರಡು ದಶಕಗಳೇ ಕಳೆದರೂ ಖಾತೆ ಮಾಡಿ ಕೊಟ್ಟಿಲ್ಲ. ದಲಿತರ ಹಲವಾರು ಸಮಸ್ಯೆಗಳು ನನೆಗುದಿಗೆ ಬಿದ್ದಿದ್ದು, ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಾಗುತ್ತಿದೆ ಎಂದರು.
ನಗರದ ಬಿಟ್ಟಗೌಡನಹಳ್ಳಿ ಸ್ಮಶಾನವನ್ನು ಅಭಿವೃದ್ಧಿಪಡಿಸಬೇಕು. ಸಾರ್ವಜನಿಕರು ಅಂತ್ಯಸಂಸ್ಕಾರ ನೆರವೇರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಸಕಲೇಶಪುರ ತಾಲ್ಲೂಕಿನ ಹೆತ್ತೂರು ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಸುಮಾರು 59 ಕುಟುಂಬಗಳಿಗೆ ತಲಾ ಎರಡು ಗುಂಠೆಯಂತೆ ಹಂಗಾಮಿ ಸಾಗುವಳಿ ಪತ್ರ ನೀಡಲಾಗಿದೆ. ಇದುವರೆಗೂ ಕಾಯಂ ಮಂಜೂರಾತಿ ಪತ್ರ ವಿತರಿಸಿಲ್ಲ. ಕೂಡಲೇ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಎಚ್.ಪಿ. ಶಂಕರ್ ರಾಜ್, ಅಂಬಿಗ ಮಲ್ಲೇಶ್, ರಮೇಶ್ ಸಾತೇನಹಳ್ಳಿ, ಪ್ರದೀಪ್, ಲೋಕೇಶ್, ನಾಗರಾಜ್ ಹೆತ್ತೂರ್, ಕುಮಾರಸ್ವಾಮಿ, ಪುಟ್ಟರಾಜು, ಧರ್ಮಯ್ಯ, ಹೂವಣ್ಣ, ರಮೇಶ್, ಶಿವಕುಮಾರ್, ದಿನೇಶ್, ಪುರುಷೋತ್ತಮ್, ಕುಮಾರಯ್ಯ ಸೇರಿದಂತೆ ಹಲವರು ಭಾಗವಹಿಸಿದ್ದರು.
ನರಸಿಂಹರಾಜ ಒಡೆಯರ್ ಪ್ರತಿಮೆ ನಿರ್ಮಿಸಿ
ನಗರದ ಹೃದಯ ಭಾಗದಲ್ಲಿರುವ ಎನ್.ಆರ್. ಸರ್ಕಲ್‌ನಲ್ಲಿ ಮೈಸೂರಿನ ರಾಜರಾದ ನರಸಿಂಹರಾಜ ಒಡೆಯರ್ ಅವರ ಪ್ರತಿಮೆಯನ್ನು ಸ್ಥಾಪಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೃಷ್ಣದಾಸ್ ಒತ್ತಾಯಿಸಿದರು. ಸರ್ಕಲ್‌ನಲ್ಲಿ ಈಗಾಗಲೇ ಹಲವು ಮಹನೀಯರ ಪ್ರತಿಮೆಗಳಿವೆ. ಆದರೆ ಒಡೆಯರ್ ಅವರ ಹೆಸರಿನ ವೃತ್ತದಲ್ಲಿ ಅವರ ಪ್ರತಿಮೆ ಇಲ್ಲದಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು ಕೂಡಲೇ ಜಿಲ್ಲಾಡಳಿತ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.