ADVERTISEMENT

ಜಿಲ್ಲಾಧಿಕಾರಿ ಭರವಸೆ: ಧರಣಿ ಕೈಬಿಟ್ಟ ರೇವಣ್ಣ

ಪ್ರತಿಭಟನೆಗೆ ಮುಂದಾಗಿದ್ದ ಶಾಸಕ ಪುರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2019, 14:08 IST
Last Updated 23 ಡಿಸೆಂಬರ್ 2019, 14:08 IST
ಶಾಸಕ ಎಚ್.ಡಿ. ರೇವಣ್ಣ ಜಿಲ್ಲಾಧಿಕಾರಿ ಜೊತೆ ಚರ್ಚಿಸಿದರು.
ಶಾಸಕ ಎಚ್.ಡಿ. ರೇವಣ್ಣ ಜಿಲ್ಲಾಧಿಕಾರಿ ಜೊತೆ ಚರ್ಚಿಸಿದರು.   

ಹಾಸನ: ‘ಹೊಳೆನರಸೀಪುರ ಪುರಸಭೆ ವ್ಯಾಪ್ತಿಯಲ್ಲಿ ಪೌರಕಾರ್ಮಿಕರು ಹಾಗೂ ಬೀದಿಬದಿ ವ್ಯಾಪಾರಿಗಳಿಗೆ 2012ರಲ್ಲಿ ಹಂಚಿಕೆ ಮಾಡಲಾದ ನಿವೇಶನ ಪ್ರದೇಶವನ್ನು ಕೊಳೆಗೇರಿ ನಿರ್ಮೂಲನಾ ಮಂಡಳಿ ವ್ಯಾಪ್ತಿಗೆ ಒಳಪಡಿಸಲು ಇರುವ ಯೋಜನೆಯನ್ನು ತಡೆಹಿಡಿಯಲಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ ಶಾಸಕ ಎಚ್.ಡಿ. ರೇವಣ್ಣ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲು ಮುಂದಾದರು.

ಹೊಳೆನರಸೀಪುರ ಪುರಸಭೆ ಸದಸ್ಯರೊಡನೆ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿತ್ತು. ಸದಸ್ಯರು ಬರುವುದಕ್ಕೂ ಮೊದಲೇ ರೇವಣ್ಣ ಜಿಲ್ಲಾಧಿಕಾರಿ ಕಚೇರಿ ಮುಂದೆ ಬಂದು ಕಾರಿನಲ್ಲಿ ಕುಳಿತಿದ್ದರು. ಮಾಹಿತಿ ತಿಳಿದು ಹೊರಗೆ ಬಂದ ಜಿಲ್ಲಾಧಿಕಾರಿ ಆರ್.ಗಿರೀಶ್, ಕಚೇರಿ ಒಳಗೆ ಕರೆದೊಯ್ಯುವ ಪ್ರಯತ್ನ ಮಾಡಿದರು. ರೇವಣ್ಣ ಕಚೇರಿ ಒಳಗೆ ಹೋಗದೆ ಧರಣಿ ಕೂರುವುದಾಗಿ ಹೇಳಿ ಪುರಸಭೆ ಸದಸ್ಯರ ಸಮ್ಮುಖದಲ್ಲಿ ಸಮಸ್ಯೆ ವಿವರಿಸಿದರು.

ಜಿಲ್ಲಾಧಿಕಾರಿ ಆರ್. ಗಿರೀಶ್ ಮಾತನಾಡಿ, ‘ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡುವ ಮೂಲಕ ರೇವಣ್ಣನ ಮನವೊಲಿಸಿ ಪ್ರತಿಭಟನೆ ಹಿಂಪಡೆಯುವಂತೆ’ ಮನವಿ ಮಾಡಿದರು.ನಂತರ ರೇವಣ್ಣ ಪುರಸಭೆ ಸದಸ್ಯರೊಡನೆ ವಾಪಸ್ ಹೋದರು.

ADVERTISEMENT

ಘಟನೆ ವಿವರ: ಹೊಳೆನರಸೀಪುರ ಪುರಸಭೆ ವ್ಯಾಪ‍್ತಿಯ ಪೌರ ಕಾರ್ಮಿಕರು ಹಾಗೂ ಬೀದಿ ಬದಿ ವ್ಯಾಪಾರಿಗಳಿಗೆ, ಬಡಜನರಿಗೆ 2012ರಲ್ಲಿ ಭೂಮಿ ಹಂಚಿಕೆ ಮಾಡಲಾಗಿತ್ತು. ಇಲ್ಲಿ ಕಾರ್ಮಿಕರು ಮನೆಗಳನ್ನು ನಿರ್ಮಿಸಿಕೊಳ್ಳಲು ಮುಂದಾಗಿದ್ದು, ಈ ಪ್ರದೇಶವನ್ನು ಕೊಳೆಗೇರಿ ನಿರ್ಮೂಲನಾ ಮಂಡಳಿಗೆ ವಹಿಸಲು ಪುರಸಭೆ ನಿರ್ಧರಿಸಿ, ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಲಾಗಿತ್ತು.

‘ಈ ಹಿಂದೆ ನಾಮನಿರ್ದೇಶಿತ ಸದಸ್ಯರೊಬ್ಬರು ಪುರಸಭೆ ವಿರುದ್ಧ ನಡೆದುಕೊಂಡು ದಾಖಲೆ ಸುಟ್ಟು ಜೈಲು ಸೇರಿ ಬಂದವರು ಹಾಗೂ ನಿಗದಿಪಡಿಸಿದ ಅವಧಿ ನಂತರ ಆಕ್ಷೇಪಣೆ ಸಲ್ಲಿಸಿದವರನ್ನು ಗಣನೆಗೆ ತೆಗೆದುಕೊಂಡು ಯೋಜನೆಯನ್ನು ತಡೆಹಿಡಿಯಬಾರದು’ ಎಂದು ಆಗ್ರಹಿಸಿ ರೇವಣ್ಣ ಧರಣಿ ನಡೆಸಲು ಮುಂದಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.