ADVERTISEMENT

ಸಮಸ್ಯೆ ಬಗೆಹರಿಯುವ ನಿರೀಕ್ಷೆಯಲ್ಲಿ ಗ್ರಾಮಸ್ಥರು

ರಾಮನಾಥಪುರ ಹೋಬಳಿಯ ಹಂಪಾಪುರದಲ್ಲಿ ಜಿಲ್ಲಾಧಿಕಾರಿ ಆರ್‌.ಗಿರೀಶ್‌ ವಾಸ್ತವ್ಯ ಇಂದು; ಸ್ವಾಗತಕ್ಕಾಗಿ ಸಕಲ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2021, 4:11 IST
Last Updated 20 ಮಾರ್ಚ್ 2021, 4:11 IST
ರಾಮನಾಥಪುರ ಹೋಬಳಿಯ ಹಂಪಾಪುರದಲ್ಲಿ ಪಾಳು ಬಿದ್ದಿರುವ ಆರೋಗ್ಯ ಉಪಕೇಂದ್ರ
ರಾಮನಾಥಪುರ ಹೋಬಳಿಯ ಹಂಪಾಪುರದಲ್ಲಿ ಪಾಳು ಬಿದ್ದಿರುವ ಆರೋಗ್ಯ ಉಪಕೇಂದ್ರ   

ಕೊಣನೂರು: ‘ಹಳ್ಳಿಗಳ ಕಡೆ ಜಿಲ್ಲಾಧಿಕಾರಿಗಳ ನಡೆ’ ಕಾರ್ಯಕ್ರಮದಡಿ ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಅವರು ಮಾರ್ಚ್‌ 20ರಂದು ಬೆಳಿಗ್ಗೆ 10ಕ್ಕೆ ಸಮೀಪದ ಹಂಪಾಪುರಕ್ಕೆ ಭೇಟಿ ನೀಡಲಿದ್ದು, ಅವರ ಬರುವಿಕೆಗಾಗಿ ಗ್ರಾಮಸ್ಥರು ಕಾದಿದ್ದಾರೆ. ತಮ್ಮ ಗ್ರಾಮದಲ್ಲಿರುವ ಜ್ವಲಂತ ಸಮಸ್ಯೆಗಳನ್ನು ಈಡೇರಿಸಿಕೊಳ್ಳುವ ತವಕದಲ್ಲಿ ಅವರಿದ್ದಾರೆ.

ಹಂಪಾಪುರ ಗ್ರಾಮವು ಹೋಬಳಿ ಕೇಂದ್ರ ರಾಮನಾಥಪುರದಿಂದ 9 ಕಿ.ಮೀ ಮತ್ತು ತಾಲ್ಲೂಕು ಕೇಂದ್ರದಿಂದ 25 ಕಿ.ಮೀ ದೂರದಲ್ಲಿದೆ. ಗ್ರಾಮದಲ್ಲಿ 209 ಕುಟುಂಬಗಳಿದ್ದು, 948 ಜನಸಂಖ್ಯೆ ಇದೆ. ಇಲ್ಲಿ ಹತ್ತಾರು ಸಮಸ್ಯೆಗಳಿವೆ.

ಗ್ರಾಮವು 1,914 ಎಕರೆ ವಿಸ್ತೀರ್ಣವಿದ್ದು, ಗೊಬ್ಬಳಿ ಮೀಸಲು ಅರಣ್ಯಕ್ಕೆ ಹೊಂದಿಕೊಂಡಿದೆ. ಕಾಡಂಚಿನ ಜಮೀನಿನಲ್ಲಿ ಜೋಳ, ಆಲೂಗೆಡ್ಡೆ, ಶುಂಠಿ, ಕಾಳಿನ ಬೆಳೆಗಳನ್ನು ಬೆಳೆಯುತ್ತಾರೆ.

ADVERTISEMENT

ಇವುಗಳನ್ನು ಕಾಡು ಹಂದಿಗಳು ತಿಂದು ನಾಶ ಮಾಡುತ್ತಿವೆ. ಕಾಡು ಪ್ರಾಣಿಗಳ ಹಾವಳಿಗೆ ಕಡಿವಾಣ ಹಾಕಬೇಕು. ಬೆಳೆ ಹಾನಿಗೆ ವೈಜ್ಞಾನಿಕ ಪರಿಹಾರ ನೀಡಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.

ಗ್ರಾಮದ ಗೋಮಾಳದಲ್ಲಿ 114 ರೈತರು ಕಳೆದ 15 ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದಾರೆ. ಹಕ್ಕುಪತ್ರ ಪಡೆಯಲು ಶುಲ್ಕ ಕಟ್ಟಿದ್ದರೂ ಇದುವರೆಗೂ ಹಕ್ಕುಪತ್ರವನ್ನು ನೀಡಿಲ್ಲ.

ಗ್ರಾಮದಲ್ಲಿರುವ ನೀರಿನ ಟ್ಯಾಂಕ್‌ ಶಿಥಿಲಾವಸ್ಥೆಗೆ ತಲುಪಿದ್ದು, ಹೆಚ್ಚಿನ ಸಾಮರ್ಥ್ಯದ ಹೊಸ ಟ್ಯಾಂಕ್ ನಿರ್ಮಿಸಬೇಕಿದೆ.

ಹಂಪಾಪುರದಲ್ಲಿ ಆರೋಗ್ಯ ಉಪಕೇಂದ್ರವಿದೆ. ಹಲವು ವರ್ಷಗಳಿಂದ ಇಲ್ಲಿ ನರ್ಸ್‌ಗಳಿಲ್ಲ. ಜನರು ಚಿಕಿತ್ಸೆಗಾಗಿ 4 ಕಿ.ಮೀ ದೂರದ ಗಂಗೂರಿಗೆ ಅಥವಾ 9 ಕಿ.ಮೀ ದೂರದ ರಾಮನಾಥಪುರಕ್ಕೆ ಹೋಗಬೇಕಿದೆ. ಹೀಗಾಗಿ ಇಲ್ಲಿ ಆರೋಗ್ಯ ಸಹಾಯಕಿಯನ್ನು ನೇಮಿಸಬೇಕು ಎಂದು ಒತ್ತಾಯಿಸಿದ್ದಾರೆ.

ಗ್ರಾಮದಲ್ಲಿ ಅನೇಕ ಜಾನುವಾರು ಗಳಿದ್ದು, ಅವುಗಳ ಆರೋಗ್ಯ ತಪಾಸಣೆಗಾಗಿ ರಾಮನಾಥಪುರ, ಮರೂರಿಗೆ ಹೋಗಬೇಕಿದೆ. ಹೀಗಾಗಿ, ಗ್ರಾಮದಲ್ಲೇ ಪಶು ಆಸ್ಪತ್ರೆ ಸ್ಥಾಪಿಸಬೇಕು.

ಗ್ರಾಮದಲ್ಲಿ ಮೂರು ಕೆರೆಗಳಿದ್ದು, ಈ ಪೈಕಿ ಇಲ್ಲಿನ ದೊಡ್ಡಕೆರೆಗೆ ಮಾತ್ರ ಕರಡಿಲಕ್ಕನ ಕೆರೆ ಏತ ನೀರಾವರಿ ಯೋಜನೆಯ ನೀರು ತಲುಪುತ್ತಿದ್ದು, ಉಳಿದ ಮಟ್ಟದಕೆರೆ ಮತ್ತು ಕುರುಬನ ಕಟ್ಟೆಗೆ ಈ ನೀರು ಸಿಗುತ್ತಿಲ್ಲ. ಮಳೆಯನ್ನೇ ಅವಲಂಬಿಸಿರುವ ಈ ಕೆರೆಗಳಿಗೆ ಏತ ನೀರಾವರಿ ಯೋಜನೆಯ ನೀರು ತಲುಪುವಂತೆ ಮಾಡಿದರೆ ಅಂತರ್ಜಲ ವೃದ್ಧಿಯಾಗಿ ಅನೇಕ ಕೊಳವೆಬಾವಿಗಳು ಪುನಶ್ಚೇತನಗೊಳ್ಳುತ್ತವೆ.

ಗ್ರಾಮದ ಅಂಗನವಾಡಿಯಲ್ಲಿನ ಕಾರ್ಯಕರ್ತೆಯ ಹುದ್ದೆ ಕಳೆದ 1 ವರ್ಷದಿಂದಲೂ ಖಾಲಿಯಿದೆ. ಕೂಡಲೇ, ಹುದ್ದೆಯನ್ನು ಭರ್ತಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ತಾಲ್ಲೂಕಿನ ಗಡಿ ಗ್ರಾಮವಾದ ಹಂಪಾಪುರಕ್ಕೆ ದಿನಕ್ಕೆ 3 ಬಸ್‌ಗಳು ಬರುತ್ತಿದ್ದವು. ಕೋವಿಡ್‌ ಲಾಕ್‌ಡೌನ್ ನಂತರ, ಈ ಬಸ್‌ಗಳು ಸರಿಯಾಗಿ ಬರುತ್ತಿಲ್ಲ. ಜನರು ಹೋಬಳಿ ಕೇಂದ್ರ, ತಾಲ್ಲೂಕು ಕೇಂದ್ರಕ್ಕೆ ತೆರಳಲು ಖಾಸಗಿ ವಾಹನಗಳ ಮೊರೆ ಹೋಗಬೇಕಾಗಿದೆ. ಹೀಗಾಗಿ, ಸಾರಿಗೆ ಬಸ್‌ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಗ್ರಾಮದ ಹೃದಯ ಭಾಗದಲ್ಲಿ ಶಿಥಿಲವಾಗಿರುವ ಬಸವೇಶ್ವರ ದೇವಾಲಯವನ್ನು ಜೀರ್ಣೋದ್ಧಾರ ಗೊಳಿಸಬೇಕು. ಊರಿನಿಂದಾಚೆಯಿರುವ ಈಶ್ವರ ದೇವಾಲಯವನ್ನು ಮುಜರಾಯಿ ಇಲಾಖೆಗೆ ಸೇರಿಸಬೇಕು ಎಂದು ಆಗ್ರಹಿಸಿದ್ದಾರೆ.

ಜಿಲ್ಲಾಧಿಕಾರಿ ಗಿರೀಶ್‌ ದಿನಚರಿ

ಬೆಳಿಗ್ಗೆ 8ರಿಂದ 11 ಗಂಟೆಯವರೆಗೆ ಸಾರ್ವಜನಿಕರಿಂದ ಅರ್ಜಿ ಸ್ವೀಕಾರ ನಡೆಯಲಿದೆ. ಬೆಳಿಗ್ಗೆ 10ಕ್ಕೆ ಗ್ರಾಮಕ್ಕೆ ಬರುವ ಜಿಲ್ಲಾಧಿಕಾರಿಗೆ ಸ್ವಾಗತ ಕೋರಿ ಗ್ರಾಮದ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ. ಬಳಿಕ, ಗಿಡ ನೆಡುವುದು, ಆರೋಗ್ಯ ಮೇಳ, ಜಾನುವಾರು ತಪಾಸಣಾ ಶಿಬಿರಕ್ಕೆ ಚಾಲನೆ ನೀಡಲಾಗುತ್ತದೆ. ಶಾಲೆ, ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಕುಂದುಕೊರತೆಗಳ ಪರಿಶೀಲನೆ ಮಾಡಲಿದ್ದಾರೆ. ಬಳಿಕ, ಸಭಾ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ ವಿವಿಧ ಪಿಂಚಣಿ ಯೋಜನೆಯ ಫಲಾನುಭವಿಗಳಿಗೆ ಆದೇಶಪತ್ರ ವಿತರಣೆ, ವಿವಿಧ ಇಲಾಖೆಗಳ ಸರ್ಕಾರಿ ಯೋಜನೆಗಳ ಕುರಿತು ಮಾಹಿತಿ, ಸಾರ್ವಜನಿಕರಿಂದ ಸ್ವೀಕರಿಸಲಾದ ಅರ್ಜಿಗಳನ್ನು ಪರಿಶೀಲಿಸಿ ವಿಲೇವಾರಿ ಮಾಡಲಾಗುತ್ತದೆ. ಸಂಜೆ 5 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಜೆ.ಹೊಸಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾಧಿಕಾರಿ ರಾತ್ರಿ ವಾಸ್ತವ್ಯ ಹೂಡಲಿದ್ದಾರೆ.

***

ಪ್ರತಿವರ್ಷ ಕಾಡು ಹಂದಿಗಳು ಬೆಳೆಗಳನ್ನು ನಾಶ ಮಾಡುತ್ತಿವೆ. ಇವುಗಳಿಗೆ ಕಡಿವಾಣ ಹಾಕಬೇಕು. ಶಾಶ್ವತ ಪರಿಹಾರ ಒದಗಿಸಬೇಕು

–ಸುಬ್ರಹ್ಮಣ್ಯ, ಗ್ರಾಮಸ್ಥ

***

ಗ್ರಾಮದ ವಿದ್ಯಾವಂತ ಯುವಕ ಮತ್ತು ಮಹಿಳೆಯರಿಗಾಗಿ ಸ್ವಯಂ ಉದ್ಯೋಗಕ್ಕಾಗಿ ಪ್ರೋತ್ಸಾಹ ಯೋಜನೆಗಳ ಸವಲತ್ತು ನೀಡಬೇಕು

–ಶ್ರೀನಿವಾಸ, ಗ್ರಾಮಸ್ಥ

***

ನಮ್ಮೂರಿನ ಶಾಲಾ ಕಟ್ಟಡ ಹಳೆಯದಾಗಿದ್ದು, ನೂತನ ಕಟ್ಟಡವನ್ನು ನಿರ್ಮಿಸಬೇಕು. ಮಕ್ಕಳಿಗಾಗಿ ಆಟದ ಮೈದಾನ ಬೇಕು

–ಅಜ್ಜೇಗೌಡ, ಗ್ರಾಮಸ್ಥ

***

2020ರ ಜೂನ್‌ನಲ್ಲಿ ಅಂಗನ ವಾಡಿ ಕಾರ್ಯಕರ್ತೆ ಹುದ್ದೆಗೆ ಆಯ್ಕೆ ಪ್ರಕ್ರಿಯೆ ನಡೆದಿತ್ತು. ಅಭ್ಯರ್ಥಿ ಸುಳ್ಳು ಮಾಹಿತಿ ನೀಡಿರುವ ಬಗ್ಗೆ ಆಕ್ಷೇಪಣೆ ಬಂದಿತ್ತು. ಹೀಗಾಗಿ, ನೇಮಕ ಪ್ರಕ್ರಿಯೆ ತಡವಾಗಿದೆ

–ಹರಿಪ್ರಸಾದ್ ಸಿಡಿಪಿಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.