ADVERTISEMENT

ಅರಕಲಗೂಡು: ಕೆಟ್ಟು ನಿಂತ ಆಂಬುಲೆನ್ಸ್‌: ಆಸ್ತಮಾ ರೋಗಿ ಸಾವು

​ಪ್ರಜಾವಾಣಿ ವಾರ್ತೆ
Published 30 ಜೂನ್ 2020, 9:32 IST
Last Updated 30 ಜೂನ್ 2020, 9:32 IST

ಅರಕಲಗೂಡು: ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ತಾಲ್ಲೂಕಿನ ದುಮ್ಮಿ ಗ್ರಾಮದ ರಾಮೇಗೌಡ (55) ಎಂಬುವವರು, ಸಕಾಲದಲ್ಲಿ ಆಂಬುಲೆನ್ಸ್‌ ಸೇವೆ ಸಿಗದೇ ಸೋಮವಾರ ಮೃತಪಟ್ಟಿದ್ದಾರೆ.

ಆಸ್ತಮಾದಿಂದ ಬಳಲುತ್ತಿದ್ದ ರಾಮೇಗೌಡ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಬಂದ ಆಂಬುಲೆನ್ಸ್‌ ಗ್ರಾಮದಲ್ಲಿಯೇ ಕೆಟ್ಟು ನಿಂತಿತು. ಬದಲಿ ವಾಹನಕ್ಕೆ ಕರೆ ಮಾಡಲಾಯಿತಾದರೂ ಅದು ಬರುವಷ್ಟರಲ್ಲಿ ಎರಡು ತಾಸು ಕಳೆಯಿತು. ಅಲ್ಲಿಯವರೆಗೂ ಕುಟುಂಬದವರು ರೋಗಿಯನ್ನು ರಸ್ತೆ ಬದಿಯಲ್ಲಿಯೇ ಮಲಗಿಸಿಕೊಂಡು ಕಾದು ಕುಳಿತಿದ್ದರು. ಕೊನೆಗೂ ಪಟ್ಟಣದ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅವರು ಚಿಕಿತ್ಸೆಗೆ ಸ್ಪಂದಿಸಲಿಲ್ಲ.

‘ಆರೋಗ್ಯ ಇಲಾಖೆಯ ನಿರ್ಲಕ್ಷ್ಯದಿಂದ ಹಾಗೂ ಸಕಾಲಕ್ಕೆ ಆಂಬುಲೆನ್ಸ್‌ ಸಿಗದೇ ವೃದ್ಧ ಮೃತಪಟ್ಟಿದ್ದಾರೆ’ ಎಂದು ಕುಟುಂಬದ ಸದಸ್ಯರು ಹಾಗೂ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ರೋಗಿ ಕರೆತರಲು ದುಮ್ಮಿ ಗ್ರಾಮಕ್ಕೆ ಹೋಗಿದ್ದ ಆಂಬುಲೆನ್ಸ್‌ ಕೆಟ್ಟಿರುವ ವಿಚಾರವನ್ನು ಚಾಲಕ ನನ್ನ ಗಮನಕ್ಕೆ ತಂದಿದ್ದರೆ ಸ್ಥಳೀಯವಾಗಿ ಆಂಬುಲೆನ್ಸ್ ವ್ಯವಸ್ಥೆ ಮಾಡಬಹುದಿತ್ತು. ಆದರೆ, 108 ವಾಹನಕ್ಕೆ ಕರೆ ಮಾಡಿದ್ದಾನೆ. ಆ ವಾಹನ ಹಾಸನಕ್ಕೆ ತೆರಳಿದ್ದರಿಂದ ಗ್ರಾಮಕ್ಕೆ ತಡವಾಗಿ ತಲುಪಿದೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಸ್ವಾಮಿಗೌಡ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.