ADVERTISEMENT

ಹಾಸನಾಂಬೆ ಉತ್ಸವ ಆಚರಣೆ ಸಂಬಂಧ ಮುಂದಿನ ವಾರ ಸಭೆ: ಜಿಲ್ಲಾಧಿಕಾರಿ ಗಿರೀಶ್

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2021, 16:05 IST
Last Updated 28 ಸೆಪ್ಟೆಂಬರ್ 2021, 16:05 IST
ಹಾಸನ ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಮಾತನಾಡಿದರು. ಡಿಎಚ್‌ಒ ಸತೀಶ್ ಕುಮಾರ್‌, ಸಿಇಒ ಪರಮೇಶ್ ಇದ್ದಾರೆ
ಹಾಸನ ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಮಾತನಾಡಿದರು. ಡಿಎಚ್‌ಒ ಸತೀಶ್ ಕುಮಾರ್‌, ಸಿಇಒ ಪರಮೇಶ್ ಇದ್ದಾರೆ   

ಹಾಸನ: ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡುವ ಹಾಸನಾಂಬ ದೇವಿ ದೇವಸ್ಥಾನದ ಬಾಗಿಲು ತೆರೆಯುವ ದಿನಾಂಕವನ್ನು ಧಾರ್ಮಿಕ ಪರಿಷತ್ತಿನ ಜತೆ ಚರ್ಚೆ ಮಾಡಿ ಅಂತಿಮ ತೀರ್ಮಾನಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಹೇಳಿದರು.

ಈ ವರ್ಷವೂ ಹಾಸನಾಂಬೆ ಉತ್ಸವ ಸಿದ್ಧತೆಗಳು ನಡೆಯುತ್ತಿದೆ. ಜಾತ್ರಾ ಮಹೋತ್ಸವ ಅ.28ರಿಂದ
ಆರಂಭವಾಗಬೇಕು ಎಂದಿದೆ.ಉತ್ಸವ ಸಂಬಂಧ ಮುಂದಿನ ವಾರ ಉಸ್ತುವಾರಿ ಸಚಿವರ ನೇತೃತ್ವದಲ್ಲಿ
ನಡೆಯುವ ಸಭೆಯಲ್ಲಿ ಅಂತಿಮ ನಿರ್ಧಾರ ಮಾಡಲಾಗುತ್ತದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ
ತಿಳಿಸಿದರು.

ಅಗತ್ಯ ತಯಾರಿ ಮಾಡಿಕೊಳ್ಳುವ ಸಂಬಂಧ ಈಗಾಗಲೇ ಲೋಕೋಪ ಯೋಗಿ ಇಲಾಖೆ, ನಗರಸಭೆ ಸೇರಿ ದಂತೆ ವಿವಿಧ ಇಲಾಖೆ ಅಧಿಕಾರಿ ಗಳ ಸಭೆ ಕರೆದು ಚರ್ಚಿಸಿ ಸಲಹೆ ಸೂಚನೆನೀಡಲಾಗಿದೆ. ತುರ್ತಾಗಿ ಏನೇನು ಕೆಲಸ ಆಗಬೇಕು, ಇದ ಕ್ಕಾಗಿ ಟೆಂಡರ್ ಕರೆಯುವ ಬಗ್ಗೆ ಸೂಕ್ತನಿರ್ದೇಶನ ನೀಡಿದ್ದೇನೆ ಎಂದು ತಿಳಿಸಿದರು.

ADVERTISEMENT

ಜಿಲ್ಲೆಯಲ್ಲಿ ಸದ್ಯ ಪಾಸಿಟಿವಿರ ದರ 0.71 ಇದೆ. ಮುಂದಿನ ದಿನಗಳಲ್ಲಿ ಕೋವಿಡ್ ಯಾವ ಸ್ವರೂಪ ಪಡೆದುಕೊಳ್ಳಲಿದೆ ಎಂಬುದನ್ನು ಗಮನಿಸಿ ತೀರ್ಮಾನ ಕೈಗೊಳ್ಳುತ್ತೇವೆ. ಕೊರೊನಾಸೋಂಕು ಕಡಿಮೆಯಾದರೆ ಪ್ರತಿವರ್ಷ ಉತ್ಸವ ಹೇಗೆ ನಡೆದಿತ್ತೋ ಹಾಗೆಯೇ ಎಲ್ಲಾಕಾರ್ಯಕ್ರಮ ಮುಂದುವರಿಯಲಿದೆ. ಆದರೆ, ಕೋವಿಡ್ ಕಾರಣದಿಂದಾಗಿ ಅಂತರ ಪಾಲನೆಮಾಡಬೇಕಿದೆ ಎಂದರು.

ಈ ಬಾರಿಯೂ ಶೀಘ್ರ ದರ್ಶನಕ್ಕೆ ಟಿಕೆಟ್ ವ್ಯವಸ್ಥೆ ಇರಲಿದೆ. ಪ್ರಮಾಣಿತ ಕಾರ್ಯಚರಣೆ ವಿಧಾನ
(ಎಸ್‌ಒಪಿ) ಪಾಲನೆ ಬಗ್ಗೆ ಗಂಭೀರ ಚಿಂತನೆ ನಡೆಸಲಾಗುವುದು ಎಂದರು.

ಜಿಲ್ಲೆಯಲ್ಲಿ ಸೆ. 29 ರಂದು ಮತ್ತೊಂದು ಸುತ್ತಿನ ಕೋವಿಡ್ ಲಸಿಕಾ ಮೇಳ ನಡೆಯಲಿದ್ದು, 50 ಸಾವಿರ
ಜನರಿಗೆ ಲಸಿಕೆ ನೀಡುವ ಗುರಿ ನಿಗದಿಪಡಿಸಲಾಗಿದೆ. 884 ತಂಡಗಳನ್ನು ರಚಿಸಲಾಗಿದೆ. ಸೆ. 17ರ
ಲಸಿಕಾ ಮೇಳದಲ್ಲಿ 1 ಲಕ್ಷಕ್ಕೂ ಅಧಿಕ ಮಂದಿಗೆ ಲಸಿಕೆ ನೀಡಲಾಗಿದೆ. ಜಿಲ್ಲೆಯಲ್ಲಿ ಶೇ 84ರಷ್ಟು ಜನರಿಗೆ
ಲಸಿಕೆ ಹಾಕಲಾಗಿದೆ. ಹಾಸನ ತಾಲ್ಲೂಕಿನಲ್ಲಿ ಶೇ 97ರಷ್ಟು ಮಂದಿಗೆ ಮೊದಲ ಡೋಸ್ ನೀಡಲಾಗಿದೆ.
ಆದರೆ, ಅರಸೀಕೆರೆ ತಾಲ್ಲೂಕಿನಲ್ಲಿ ಸ್ವಲ್ಪ ಕಡಿಮೆ ಸಾಧನೆ ಇದೆ ಎಂದರು.

ಮನೆ ಮನೆ ಸರ್ವೆ ನಡೆಸಲಾಗಿದ್ದು, ಲಸಿಕೆ ಪಡೆಯದೆ ಇರುವ 18 ವರ್ಷ ಮೇಲ್ಪಟ್ಟ ಎಲ್ಲರನ್ನೂ ಕರೆತಂದು ಅಥವಾ ಅವರ ಮನೆಗಳಿಗೆ ತೆರಳಿ ಲಸಿಕೆ ನೀಡಲಾಗುವುದು. ಎರಡನೇ ಡೋಸ್ ನೀಡಲು 15 ಸಾವಿರ ಗುರಿ ನೀಡಲಾಗಿದೆ ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಬಿ.ಎ. ಪರಮೇಶ್ ಮಾತನಾಡಿ, ಲಸಿಕ ಮೇಳ ಯಶಸ್ವಿಗಾಗಿ ಎಲ್ಲ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಪೂರ್ಣ ಸಹಕಾರ ನೀಡುವಂತೆ ಈಗಾಗಲೇ ನಿರ್ದೇಶನವನ್ನು ನೀಡಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಕವಿತಾ ರಾಜಾರಾಂ, ಡಿಎಚ್‌ಒ ಡಾ. ಕೆ.ಎಂ. ಸತೀಶ್ ಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.