
ಅರಸೀಕೆರೆ: ತಾಲ್ಲೂಕಿನ ಮಾಡಾಳು ಗ್ರಾಮದ ಇತಿಹಾಸ ಪ್ರಸಿದ್ಧ ಮೂಲಸ್ಥಾನ ಸ್ವರ್ಣ ಗೌರಮ್ಮ ದೇವಾಲಯದಲ್ಲಿ ಹಾರನಹಳ್ಳಿ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ 11 ಸಹಸ್ರ ದೀಪೋತ್ಸವ ಭಾನುವಾರ ಸಂಜೆ ಅದ್ದೂರಿಯಾಗಿ ಜರುಗಿತು.
ಗ್ರಾಮದ ಹೊರವಲಯದ ಶಿವಬಸವ ಕಮಾಶ್ರಮ ರಸ್ತೆಬದಿಯ ದೇವಾಲಯದಲ್ಲಿ ಲೋಕಕಲ್ಯಾಣಾರ್ಥ 2ನೇ ದೀಪೋತ್ಸವಕ್ಕೆ ಕೋಡಿಮಠದ ಸ್ವಾಮೀಜಿ ಚಾಲನೆ ನೀಡಿದರು. ಶ್ರೀಗಳು ಹಣತೆ ಬೆಳಗಿಸುತ್ತಿದ್ದಂತೆಯೇ ನೂರಾರು ಮಹಿಳೆಯರು, ಯುವಕ– ಯುವತಿಯರು ಸರತಿ ಸಾಲಿನಲ್ಲಿ ಜೋಡಿಸಿಟ್ಟಿದ್ದ ಹಣತೆಗಳನ್ನು ಹಚ್ಚಿ ಭಕ್ತಿ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು, ಕತ್ತಲೆಯನ್ನು ಕಳೆಯಲು ಸೂರ್ಯ– ಚಂದ್ರ, ದೀಪ ಬೇಕು. ಹಾಗೆಯೇ ಮನುಷ್ಯನ ಮನದಲ್ಲಿರುವ ಅಜ್ಞಾನ ಮತ್ತು ಅಂಧಕಾರವನ್ನು ಓಡಿಸಲು ಗುರುಗಳ ಕಾರುಣ್ಯ ಅಗತ್ಯ ಎಂದು ಹೇಳಿದರು.
ಕಡೆ ಕಾರ್ತೀಕ ಪೂಜೆಯ ಅಂಗವಾಗಿ ದೇವಾಲಯವನ್ನು ತಳಿರು ತೋರಣ, ಬಾಳೆ ಕಂದುಗಳಿಂದ ಶೃಂಗರಿಸಲಾಗಿತ್ತು. ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಬ್ರಾಹ್ಮಿ ಮುಹೂರ್ತದಲ್ಲಿ ಶಿವಲಿಂಗಜ್ಜಯ್ಯ ಮೂರ್ತಿ ಹಾಗೂ ಗ್ರಾಮದ ಆರಾಧ್ಯ ದೈವ ಗುರು ಚನ್ನಬಸವೇಶ್ವರ ಸ್ವಾಮಿಯವರ ಸಮ್ಮುಖದಲ್ಲಿ ಪುರೋಹಿತರಿಂದ ಹವನ– ಹೋಮ, ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನೆರವೇರಿದವು.
ರಾತ್ರಿ ಶ್ರೀಗಳ ಪಾದಪೂಜೆ, ಅಮ್ಮನವರಿಗೆ ಕರ್ಪೂರದಾರತಿ ಸಲ್ಲಿಸಲಾಯಿತು. ಭಕ್ತಾದಿಗಳಿಗೆ ಕೋಡಿಮಠದ ವತಿಯಿಂದ ದಾಸೋಹದ ವ್ಯವಸ್ಥೆ ಕಲ್ಪಿಸಲಾಗಿತ್ತು. ರಾಂಪುರ ನಿರ್ಮಾಣ ಸಿದ್ದೇಶ್ವರ ಭಜನಾ ಮಂಡಳಿ ತಂಡದವರಿಂದ ಭಜನೆ ನಡೆಯಿತು. ನೂರಾರು ಭಕ್ತಾದಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.