ADVERTISEMENT

ಸಿಬಿಐ ಬದಲು ಹಾಲಿ ನ್ಯಾಯಮೂರ್ತಿ ತನಿಖೆ ನಡೆಸಲಿ

ಉತ್ತರ ಪ್ರದೇಶ ಸರ್ಕಾರ ವಜಾಗೊಳಿಸಿ : ಪ್ರಧಾನಿಗೆ ಕುಮಾರಸ್ವಾಮಿ ಮನವಿ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2020, 14:16 IST
Last Updated 5 ಅಕ್ಟೋಬರ್ 2020, 14:16 IST
ಎಚ್.ಕೆ.ಕುಮಾರಸ್ವಾಮಿ
ಎಚ್.ಕೆ.ಕುಮಾರಸ್ವಾಮಿ   

ಹಾಸನ: ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಮಹಿಳೆಯರು, ಮಕ್ಕಳು ಮತ್ತು ದಲಿತರ
ಮೇಲೆ ದೌರ್ಜನ್ಯ ಹೆಚ್ಚುತ್ತಿದೆ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಕೆ.ಕುಮಾರಸ್ವಾಮಿ
ಆರೋಪಿಸಿದರು.

ಹಾಥರಸ್‌ ಅತ್ಯಾಚಾರ ಪ್ರಕರಣ ಖಂಡಿಸಿ ದೇಶದ ಹಲವೆಡೆ ಪ್ರತಿಭಟನೆ ನಡೆಯುತ್ತಿದೆ. ಮೊದಲಿನಿಂದಲೂ
ಪೊಲೀಸರು ಸ್ವತಂತ್ರವಾಗಿ ಕೆಲಸ ಮಾಡಲು ಆಗುತ್ತಿಲ್ಲ. ಬಿಜೆಪಿ ಆಡಳಿತ ರಾಜ್ಯಗಳಲ್ಲಿ ದೌರ್ಜನ್ಯ ಹೆಚ್ಚು
ನಡೆಯುತ್ತಿದೆ. ಈ ಘಟನೆಯ ಜವಾಬ್ದಾರಿ ಹೊತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜೀನಾಮೆ
ನೀಡಬೇಕು. ಕೂಡಲೇ ಉತ್ತರ ಪ್ರದೇಶ ಸರ್ಕಾರವನ್ನು ಪ್ರಧಾನಿ ನರೇಂದ್ರ ಮೋದಿ ವಜಾ ಮಾಡಬೇಕು ಎಂದು
ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಮೋದಿ ಅವರು ಬೇಟಿ ಬಚಾವೋ ಬೇಟಿ ಪಡಾವೋ ಎನ್ನುತ್ತಾರೆ. ಆದರೆ, ದೇಶದಲ್ಲಿ ಆಡಳಿತ ಯಂತ್ರ ಮಹಿಳೆಯ
ಹಿತಕಾಯುವಲ್ಲಿ ಸಂಪೂರ್ಣ ವಿಫಲವಾಗಿದೆ. ಅನ್ಯಾಯಕ್ಕೊಳಗಾದ ಯುವತಿಯೇ ಸಾಯುವ ಮುನ್ನ ನ್ಯಾಯ
ಕೇಳಿದ್ದಾಳೆ. ನಿರ್ಬಯಾ ಪ್ರಕರಣದಂತೆ ಅಪಾಧಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದರು.

ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿರುವುದು ಸರಿಯಲ್ಲ. ವಿಚಾರಣೆ ವಿಳಂಬವಾಗುವುದರ ಜತೆಗೆ ತನಿಖಾ
ಸಂಸ್ಥೆ ಕೇಂದ್ರ ಸರ್ಕಾರದ ಕೈ ಗೊಂಬೆಯಾಗಿದೆ. ಹೈಕೋರ್ಟ್‌ ಅಥವಾ ಸುಪ್ರೀಂ ಕೋರ್ಟ್‌ನ ಹಾಲಿ
ನ್ಯಾಯಮೂರ್ತಿ ಅವರಿಂದ ತನಿಖೆ ನಡೆಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.

ADVERTISEMENT

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮನೆ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿರುವ ಕುರಿತ ಪ್ರಶ್ನೆಗೆ
ಪ್ರತಿಕ್ರಿಯಿಸಿದ ಅವರು, ‘ಈ ಸಂದರ್ಭದಲ್ಲಿ ದಾಳಿ ನಡೆದಿರುವುದು ರಾಜಕೀಯ ಪ್ರೇರಿತವಾಗಿರಬಹುದು. ಇದನ್ನು ಶಿವಕುಮಾರ್‌ ಯಾವ ರೀತಿ ಸ್ವೀಕರಿಸುವರೋ ಕಾದು ನೋಡಬೇಕು. ಕಾನೂನು ಪ್ರಕಾರ ನಡೆಸದಿರುವ
ತನಿಖೆ ಬಗ್ಗೆ ಮಾತನಾಡುವುದಿಲ್ಲ. ಡಿಕೆಶಿ ಉತ್ತರಿಸಿದ ನಂತರ ವಿಷಯ ತಿಳಿದು ಪ್ರತಿಕ್ರಿಯಿಸುತ್ತೇನೆ’ ಎಂದು
ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.