ADVERTISEMENT

ದಶಕ ಕಳೆದರೂ ಸಿಗದ ಭೂಮಿ: ಅರೆಬೆತ್ತಲೆ ಧರಣಿ

ತಾಲ್ಲೂಕಿನ ಜೀತವಿಮುಕ್ತರ ಬಗೆಹರಿಸಲು ಜಿಲ್ಲಾಡಳಿತ ವಿಫಲ: ಆರೋಪ

​ಪ್ರಜಾವಾಣಿ ವಾರ್ತೆ
Published 23 ಜುಲೈ 2022, 8:04 IST
Last Updated 23 ಜುಲೈ 2022, 8:04 IST
ಹಾಸನದ ಜಿಲ್ಲಾಧಿಕಾರಿ ಕಚೇರಿ ಎದುರು ಅರೆಬೆತ್ತಲೆ ಪ್ರತಿಭಟನೆ ನಡೆಸಿದ ದಲಿತ ಮುಖಂಡ ಕೃಷ್ಣದಾಸ್ ಅವರನ್ನು ಜಿಲ್ಲಾಧಿಕಾರಿ ಆರ್‌. ಗಿರೀಶ್‌ ಭೇಟಿ ಮಾಡಿದರು.
ಹಾಸನದ ಜಿಲ್ಲಾಧಿಕಾರಿ ಕಚೇರಿ ಎದುರು ಅರೆಬೆತ್ತಲೆ ಪ್ರತಿಭಟನೆ ನಡೆಸಿದ ದಲಿತ ಮುಖಂಡ ಕೃಷ್ಣದಾಸ್ ಅವರನ್ನು ಜಿಲ್ಲಾಧಿಕಾರಿ ಆರ್‌. ಗಿರೀಶ್‌ ಭೇಟಿ ಮಾಡಿದರು.   

ಹಾಸನ: ದಶಕಗಳು ಕಳೆದರೂ ತಾಲ್ಲೂಕಿನ 26 ಜೀತ ವಿಮುಕ್ತರ ಸಮಸ್ಯೆಗಳನ್ನು ಬಗೆಹರಿಸಲು ವಿಫಲವಾಗಿರುವ ಜಿಲ್ಲಾಡಳಿತದ ವಿರುದ್ಧ ದಲಿತ ಮುಖಂಡ ಕೃಷ್ಣದಾಸ್ ಅವರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಅರೆಬೆತ್ತಲೆ ಧರಣಿ ಸತ್ಯಾಗ್ರಹ ನಡೆಸಿದರು.

ಈ ವೇಳೆ ಮಾತನಾಡಿದ ಅವರು, ಜೀತ ವಿಮುಕ್ತರ ಸಮಸ್ಯೆಗಳನ್ನು ಬಗೆಹರಿಸುವಂತೆ ಹಲವು ದಶಕಗಳಿಂದ ಜಿಲ್ಲಾಧಿಕಾರಿಗೆ ಮನವಿ ಮಾಡಲಾಗುತ್ತಿದೆ. ಕೆಲವು ವರ್ಷಗಳ ಹಿಂದೆ ಜೀತ ವಿಮುಕ್ತರ ಸಮಸ್ಯೆ ಬಗೆಹರಿಸಲು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ಜಿಲ್ಲಾಧಿಕಾರಿ ಆರ್.ಗಿರೀಶ್ ಅವರಿಗೆ ನೀಡಲಾಗಿತ್ತು. ಇಷ್ಟು ವರ್ಷಗಳಾದರೂ ಜೀತ ವಿಮುಕ್ತರ ಸಮಸ್ಯೆ ಬಗೆಹರಿಸದ ಹಿನ್ನೆಲೆಯಲ್ಲಿ ಅಂಬೇಡ್ಕರ್ ಭಾವಚಿತ್ರವನ್ನು ಹಿಂದಿರುಗಿಸುವಂತೆ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಲಾಗಿದೆ ಎಂದು ಹೇಳಿದರು.

26 ಜೀತ ವಿಮುಕ್ತರಿಗೆ ತಲಾ ಮೂರು ಎಕರೆ ಜಮೀನು ಮಂಜೂರು ಮಾಡಲು ಜಿಲ್ಲಾಡಳಿತ ಮೀನಮೇಷ ಎಣಿಸುತ್ತಿದೆ. 1976ರಲ್ಲಿ ಪರಿಶಿಷ್ಟ ಜಾತಿಯ 21 ಮತ್ತು ಒಕ್ಕಲಿಗ ಜನಾಂಗದ ಐದು ಜನರನ್ನು ಜೀತ ವಿಮುಕ್ತಗೊಳಿಸಿ ಆದೇಶ ಹೊರಡಿಸಿದ್ದರು. ನಂತರ ತಾಲ್ಲೂಕಿನ ಸಿಗೆಗುಡ್ಡ ಕಾವಲಿನ ಸರ್ವೆ ನಂಬರ್ 94ರಲ್ಲಿ 26 ಮಂದಿ ಜೀತ ವಿಮುಕ್ತರಿಗೆ ತಲಾ ಮೂರು ಎಕರೆಯಂತೆ ಜಮೀನನ್ನು ಮಂಜೂರು ಮಾಡಲಾಗಿತ್ತು ಎಂದು ತಿಳಿಸಿದರು.

ADVERTISEMENT

ನಂತರ ಕೆಲವು ದುಷ್ಟ ಶಕ್ತಿಗಳು, ಜೀತವಿಮುಕ್ತರನ್ನು ಸಾಗುವಳಿ ಮಾಡಿದಂತೆ ದೌರ್ಜನ್ಯ ನಡೆಸಿ, ಬೆದರಿಸಿದರು. ಇದಾದ ಬಳಿಕ ಜೀತವಿಮುಕ್ತರು ಜಿಲ್ಲಾಡಳಿತಕ್ಕೆ ರಕ್ಷಣೆ ನೀಡಿ ಸಾಗುವಳಿ ಮಾಡಲು ಅನುಕೂಲ ಮಾಡಿಕೊಡುವಂತೆ ಜಿಲ್ಲಾಧಿಕಾರಿ, ತಹಶೀಲ್ದಾರ್‌ಗೆ ಅಂದಿನಿಂದ ಈವರೆಗೆ ಮನವಿ ಮಾಡುತ್ತಲೇ ಇದ್ದರೂ, ಪ್ರಯೋಜನವಾಗಿಲ್ಲ ಎಂದು ದೂರಿದರು.

1994 -95ರಲ್ಲಿ ಜೀತವಿಮುಕ್ತರಿಗೆ ಪರ್ಯಾಯ ಜಮೀನು ಒದಗಿಸುವಂತೆ ಆದೇಶ ನೀಡಲಾಗಿತ್ತು. ಈ ಸಂಬಂಧ ದಲಿತ ಸಂಘರ್ಷ ಸಮಿತಿ 25 ವರ್ಷಗಳಿಂದ ಹೋರಾಟ ಮಾಡುತ್ತ ಬಂದಿದ್ದರೂ ಸೂಕ್ತ ಸ್ಪಂದನೆ ದೊರೆಯುತ್ತಿಲ್ಲ. ಇದರಿಂದ ಬೇಸತ್ತು ಅರೆಬೆತ್ತಲೆ ಪ್ರತಿಭಟನೆ ಮಾಡುತ್ತಿರುವುದಾಗಿ ಹೇಳಿದರು.

ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ಅರ್ .ಗಿರೀಶ್, ಸೋಮವಾರ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಸಭೆ ಕರೆದು ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.