ಹಾಸನ: ಇತ್ತೀಚಿನ ಸಂಸತ್ ಅಧಿವೇಶನದ ವೇಳೆ ಅಂಗೀಕರಿಸಲಾದ ಎಲ್ಲ ವಿವಾದಾತ್ಮಕ ತಿದ್ದುಪಡಿಗಳನ್ನು ರದ್ದುಗೊಳಿಸುವಂತೆ ಅಗ್ರಹಿಸಿ ಮುಸ್ಲಿಂ ವಿಮೆನ್ಸ್ ಯುನಿಟ್ ಜಿಲ್ಲಾ ಸಂಘಟನೆ ಸದಸ್ಯರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಸಂಘಟನೆ ಸದಸ್ಯೆ ತಸ್ಮಾ ಫಿರ್ದೋಸ್ ಮಾತನಾಡಿ, ‘ಇತ್ತೀಚೆಗೆ ಅಂಗೀಕರಿಸಲಾದ ವಕ್ಫ್ ಕಾಯ್ದೆ ತಿದ್ದುಪಡಿಗಳು ತಾರತಮ್ಯದಿಂದ ಕೂಡಿದ್ದು, ಸಂವಿಧಾನದ ವಿಧಿ 14, 25, 26 ಮತ್ತು 29 ರಂತೆ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ’ ಎಂದರು.
‘ಈ ಕಾಯ್ದೆ ಧರ್ಮದ ಮುಕ್ತ ಆಚರಣೆಯ ಹಕ್ಕಿಗೆ ಮತ್ತು ತಮ್ಮದೇ ಆದ ಧಾರ್ಮಿಕ ಸಂಸ್ಥೆಗಳನ್ನು ಸ್ಥಾಪಿಸುವ ಮತ್ತು ನಿರ್ವಹಿಸುವುದರ ವಿರುದ್ಧವಾಗಿದೆ’ ಎಂದು ದೂರಿದರು.
‘ಕನಿಷ್ಠ 5 ವರ್ಷಗಳಿಂದ ಮುಸ್ಲಿಂ ಆಗಿಲ್ಲದಿದ್ದರೆ, ಮುಸ್ಲಿಂ ನಾಗರಿಕನು ತನ್ನ ಆಸ್ತಿಯನ್ನು ವಕ್ಫ್‌ಗೆ ದಾನ ಮಾಡುವ ಸ್ವಾತಂತ್ರ್ಯವನ್ನು ಇದು ಉಲ್ಲಂಘಿಸುತ್ತದೆ. ಈ ತಿದ್ದುಪಡಿಗಳು ಇತರ ಧಾರ್ಮಿಕ ಸಂಸ್ಥೆಗಳಿಗಿಂತ, ನಮ್ಮ ದತ್ತಿಗಳಿಗೆ ನೀಡಲಾದ ಹಕ್ಕುಗಳು ಮತ್ತು ರಕ್ಷಣೆ ಕಸಿದುಕೊಳ್ಳುವುದರಿಂದ ತಾರತಮ್ಯದಿಂದ ಕೂಡಿವೆ’ ಎಂದರು.
ವಕ್ಫ್ ಮಂಡಳಿಯ ಸದಸ್ಯರಾಗಲು ಮುಸ್ಲಿಮರಿಗೆ ಮಾತ್ರ ಅವಕಾಶ ಎಂಬ ಷರತ್ತು ತೆಗೆದುಹಾಕಲಾಗಿದೆ. ಈ ಬದಲಾವಣೆಗಳು ಮುಸ್ಲಿಮರು ತಮ್ಮದೇ ಆದ ಸಂಸ್ಥೆಗಳನ್ನು ಸ್ಥಾಪಿಸಲು, ನಡೆಸಲು ಮತ್ತು ನಿರ್ವಹಿಸಲು ವಂಚಿತರಾಗುವಂತೆ ಮಾಡುತ್ತಿವೆ. ಲೋಕಸಭೆ ಮತ್ತು ರಾಜ್ಯಸಭೆ ಅಂಗೀಕರಿಸಿದ ಎಲ್ಲ ವಿವಾದಾತ್ಮಕ ತಿದ್ದುಪಡಿ ರದ್ದುಗೊಳಿಸುವಂತೆ ಆಗ್ರಹಿಸಿದರು.
ಸಂಘಟನೆಯ ಸದಸ್ಯರಾದ ಅಫ್ಸರ್ ಸಯ್ಯದ್, ಫೈಸಿಯಾ ರೆಹಮಾನ್, ಜಹೀಲಾ ಇತರರು ಹಾಜರಿದ್ದರು.
ಸರ್ಕಾರವು ವಕ್ಫ್ ಭೂಮಿಯನ್ನು ಅತಿಕ್ರಮಿಸಿದ್ದರೆ ಈಗ ಅವರು ಮಾಲೀಕರಾಗಬಹುದು. ವಿವಾದವನ್ನು ನಿರ್ಧರಿಸುವ ಅಧಿಕಾರವು ಗೊತ್ತುಪಡಿಸಿದ ಅಧಿಕಾರಿಯ ಪರವಾಗಿ ಹೋಗುತ್ತದೆತಸ್ಮಾ ಫಿರ್ದೋಸ್ ಸಂಘಟನೆ ಸದಸ್ಯೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.